Advertisement

ಭಾರತೀಯರಿಗೆ ಸಂಪರ್ಕ ಭಾಷೆ ಅಗತ್ಯ

01:28 AM Jul 15, 2019 | Lakshmi GovindaRaj |

ಬೆಂಗಳೂರು: ಭಾರತೀಯರು ಪರಸ್ಪರ ಸಂವಹನ ಸಾಧಿಸಲು ಸಂಪರ್ಕ ಭಾಷೆಯೊಂದರ ಅಗತ್ಯವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.

Advertisement

ರತ್ನ ಬುಕ್‌ ಹೌಸ್‌, ನಗರದ ಹೋಟೆಲ್‌ ಒಂದರಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಲ್ಲಿಕಾರ್ಜುನ ಹಿರೇಮಠ ಅವರ “ಹವನ’ ಕಾದಂಬರಿಯ ಇಂಗ್ಲಿಷ್‌ ಆವೃತ್ತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಪರ್ಕ ಭಾಷೆಯೊಂದು ಇಲ್ಲದ ಹಿನ್ನೆಲೆಯಲ್ಲಿ ತಮಿಳು, ತೆಲಗು ಸೇರಿದಂತೆ ಇನ್ನಿತರ ಭಾಷೆಯ ಜನರೊಂದಿಗೆ ಮಾತನಾಡಲು ಆಗುತ್ತಿಲ್ಲ. ಅವರೊಂದಿಗೆ ಸಂವಹನ ನಡೆಸಬೇಕಾದರೆ ಇಂಗ್ಲಿಷ್‌ ಬೇಕಾಗುತ್ತದೆ. ಆ ಹಿನ್ನೆಲೆಯಲ್ಲಿ ದೇಶದ ಇತರರೊಂದಿಗೆ ಸಂಪರ್ಕ ಸಾಧಿಸಲು, ಸಂಪರ್ಕ ಭಾಷೆಯೊಂದು ಅಗತ್ಯವಿದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಇಂಗ್ಲಿಷ್‌ ವ್ಯಾಮೋಹ ಹೆಚ್ಚಾಗಿದೆ. ಇದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಆಂಗ್ಲ ಭಾಷೆ ಕಲಿತವರೆಲ್ಲ ಬುದ್ಧಿವಂತರಲ್ಲ ಎಂಬುವುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಜತೆಗೆ ಮಾತೃ ಭಾಷೆಯಲ್ಲೇ ಶಿಕ್ಷಣ ಪಡೆದರೆ ಮಕ್ಕಳ ಸೃಜನಶೀಲತೆ ಹೆಚ್ಚಾಗಲಿದೆ ಎಂಬುವುದನ್ನು ಅರಿಯಬೇಕು ಎಂದರು.

ಭಾರತದಲ್ಲಿ ಆಳ್ವಿಕೆ ನಡೆಸಿದ ಆಂಗ್ಲರು ನಮ್ಮಲ್ಲಿ ಕೀಳರಿಮೆ ಬೆಳಸಿದರು. ಹಾಗಾಗಿಯೇ ಬ್ರಿಟಿಷರು ಹೇಳಿದ ಎಲ್ಲದಕ್ಕೂ ನಮ್ಮ ಹಿರಿಯರು ತಲೆದೂಗಿದರು. ನಮ್ಮ ಆಯುರ್ವೇದ ಶ್ರೇಷ್ಠವಾಗಿದ್ದರೂ, ಇಂದಿಗೂ ಕೂಡ ಇಂಗ್ಲಿಷ್‌ ಔಷಧ ಶ್ರೇಷ್ಠ ಎಂದು ಕೊಂಡಿದ್ದೇವೆ ಎಂದು ಹೇಳಿದರು.

Advertisement

ಮಲ್ಲಿಕಾರ್ಜುನ ಹಿರೇಮಠ ಅವರ ಕನ್ನಡ “ಹವನ’ ಕಾದಂಬರಿ, ಇಂಗ್ಲಿಷ್‌ಗೆ ಅನುವಾದ ಆಗಿರುವುದು ಖುಷಿ ಕೊಟ್ಟಿದೆ. ಎಲ್ಲಾ ಭಾಷೆ ಜನರಿಗೂ ಇದು ತಲುಪಲಿ ಎಂದು ಆಶಿಸಿದರು.

ಹಿರಿಯ ವಿಮರ್ಶಕ ಡಾ.ಸಿ.ಎನ್‌.ರಾಮಚಂದ್ರನ್‌ ಮಾತನಾಡಿ, ಹವನ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಸೇರಿದಂತೆ ಹತ್ತಾರು ಪ್ರಶಸ್ತಿಗಳು ಸಿಗಬೇಕಾಗಿತ್ತು.ಆದರೆ ಪ್ರಕಾಶಕರು ಮಾಡಿದ ಕೆಲವು ತಪ್ಪುಗಳಿಂದಾಗಿ ಈ ಕಾದಂಬರಿ ಓದುಗರ ಕೈಗೆ ತಲುಪಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಂಗ್ಲ ಭಾಷೆ ಪ್ರಕಾಶರು, ಈ ಕಾದಂಬರಿಗೆ ನ್ಯಾಯ ನೀಡಿದ್ದಾರೆ.ಅನುವಾದಕರು ಕೂಡ ಮೂಲ ವಸ್ತುವಿಗೆ ಚ್ಯುತಿಬಾರದ ಹಾಗೇ ಅನುವಾದ ಮಾಡಿದ್ದಾರೆ ಎಂದು ಪ್ರಶಂಸಿದರು.

ಕಾದಂಬರಿ ಕುರಿತು ಮಾತನಾಡಿದ ಲೇಖಕ ಡಾ.ಟಿ.ಪಿ.ಅಶೋಕ್‌ , ಹವನ ಕಾದಂಬರಿ ಬಂಜಾರ ಸಮುದಾಯವನ್ನು ಕುರಿತ ಕಥೆ ಹೊಂದಿದ್ದು ಆಧುನೀಕ ಭಾರತದ ತಲ್ಲಣಗಳು ಇದರಲ್ಲಿ ಅಡಗಿವೆ ಎಂದು ಹೇಳಿದರು. ರತ್ನ ಬುಕ್‌ ಹೌಸ್‌ನ ಶ್ರೀಧರ್‌ ಬಾಲನ್‌, ಡಾ.ವಿಜಯ ವಾಮನ್‌, ಕಾದಂಬರಿಕಾರ ಮಲ್ಲಿಕಾರ್ಜುನ ಹಿರೇಮಠ, ಅನುವಾದಕ ಎಸ್‌.ಮೋಹನ್‌ ರಾಜ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next