Advertisement
ಯಾವುದೇ ಡ್ಯಾನ್ಸ್ ಫ್ಲೋರ್‌ನ ಮೇಲಾಗಲಿ, ಸುಂದರ ನೃತ್ಯ ಪ್ರದರ್ಶನ ನೀಡಬೇಕೆಂದರೆ, ಪಾಲ್ಗೊಂಡ ಇಬ್ಬರೂ ನೃತ್ಯಪಟುಗಳು ಪರಸ್ಪರರನ್ನು ತಳ್ಳುವುದು, ತಿವಿಯುವುದು ಮಾಡಬಾರದು. ಬದಲಾಗಿ, ಪರಸ್ಪರರಿಗೆ ಪೂರಕವಾಗಿ ಹೆಜ್ಜೆ ಹಾಕುತ್ತಾ, ಜತೆಗಿರುವವರ ಕ್ಷಮತೆ ಅದಮ್ಯವಾಗಿ ಹೊರಹೊಮ್ಮುವುದಕ್ಕೆ ಸಹಕರಿಸಬೇಕು. ಎರಡು ರಾಷ್ಟ್ರಗಳ ನಡುವಿನ ಸಂಬಂಧ ಸುಧಾರಣೆಯ ವಿಚಾರಕ್ಕೂ ಈ ಮಾತು ಅನ್ವಯವಾಗುತ್ತದಲ್ಲವೇ? ಕೇವಲ ‘ಸ್ವಾಭಾವಿಕ ಸಹಯೋಗಿ’ ಎಂದೋ ಅಥವಾ ‘ವ್ಯೂಹಾತ್ಮಕ ಪಾಲುದಾರರು’ ಎಂದೋ ಕರೆದುಬಿಟ್ಟರಾಗದು. ಆ ಪದಪುಂಜಗಳಿಗೆ ಸರಿಹೊಂದುವಂಥ ವರ್ತನೆಯೂ ಇರಬೇಕು.
Related Articles
Advertisement
ಸಾಮಾನ್ಯ ಜನರಿಗೆ ಅಷ್ಟಾಗಿ ತಿಳಿಯದ ಸಂಗತಿಯೆಂದರೆ, ಭಾರತ ಮತ್ತು ಅಮೆರಿಕ ನಡುವಿನ ಬಹುಸ್ಥರೀಯ ಮತ್ತು ಬಹು ಆಯಾಮದ ಸಂಬಂಧವು ಯಾವತ್ತಿಗೂ ಹೇಳಿಕೊಳ್ಳುವಷ್ಟು ಚೆನ್ನಾಗಿ ಇರಲೇ ಇಲ್ಲ. ಆದರೆ ಈಗ ಪರಿಸ್ಥಿತಿ ತುಂಬಾ ಸುಧಾರಿಸಿದೆ. ನವ ರೂಪ ಪಡೆದು ಬದಲಾಗಿದೆ. 2018ರಲ್ಲಿ ಎರಡೂ ರಾಷ್ಟ್ರಗಳ ನಡುವಿನ ‘ಸೇವೆಗಳ’ ದ್ವಿಪಕ್ಷೀಯ ವ್ಯಾಪಾರವು 141 ಶತಕೋಟಿ ಡಾಲರ್‌ಗಳಷ್ಟಿತ್ತು. ಕಳೆದ ಏಳು ವರ್ಷಗಳಲ್ಲಿ ಅಮೆರಿಕದ ರಕ್ಷಣಾ ಸಂಬಂಧಿ ರಫ್ತು ಗಮನಾರ್ಹವಾಗಿ ಹೆಚ್ಚಾಗಿದೆ. 300ಕ್ಕೂ ಹೆಚ್ಚು ಜಂಟಿ ಸೈನ್ಯಾಭ್ಯಾಸಗಳನ್ನು ನಡೆಸಿರುವ ಈ ರಾಷ್ಟ್ರಗಳ ನಡುವೆ ಬಾಹ್ಯಾಕಾಶ ಸಂಶೋಧನೆಯಿಂದ ಹಿಡಿದು, ಮಾನ್ಸೂನ್‌ನ ಮುನ್ಸೂಚನೆಯವರೆಗೆ. ಕೃಷಿ ಕ್ಷೇತ್ರದಿಂದ ಹಿಡಿದು ಶಿಕ್ಷಣ ಸುಧಾರಣೆಯವರೆಗೆ ಒಟ್ಟು 50ಕ್ಕೂ ಹೆಚ್ಚು ದ್ವಿಪಕ್ಷೀಯ ಒಪ್ಪಂದಗಳು ಆಗಿವೆ. ಹಿಂದೂ ಮಹಾಸಾಗರ-ಪೆಸಿಫಿಕ್ ಕ್ಷೇತ್ರದಲ್ಲಿ ಎರಡೂ ರಾಷ್ಟ್ರಗಳ ನಡುವಿನ ದೃಷ್ಟಿಕೋನ- ತಂತ್ರಗಳಲ್ಲಿ ತಾಳಮೇಳವಿದೆ. ಇನ್ನು ಅಮೆರಿಕ ಅಧ್ಯಕ್ಷರು ಮತ್ತು ಭಾರತೀಯ ಪ್ರಧಾನಮಂತ್ರಿಗಳ ನಡುವೆ ನಿರಂತರವಾಗಿ ಮಾತುಕತೆಗಳು ನಡೆದೇ ಇರುತ್ತವೆ. ಆದರೆ ಇವೆಲ್ಲದರ ನಡುವೆಯೇ ಅಧ್ಯಕ್ಷ ಟ್ರಂಪ್ ಏಕಾಏಕಿ ‘ಅದೇಕೆ ಹಾರ್ಲೇ ಡೇವಿಡ್ಸನ್ ಮೇಲಿನ ಆಮದು ಸುಂಕವನ್ನು ನೀವು ತಗ್ಗಿಸುತ್ತಿಲ್ಲ?’ ಎಂದು ಭಾರತವನ್ನು ಪ್ರಶ್ನಿಸುತ್ತಿರುತ್ತಾರೆ.
ಆದರೆ ಭಾರತದಲ್ಲಿ ಅಮೆರಿಕದಿಂದ ಹಾರ್ಲೇ ಡೇವಿಡ್‌ಸನ್ ತರಿಸಿಕೊಳ್ಳುವವರಿಗಿಂತ, ಆ ದೇಶದ ಬಾದಾಮಿ ಮತ್ತು ಆಕ್ರೋಟವನ್ನು ಸವಿಯುವವರ ಸಂಖ್ಯೆ ಅಧಿಕವಿದೆ. ದ್ವಿಚಕ್ರವಾಹನಗಳ ಮೇಲೆ ಅವಲಂಬಿತರಾಗಿರುವ ಕೋಟ್ಯಂತರ ಭಾರತೀಯರು ಹಾರ್ಲೆಯನ್ನು ಖರೀದಿಸುವುದಿಲ್ಲ. ಈ ಕಾರಣಕ್ಕಾಗಿಯೇ, ಏನೇ ಮಾಡಿದರೂ ಆ ಗಾಡಿ ಭಾರತದಲ್ಲಿ ಮಿಂಚಲಾರದು. ಸುಂಕ ತಗ್ಗಿಸುವುದೇ ಆದರೆ, ನಾವು, ಕೃಷಿ ಕ್ಷೇತ್ರವನ್ನು ಹೊರತುಪಡಿಸಿ ಅನ್ಯ ಕ್ಷೇತ್ರಗಳ ಉತ್ಪಾದನೆಗಳ ಮೇಲಿನ ಸುಂಕವನ್ನು ಕಡಿತಗೊಳಿಸಬೇಕು. ಏಕೆಂದರೆ, ರೈತರ ಸಮಸ್ಯೆಯೇ ಭಾರತದ ನಿಜವಾದ ಸಮಸ್ಯೆ. ಆ ಕ್ಷೇತ್ರದಲ್ಲಿ ವಿದೇಶಗಳಿಂದ ಸ್ಪರ್ಧೆ ಎದುರಾಗಲೇಬಾರದು. ಆದರೂ ವಿಶ್ವಶಕ್ತಿಯಾಗಿ ಬೆಳೆಯಲು ಆಕಾಂಕ್ಷೆ ಹೊಂದಿರುವ ದೇಶವೊಂದು ವಿದೇಶಿ ಶಕ್ತಿಗಳಿಂದ ತನ್ನ ಉದ್ಯಮ ಕ್ಷೇತ್ರವನ್ನು ಅತಿಯಾಗಿ ರಕ್ಷಿಸಬಾರದು. ಭಾರತದಲ್ಲಿ ದೂರಸಂಪರ್ಕ ಮತ್ತು ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಆಗಿರುವ ಬೃಹತ್ ಕ್ರಾಂತಿಗೆ ವಿದೇಶಿ ಕಂಪನಿಗಳ ಸ್ಪರ್ಧೆ(ಪಾಲು) ಕಾರಣ. ಪ್ರಿಫರೆನ್ಶಿಯಲ್ ನೇಷನ್(ಆದ್ಯತೆಯ ರಾಷ್ಟ್ರ)ದ ಸೌಲಭ್ಯಗಳನ್ನು ಪಡೆಯಲು ನಾವು ಅಮೆರಿಕದ ಮುಂದೆ ಮಂಡಿಯೂರಬೇಕಾದ ಅಗತ್ಯವೇನೂ ಇಲ್ಲ. ಏಕೆಂದರೆ ಈಗ ಭಾರತದ ಅರ್ಥವ್ಯವಸ್ಥೆ ಬಹಳ ಬಲಿಷ್ಠವಾಗಿದೆ. ಅದು 1975ರಲ್ಲಿ ಇದ್ದಂತೆ ಇಲ್ಲ. ಇನ್ನೊಂದೆಡೆ, ಚೀನಾವು ತನ್ನ ಮೇಲೆ ಮೇಲೆ ವಿಧಿಸುತ್ತಿರುವ ಆರ್ಥಿಕ ಹೊರೆಯಿಂದ ತಪ್ಪಿಸಿಕೊಳ್ಳಲು, ಭಾರತಕ್ಕೆ ರಫ್ತು ಮಾಡುವ ತನ್ನ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿಬಿಟ್ಟಿದೆ. ಈ ಉತ್ಪನ್ನಗಳಿಗಾಗಿ ಚೀನಾದ ಮೇಲೆ ಅವಲಂಬಿತರಾಗದೇ, ಅನ್ಯ ಮೂಲಗಳನ್ನು ಹುಡುಕಿಕೊಳ್ಳುವ ಅಗತ್ಯವೂ ಇದೆ.
ಏನೇ ಇದ್ದರೂ, ಈಗ ಭಾರತ ಮತ್ತು ಅಮೆರಿಕ ಗತಕಾಲದ ಕರಿ ನೆರಳಿನಿಂದ ಹೊರಬಂದಿವೆ ಎನ್ನುವುದಂತೂ ಸತ್ಯ. ಭಾರತ ಮತ್ತು ಅಮೆರಿಕ ಸಂಸ್ಥಾನ ಅನೇಕ ಸಂದರ್ಭಗಳಲ್ಲಿ ಪರಸ್ಪರರಿಗೆ ಸಹಾಯ ಮಾಡಿವೆ. ಅಲ್ಲದೇ ತಮ್ಮ ಸಂಬಂಧವನ್ನೂ ಉತ್ತಮಪಡಿಸಿಕೊಂಡಿವೆ. ಇದು ಎರಡೂ ರಾಷ್ಟ್ರಗಳ ನಾಯಕರ ನಡುವಿನ ಕಾನ್ಫಿಡೆನ್ಸ್‌ನಲ್ಲಿ, ಅಪ್ರೋಚ್‌ನಲ್ಲಿ ಕಾಣಿಸುತ್ತದೆ. ಹೀಗಾಗಿ, ಜವಾಬ್ದಾರಿಯುತ ಸಹಭಾಗಿಗಳಾಗಿ ಎರಡೂ ರಾಷ್ಟ್ರಗಳು ಪರಸ್ಪರರ ಕಾಳಜಿ ಮಾಡಬೇಕಿರುವುದು ಇಂದಿನ ತುರ್ತು.
ಭಾರತದ ಇಂಧನ ಭದ್ರತೆಗೆ ಇರಾನ್‌ನ ತೈಲ ಅತ್ಯವಶ್ಯಕವಾದದ್ದು. ಈ ವಿಚಾರದಲ್ಲಿ ಅಮೆರಿಕ ಭಾರತಕ್ಕೆ ತೊಂದರೆಯಾಗುವಂಥ ನಿಲುವು ತಾಳುವುದು ಸರಿಯಲ್ಲ. ಇದಷ್ಟೇ ಅಲ್ಲದೆ, ಭಾರತ ಮತ್ತು ಇರಾನ್‌ನ ನಡುವೆ ಇತರೆ ವಿಷಯಗಳಲ್ಲೂ ಗಾಢ ಬಂಧವಿದೆ. ಇನ್ನು ರಷ್ಯಾದ ಎಸ್-400 ಏರ್‌ಕ್ರಾಫ್ಟ್ ಕೂಡ ಭಾರತದ ರಾಷ್ಟ್ರೀಯ ಭದ್ರತೆಗೆ ಅತ್ಯಮೂಲ್ಯವಾದದ್ದು ಎನ್ನುವುದನ್ನು ಅಮೆರಿಕ ಮರೆಯಬಾರದು.
ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರದ ಸ್ಥಾನದಿಂದ ಮೇಲಕ್ಕೊಯ್ದು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸಬೇಕೆಂಬ ಮೋದಿಯವರ ದೃಷ್ಟಿಕೋನವು ಸಫಲವಾಗಬೇಕೆಂದರೆ, ಅಮೆರಿಕದೊಂದಿಗಿನ ನಿಕಟ ಸಂಬಂಧ ಅತ್ಯವಶ್ಯಕವಾದದ್ದು. ಇದರಿಂದಾಗಿ ಭಾರತದ ಜಾಗತಿಕ ಮಹತ್ವಾಕಾಂಕ್ಷೆಗಳಿಗೂ ಬಲ ದೊರಕಿದಂತಾಗುತ್ತದೆ. ಆದರೆ ಅಮೆರಿಕದ ಜತೆ ದೋಸ್ತಿ ಸರಿದೂಗಿಸುವುದಕ್ಕಾಗಿ ಭಾರತವು ತನ್ನ ವ್ಯೂಹಾತ್ಮಕ ಸ್ವಾಯತ್ತತೆಯನ್ನು ಕಳೆದುಕೊಳ್ಳಬೇಕೇ? ದೇಶದ ಭದ್ರತಾ ಅಗತ್ಯಗಳನ್ನು ಮರೆತುಬಿಡಬೇಕೇ? ಎನ್ನುವ ಪ್ರಶ್ನೆಗಳೂ ಎದುರಾಗುತ್ತದೆ. ಹಾಗೆ ಮಾಡುವುದು ಮಾತ್ರ ಬಹಳ ತಪ್ಪು ಹೆಜ್ಜೆಯಾಗುತ್ತದೆ.
ಸುರೇಂದ್ರ ಕುಮಾರ್ ಇಂಡೋ-ಅಮೆರಿಕ ಫ್ರೆಂಡ್‌ಶಿಪ್ ಅಸೋಸಿಯೇಷನ್ ಅಧ್ಯಕ್ಷ