ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಭಾರತ ಮೊದಲ ಬಾರಿಗೆ 100 ಪದಕಗಳನ್ನು ದಾಟಿ 107ಕ್ಕೆ ಮುಟ್ಟಿದೆ. ಕೇಂದ್ರ ಸರಕಾರ ಪದಕ ಗೆಲ್ಲಬಲ್ಲ ಆ್ಯತ್ಲೀಟ್‌ಗಳನ್ನು ಗುರುತಿಸಿ, ಅವರ ತರಬೇತಿಗೆ ಕೋಟ್ಯಂತರ ರೂ. ಖರ್ಚು ಮಾಡಿದ್ದು ಈ ಸಾಧನೆಯಲ್ಲಿ ದೊಡ್ಡ ಪರಿಣಾಮ ಬೀರಿದೆ. ಕುಸ್ತಿಯೊಂದನ್ನು ಹೊರತುಪಡಿಸಿದರೆ ಭಾರತ ಎಲ್ಲ ವಿಭಾಗಗಳಲ್ಲೂ ಮಹತ್ವದ ಸಾಧನೆಯನ್ನೇ ಮಾಡಿದೆ. ಹೊಸಹೊಸ ಕ್ರೀಡೆಗಳಲ್ಲಿ ಪದಕಗಳನ್ನು ಪಡೆದುಕೊಂಡಿದೆ.
ಇಲ್ಲಿ ಹಲವಾರು ದಾಖಲೆಗಳೂ ನಿರ್ಮಾಣವಾಗಿವೆ. 72 ವರ್ಷಗಳ ಏಷ್ಯಾಡ್ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯರು 100 ಪದಕಗಳನ್ನು ಮುಟ್ಟಿದ್ದಾರೆ ಎನ್ನುವುದು; ದೇಶದಲ್ಲಿ ಹೊಸ ಕ್ರೀಡಾಕ್ರಾಂತಿ ಜರಗುತ್ತಿದೆ ಎನ್ನುವುದರ ಸ್ಪಷ್ಟ ಸಂಕೇತ. ಬಹುಶಃ ಇಷ್ಟು ವರ್ಷಗಳ ಭಾರತೀಯರ ಕೊರಗು ಇನ್ನು ಮುಂದೆ ಕಡಿಮೆಯಾಗುತ್ತ ಹೋಗಬಹುದು. ಒಲಿಂಪಿಕ್ಸ್‌ನಲ್ಲೂ ಭಾರತ ಇನ್ನೊಂದು ಎತ್ತರಕ್ಕೆ ಹೋಗಬಹುದು. 2021ರಲ್ಲಿ ಜಪಾನಿನ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ ಮೊದಲ ಬಾರಿಗೆ, ಚಿನ್ನ-ಬೆಳ್ಳಿ-ಕಂಚು ಮೂರೂ ಪದಕಗಳನ್ನು ಗೆದ್ದಿತ್ತು. ಅದಕ್ಕೂ ಮುನ್ನ ಮೂರೂ ಪದಕಗಳು ಒಂದೇ ಕೂಟದಲ್ಲಿ ಭಾರತಕ್ಕೆ ಬಂದಿದ್ದೇ ಇಲ್ಲ!
2018ರ ಜಕಾರ್ತಾ ಏಷ್ಯಾಡ್‌ನಲ್ಲಿ ಭಾರತ 16 ಚಿನ್ನದೊಂದಿಗೆ 70 ಪದಕಗಳನ್ನು ಗೆದ್ದಿತ್ತು. ಈ ಬಾರಿ 28 ಚಿನ್ನ , 38 ಬೆಳ್ಳಿ , 41 ಕಂಚು ಲಭಿಸಿದೆ. ಈ ಲೆಕ್ಕಾಚಾರದಲ್ಲಿ ಭಾರತ ಭಾರೀ ಏರಿಕೆ ಸಾಧಿಸಿದೆ. ಹಾಗಂತ ಸ್ಥಾನಗಳನ್ನು ಪರಿಗಣಿಸಿದರೆ ಇದು ಭಾರತದ ಶ್ರೇಷ್ಠ ಸಾಧನೆಯಲ್ಲ! 1951ರಲ್ಲಿ ದಿಲ್ಲಿಯಲ್ಲಿ ಮೊದಲ ಬಾರಿಗೆ ಏಷ್ಯಾಡ್ ನಡೆದಾಗ ಭಾರತ 2ನೇ ಸ್ಥಾನ ಗಳಿಸಿತ್ತು. 1962ರ ಜಕಾರ್ತಾ ಏಷ್ಯಾಡ್‌ನಲ್ಲಿ 3ನೇ ಸ್ಥಾನ ಗಳಿಸಿತ್ತು. ಈ ಬಾರಿ 4ನೇ ಸ್ಥಾನ ಗಳಿಸಿದೆ. ಹಾಗಾಗಿ ಇದು 3ನೇ ಶ್ರೇಷ್ಠ ಸಾಧನೆಯಾಗಿದೆ. ಈ ಹಿಂದೆ ಭಾರತ 2, 3ನೇ ಸ್ಥಾನ ಪಡೆದಿದ್ದರೂ ಆಗ ಪದಕಗಳ ಸಂಖ್ಯೆ ಬಹಳ ಕಡಿಮೆಯಿತ್ತು. ಈ ಬಾರಿ ಪದಕಗಳ ಸಂಖ್ಯೆಯಲ್ಲಿ ಏರಿಕೆಯಾಗಿರುವುದನ್ನು ಬಹಳ ಸೂಕ್ಷ್ಮವಾಗಿಯೇ ಗಮನಿಸಬೇಕಾಗುತ್ತದೆ. ಭಾರತದ ಕ್ರೀಡಾವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಿರುವುದೇ ಇದಕ್ಕೆ ಕಾರಣ. ಪದಕ ಗೆಲ್ಲಬಲ್ಲ ಉತ್ಸಾಹಿ ಕ್ರೀಡಾಪಟುಗಳಿಗೆ ಪ್ರಸ್ತುತ ಅತ್ಯುತ್ತಮ ತರಬೇತಿಯನ್ನು ಸರಕಾರವೇ ನೀಡುತ್ತಿದೆ. ಅದಕ್ಕೆ ಬೇಕಾದ ವಿದೇಶಿ ಕೋಚ್‌ಗಳು, ಹಣವನ್ನು ನೀಡುತ್ತಿದೆ. ಪ್ರತೀ ವರ್ಷ ಹೊಸಹೊಸ ಕ್ರೀಡಾಪಟುಗಳನ್ನು ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆಯಡಿ ಸೇರಿಸಿಕೊಳ್ಳಲಾಗುತ್ತಿದೆ. ಇದರಿಂದ ಆ್ಯತ್ಲೀಟ್‌ಗಳಿಗೆ ಒಂದು ಹೊಸ ಭರವಸೆ ಬಂದಿದೆ. ಪ್ರಸ್ತುತ ಆ್ಯತ್ಲೀಟ್‌ಗಳು ತಮ್ಮ ಸಮಸ್ಯೆಯನ್ನು ಟ್ವೀಟ್ ಮಾಡಿದರೂ ಸಾಕು, ಅದನ್ನು ಗಮನಿಸಿ ಸರಿಪಡಿಸುವ ಮನೋಭಾವವಿದೆ.
ಹಿಂದೆ ಆ್ಯತ್ಲೀಟ್‌ಗಳು ವಿದೇಶಗಳಿಗೆ ಹೋಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಅವರ ಅಪ್ಪ-ಅಮ್ಮನೋ ತರಬೇತುದಾರರೋ ಸರಕಾರಗಳ ನೆರವಿಗಾಗಿ ಗೋಗರೆಯುತ್ತಿದ್ದರು. ಈಗ ಪರಿಸ್ಥಿತಿ ಸಾಕಷ್ಟು ಸುಧಾರಣೆಯಾಗಿದೆ. ಇದು ಹೀಗೆಯೇ ಮುಂದುವರಿದರೆ ಒಂದು ಬಲಿಷ್ಠ ಕ್ರೀಡಾಸಂಸ್ಕೃತಿ ಸಿದ್ಧವಾಗುತ್ತದೆ. ಆಗ ಒಲಿಂಪಿಕ್ಸ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಪದಕ ಗೆಲ್ಲುವುದೂ ದೊಡ್ಡ ವಿಷಯವಾಗುವುದಿಲ್ಲ. ಕಳೆದ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬಂದಿದ್ದು ಒಟ್ಟು 7 ಪದಕಗಳು ಮಾತ್ರ. ಮುಂದಿನ ಪ್ಯಾರಿಸ್‌ನಲ್ಲಿ ಆ ಸಂಖ್ಯೆ ದುಪ್ಪಟ್ಟಾಗುತ್ತದೆ ಎಂಬ ಭರವಸೆ ಈಗಾಗಲೇ ಬಂದಿದೆ.