Advertisement
ನ್ಯೂಯಾರ್ಕ್‌ನಲ್ಲಿ ಮಾತನಾಡಿದ ಅವರು, ಆ ದೇಶದಲ್ಲಿ ಉಂಟಾಗುತ್ತಿರುವ ಪ್ರತೀ ಬೆಳವಣಿಗೆಗಳ ಬಗ್ಗೆ ಕೇಂದ್ರ ಸರಕಾರ ಗಮನ ಇರಿಸಿದೆ. ಸದ್ಯದ ಮಟ್ಟಿಗೆ ಅಲ್ಲಿ ಇರುವ ಭಾರತೀಯ ಮೂಲದ ನಾಗರಿಕರನ್ನು ಸುರಕ್ಷಿತವಾಗಿ ಕರೆತರುವುದೇ ಆದ್ಯತೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸದಸ್ಯರ ಜತೆಗೆ ಸಮಾಲೋಚನೆ ಬಳಿಕ ತಿಳಿಸಿದ್ದಾರೆ.
Related Articles
Advertisement
ಸಿಕ್ಖರಿಗೆ ತಾಲಿಬಾನಿಗರ ಅಭಯ! ಅಫ್ಘಾನಿಸ್ಥಾನದಲ್ಲಿರುವ ಹಿಂದೂಗಳಿಗೆ ಹಾಗೂ ಸಿಕ್ಖರಿಗೆ ಯಾವುದೇ ರೀತಿಯ ತೊಂದರೆ ಕೊಡುವುದಿಲ್ಲ ಎಂದು ತಾಲಿ ಬಾನಿಗಳು ವಾಗ್ಧಾನ ಮಾಡಿದ್ದಾರೆಂದು ಕಾಬೂಲ್‌ನ ಗುರುದ್ವಾರದ ಮುಖ್ಯಸ್ಥ ತಿಳಿಸಿದ್ದಾರೆ. ಈ ಕುರಿತಂತೆ ಗುರುದ್ವಾರದ ಮುಖ್ಯಸ್ಥರು ನೀಡಿರುವ ಹೇಳಿಕೆಯಿ ರುವ ವೀಡಿಯೋವನ್ನು ತಾಲಿಬಾನ್ ಸಂಘಟನೆಯ ರಾಜಕೀಯ ವ್ಯವಹಾರಗಳ ವಿಭಾಗದ ವಕ್ತಾರ ಎಂ. ನಯೀಮ್ ಎಂಬಾತ ಬಿಡುಗಡೆ ಮಾಡಿದ್ದಾನೆ.
ಅದನ್ನು ಹೊಸದಿಲ್ಲಿಯಲ್ಲಿರುವ ಸಿಕ್ಖ್ ಗುರುದ್ವಾರದ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಅಕಾಲಿ ದಳದ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಅವರು ತಮ್ಮ ಟ್ವಿಟರ್ ಖಾತೆಯ ಮೂಲಕ ಹಂಚಿಕೊಂಡಿದ್ದು, “ನಾವು ಕಾಬೂಲ್ ಗುರುದ್ವಾರದೊಂದಿಗೆ ಸಂಪರ್ಕದಲ್ಲಿದ್ದೇವೆ. ತಾಲಿಬಾನ್ ನಾಯಕರು ಗುರುದ್ವಾರಕ್ಕೆ ಆಗಮಿಸಿ, ಹಿಂದೂಗಳಿಗೆ, ಸಿಕ್ಖರಿಗೆ ಅಭಯ ನೀಡಿರುವುದು ಸತ್ಯ’ ಎಂದಿದ್ದಾರೆ.
ಮಹಿಳೆಯರಿರುವ ಪೋಸ್ಟರ್‌ಗೆ ಮಸಿ :
ಕಾಬೂಲ್ ನಗರದಾದ್ಯಂತ ಇದ್ದ ಮಹಿಳೆಯರ ಸೌಂದರ್ಯವರ್ಧಕ ಸಂಬಂಧಿಸಿದ ಜಾಹೀರಾತುಗಳನ್ನು ತೆರವುಗೊಳಿಸುವ ಕಾರ್ಯ ಶುರು ವಾಗಿದೆ. ಅದಕ್ಕೆ ಕಾರಣ ಅವುಗಳಲ್ಲಿರುವ ಮಹಿಳೆಯರ ಫೋಟೋ ಗಳು. ಕಟ್ಟಾ ಸಂಪ್ರದಾಯವಾದಿಗಳಾದ ತಾಲಿಬಾನಿಗಳ ಆಡಳಿತದಲ್ಲಿ ಇಂಥ ಪೋಸ್ಟರ್‌ಗಳಿಗೆ, ಅವಕಾಶವಿರುವುದಿಲ್ಲ. ಹಾಗಾಗಿ ಅಂಥ ಪೋಸ್ಟರ್‌ಗಳ ಮೇಲೆ ಬಿಳಿ ಸುಣ್ಣ ಬಳಿಯುವ ಮೂಲಕ ಅವುಗಳನ್ನು ಮರೆಮಾಚಲಾಗುತ್ತಿದೆ. ಇನ್ನೂ ಕೆಲವಡೆ ಆ ಮಹಿಳೆಯರ ಭಾವಚಿತ್ರ ಗಳಿರುವ ಜಾಹೀರಾತು ಫಲಕಗಳನ್ನು ಧ್ವಂಸ ಮಾಡಲಾಗುತ್ತಿದೆ. 2001ರಲ್ಲಿ ಅಮೆರಿಕ ಪಡೆಗಳು ಅಫ್ಘಾನಿಸ್ಥಾನದಲ್ಲಿ ತಮ್ಮ ಬೆಂಬಲಿತ ಸರಕಾರವನ್ನು ಅಸ್ತಿತ್ವಕ್ಕೆ ತಂದ ಅನಂತರ ಅಲ್ಲಿ ಮಹಿಳೆಯರಿಗೆ ಸ್ವಾತ್ರಂತ್ರ್ಯ ಸಿಕ್ಕಿತ್ತು. ಕಾಬೂಲಿನಲ್ಲಿ ಈ ಹಿಂದೆ ತಾಲಿಬಾನಿಗರಿಂದ ಮುಚ್ಚಲ್ಪಟ್ಟಿದ್ದ ಬ್ಯೂಟಿಪಾರ್ಲರ್‌ಗಳು ಮತ್ತೆ ನಳನಳಿಸಲಾರಂಭಿಸಿದ್ದವು.
ಚಪ್ಪಲಿ ಬದಲಿಸಲೂ ಬಿಡದೇ ಹೊರದಬ್ಬಿದರು :
ಅಬುಧಾಬಿ: “ನನ್ನನ್ನು ಅಫ್ಘಾನಿಸ್ಥಾನದಿಂದ ಹೊರಹಾಕಲಾಯಿತು. ಕಾಲಿಗೆ ಹಾಕಿಕೊಂಡಿದ್ದ ಚಪ್ಪಲಿ ತೆಗೆದು, ಶೂಗಳನ್ನು ಹಾಕಿಕೊಳ್ಳಲೂ ಪುರುಸೊತ್ತು ಕೊಡದೆ, ಯುಎಇಗೆ ದಬ್ಬಲಾಯಿತು’ ಎಂದು ಅಫ್ಘಾನಿಸ್ಥಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಹೇಳಿದ್ದಾರೆ. ನನ್ನ ಹಿತಾಸಕ್ತಿಗಾಗಿ ದೇಶಬಿಟ್ಟು ಓಡಿಹೋದೆ, ದೇಶದ ಬೃಹತ್ ಮೊತ್ತದ ಹಣವನ್ನು ವಿದೇಶಕ್ಕೆ ರವಾನಿಸಿದೆ ಎನ್ನುವುದೆಲ್ಲ ಸುಳ್ಳು ಎಂದು ಹೇಳಿದ್ದಾರೆ. ಅವರು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ ವೀಡಿಯೋ ಸಂದೇಶ ದಲ್ಲಿ ಅವರು ಈ ಅಂಶ ಪ್ರಸ್ತಾವಿಸಿದ್ದಾರೆ. “ನಾನು ದೇಶಭ್ರಷ್ಟನಂತೆ ಯುಎಇಯಲ್ಲಿ ಇರಲು ಬಯಸುವುದಿಲ್ಲ. ಸಾಧ್ಯವಾದಷ್ಟು ಬೇಗ ಮರಳುತ್ತೇನೆ. ನಾನಿದ್ದರೆ ದೇಶದಲ್ಲಿ ರಕ್ತಪಾ ತವಾಗುತ್ತಿತ್ತು. ಇನ್ನೊಬ್ಬ ಅಧ್ಯಕ್ಷ ಅಫ್ಘಾನ್ನರ ಕಣ್ಣೆದುರೇ ನೇಣಿಗೇರಿಸಲ್ಪ ಡುತ್ತಿದ್ದದ್ದು ಖಚಿತವಾಗಿತ್ತು. ಅಂತಹ ಸ್ಥಿತಿಯನ್ನು ತಡೆಯುವ ಉದ್ದೇಶದಿಂದ ಸದ್ಯ ಯುಎಇಯಲ್ಲಿ ಉಳಿದುಕೊಂಡಿದ್ದೇನೆ. ತಾಲಿಬಾನ್ ಮತ್ತು ಅಫ್ಘಾನ್‌ನ ನಾಯಕರ ನಡುವಿನ ಮಾತುಕತೆಗೆ ಬೆಂಬಲ ನೀಡುತ್ತೇನೆ’ ಎಂದು ಘನಿ ಹೇಳಿಕೊಂಡಿದ್ದಾರೆ.
ವಿಮಾನದಿಂದ ಬಿದ್ದದ್ದು ಫುಟ್ಬಾಲ್ ಆಟಗಾರ :
ಕಾಬೂಲ್ ವಿಮಾನನಿಲ್ದಾಣದಿಂದ ಟೇಕಾಫ್ ಆಗುತ್ತಿರುವ ಅಮೆರಿಕದ ಸಿ-17 ಜೆಟ್‌ನಿಂದ ಸೋಮವಾರ ಬಿದ್ದ ಇಬ್ಬರು ವ್ಯಕ್ತಿಗಳ ಪೈಕಿ ಒಬ್ಬನ ಗುರುತು ಪತ್ತೆಯಾಗಿದೆ. ಅವರನ್ನು ಅಫ್ಘಾನ್‌ನ ಫುಟ್‌ಬಾಲ್ ರಾಷ್ಟ್ರೀಯ ಯುವ ತಂಡದ ಮಾಜಿ ಸದಸ್ಯ ಜಕಿ ಅನ್ವಾರಿ (19) ಎಂದು ಗುರುತಿಸಲಾಗಿದೆ. . ಜಕಿಯ ಸಾವನ್ನು ಅಫ್ಘಾನ್ ದೈಹಿಕ ಶಿಕ್ಷಣ ಮತ್ತು ಕ್ರೀಡೆಗಳ ನಿರ್ದೇಶನಾಲಯ ದೃಢೀಕರಿಸಿದೆ. ಅನ್ವಾರಿ ಮತ್ತು ಇನ್ನೊಬ್ಬ ವ್ಯಕ್ತಿ ವಿಮಾನದಿಂದ ನೇರವಾಗಿ ಭದ್ರತಾ ಸಿಬಂದಿಯೊಬ್ಬರ ಮನೆಯೊಂದರ ಛಾವಣಿಗೆ ಬಿದ್ದಿದ್ದಾರೆ. ಆ ರಭಸಕ್ಕೆ ದೇಹಗಳು ಛಿದ್ರವಾಗಿತ್ತು. ಮನೆಯಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಮತ್ತು ಆತನ ಪತ್ನಿ ಛಾವಣಿಗೆ ಬಂದು ನೋಡಿದಾಗ ಅವರಿಗೆ ಆಘಾತ ಕಾದಿತ್ತು. ಭೀಕರ ರೀತಿಯಲ್ಲಿ ಚದುರಿ ಬಿದ್ದಿದ್ದ ಮೃತದೇಹಗಳನ್ನು ನೋಡಿ ಭದ್ರತಾ ಸಿಬಂದಿಯ ಪತ್ನಿ ಆಘಾತದಿಂದ ಎಚ್ಚರ ತಪ್ಪಿ ಬಿದ್ದ ಘಟನೆಯೂ ನಡೆದಿದೆ.
ಅಫ್ಘಾನ್, ಭಾರತದಲ್ಲಿ ಲಷ್ಕರ್, ಜೈಶ್ ಸಕ್ರಿಯ :
ಉಗ್ರ ಸಂಘಟನೆಗಳಾಗಿರುವ ಲಷ್ಕರ್-ಎ-ತಯ್ಯಬಾ, ಜೈಶ್-ಎ-ಮೊಹಮ್ಮದ್‌ಗೆ ಪಾಕಿಸ್ಥಾನದ ವತಿಯಿಂದ ನಿರಂತರ ಪ್ರೋತ್ಸಾಹ ಮುಂದುವರಿದಿದೆ. ಅವರು ಅಫ್ಘಾನಿಸ್ಥಾನ ಮತ್ತು ಭಾರತದಲ್ಲಿ ತಮ್ಮ ಕುತ್ಸಿತ ಚಟುವಟಿಕೆಗಳನ್ನು ಮುಂದುವರಿಸಿದ್ದಾರೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಆರೋಪಿಸಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, “ಭಾರತದ ನೆರೆಯಲ್ಲಿಯೇ ಐಎಸ್‌ಐಎಲ್-ಖೊರೊಸಾನ್ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿದೆ. ಅದು ತನ್ನ ಚಟುವಟಿಕೆಗಳನ್ನು ಮತ್ತಷ್ಟು ಬಿರುಸುಗೊಳಿಸಲು ಪ್ರಯತ್ನ ನಡೆಸುತ್ತಿದೆ. ಭಾರತದಲ್ಲಿ ಅಥವಾ ಅಫ್ಘಾನಿಸ್ಥಾನದಲ್ಲಿಯೇ ಆಗಲಿ, ಪಾಕಿಸ್ಥಾನದಿಂದ ಪ್ರೋತ್ಸಾಹ ಪಡೆಯುತ್ತಿರುವ ಲಷ್ಕರ್-ಎ-ತಯ್ಯಬಾ ಮತ್ತು ಜೈಶ್ ಸಂಘಟನೆಗಳು ತಮ್ಮ ಕುತ್ಸಿತ ಬುದ್ಧಿಯನ್ನು ಮುಂದು ವರಿಸಿವೆ’ ಎಂದು ಆರೋಪಿಸಿದರು. ಹೀಗಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಲು ಆಯ್ಕೆಯ ನಿರ್ಣಯವನ್ನು ಮಾಡಲೇಬಾರದು ಎಂದು ಒತ್ತಾಯಿಸಿದ್ದಾರೆ. ಉಗ್ರ ಸಂಘಟನೆಗಳಿಗೆ ಹೆಚ್ಚಿನ ರೀತಿಯಲ್ಲಿ ಸವಲತ್ತುಗಳು ಸಿಗದಂತೆ ತಡೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಭಯೋತ್ಪಾದಕರು ಭಯೋತ್ಪಾದಕರೇ ಎಂದು ಹೇಳಿದ ಜೈಶಂಕರ್ ಅವರ ವಿಚಾರದಲ್ಲಿ ಪ್ರತ್ಯೇಕತೆ ಬೇಡ ಎಂದು ಹೇಳಿದ್ದಾರೆ. ಹಕ್ಕಾನಿ ನೆಟ್‌ವರ್ಕ್‌ನ ಹೆಚ್ಚುತ್ತಿರುವ ಬೆಳವಣಿಗೆ ನಿಜಕ್ಕೂ ಆತಂಕಕಾರಿಯಾಗಿದೆ. ಅಫ್ಘಾನಿಸ್ಥಾನದಲ್ಲಿ ಸದ್ಯದ ಬೆಳವಣಿಗೆಗಳು ಆತಂಕಕಾರಿಯೇ ಆಗಿದೆ ಎಂದು ಜೈಶಂಕರ್ ಕಟುವಾಗಿ ಪ್ರತಿಪಾದಿಸಿದ್ದಾರೆ.
ಮಹಿಳಾ ಆ್ಯಂಕರ್‌ಗೆ ಆಫೀಸಿಗೆ ನೋ ಎಂಟ್ರಿ :
ತಾಲಿಬಾನ್ ಕಾಬೂಲ್‌ನ್ನು ವಶಪಡಿಸಿಕೊಂಡ ಅನಂತರ ನನ್ನನ್ನು ಕೆಲಸದಿಂದ ತೆಗೆದುಹಾಕಿದ್ದಾರೆ ಎಂದು ಕಾಬೂಲ್‌ನಲ್ಲಿ ಕಾರ್ಯನಿರ್ವಹಿಸು ತ್ತಿರುವ ಆರ್‌ಟಿಎ ಪಶೊ¤à ಎಂಬ ಸುದ್ದಿವಾಹಿನಿಯ ಆ್ಯಂಕರ್ ಶಬ್ನಮ್ ದರ್ವಾನ್ ಅಲ್ಲಿನ ನೈಜ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ. ನಾನು ಸರಕಾರಿ ಮಾಧ್ಯಮವಾಗಿರುವ ಆರ್‌ಟಿಎ ಪಾಸ್ಟೋನಲ್ಲಿ ಆ್ಯಂಕರ್ ಆಗಿ ಕೆಲಸ ಮಾಡುತ್ತಿದ್ದೆ. ತಾಲಿಬಾನಿಗಳು ದೇಶವನ್ನು ವಶಪಡಿಸಿಕೊಂಡ ಅನಂತರ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಕೆಲಸಕ್ಕೆ ಯಾವುದೇ ಅಡ್ಡಿ ಮಾಡುವುದಿಲ್ಲ ಎಂದು ಹೇಳಿದ್ದರು. ಅದರಂತೆ ನಾನು ಆಫೀಸಿಗೆ ಹೋದರೆ ನನ್ನನ್ನು ಆಫೀಸಿನ ಒಳಗೇ ಬಿಡಲಿಲ್ಲ. ನೀನು ಹೆಣ್ಣು, ಮನೆಯಲ್ಲಿರು ಹೋಗು ಎಂದು ಕಳುಹಿಸಿದರು. ಐಡಿ ಕಾರ್ಡ್ ತೋರಿಸಿದರೂ ಒಳಗೆ ಬಿಡಲಿಲ್ಲ ಎಂದು ಹೇಳಿದ್ದಾರೆ. ಖಾಸಗಿ ಮಾಧ್ಯಮಗಳಲ್ಲಿ ಈ ಪರಿಸ್ಥಿತಿಯಿಲ್ಲ. ಸರಕಾರಿ ಸಂಸ್ಥೆಗಳಲ್ಲಿ ಈ ನಿಯಮ ಪಾಲಿಸಲಾಗುತ್ತಿದೆ ಎಂದು ಆಕೆ ತಿಳಿಸಿದ್ದಾರೆೆ.
ಮಾಸಾಂತ್ಯಕ್ಕೆ ಸೇನೆ ವಾಪಸ್ ಕಷ್ಟ :
ವಾಷಿಂಗ್ಟನ್: ಮಾಸಾಂತ್ಯಕ್ಕೇ ಅಫ್ಘಾನಿಸ್ಥಾನದಿಂದ ಸೇನೆಯನ್ನು ಪೂರ್ಣ ಪ್ರಮಾಣದಲ್ಲಿ ವಾಪಸ್ ಕರೆಯಿಸಿಕೊಳ್ಳಲು ಅಸಾಧ್ಯ. ಅಮೆರಿಕನ್ ಪ್ರಜೆಗಳನ್ನು ಮರಳಿ ಕರೆ ತರಲು ಸಮಯಾವಕಾಶ ಬೇಕು ಎಂದು ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಅಮೆರಿಕನ್ ಬ್ರಾಡ್
ಕಾಸ್ಟಿಂಗ್ ಕಾರ್ಪೋರೇಶನ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನಾಗರಿಕರ ಸುರಕ್ಷಿತ ವಾಪಸಾತಿಗಾಗಿ ಸದ್ಯ 15 ಸಾವಿರ ಮಂದಿ ಯೋಧರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಹೀಗಾಗಿ ಈಗಾಗಲೇ ಘೋಷಣೆ ಮಾಡಿದಂತೆ ಆ.31ಕ್ಕೆ ಪೂರ್ಣ ಪ್ರಮಾಣದ ಸೇನೆ ವಾಪಸಾತಿ ಸಾಧ್ಯವಿಲ್ಲ. ಈ ಗಡುವು ಮುಂದುವರಿಯಲಿದೆ ಎಂದರು.
ತಾಲಿಬಾನ್ ಬದಲಾವಣೆಯಾಗಿದೆ ಎಂಬ ವಾದವನ್ನು ಅಮೆರಿಕ ಅಧ್ಯಕ್ಷರು ತಿರಸ್ಕರಿಸಿದ್ದಾರೆ. ಯುದ್ಧಗ್ರಸ್ತ ರಾಷ್ಟ್ರದಿಂದ ಸೇನೆ ವಾಪಸಾತಿ ನಿರ್ಧಾರ ಸರಿಯಾದದ್ದೇ ಎಂಬ ಪ್ರಶ್ನೆಗೆ “ನಿರ್ಧಾರ ಸರಿಯಾಗಿದೆ’ ಎಂದು ಉತ್ತರಿಸಿದರು. ಅಮೆರಿಕ ವಿಮಾನದಿಂದ ಇಬ್ಬರು ಬೀಳುವ ಫೋಟೋ-ವೀಡಿಯೋ ಬಗ್ಗೆ ಪ್ರಶ್ನಿಸಿದಾಗ “ನಾವು ಪರಿಸ್ಥಿತಿಯ ಮೇಲೆ ಇನ್ನೂ ನಿಯಂತ್ರಣ ಸಾಧಿಸಬೇಕಾಗಿತ್ತು. ಕಾಬೂಲ್ ವಿಮಾನ ನಿಲ್ದಾಣ ಇನ್ನೂ ಅಮೆರಿಕ ಯೋಧರ ವಶ ದಲ್ಲಿಯೇ ಇದೆ’ ಎಂದರು.
ಮತ್ತೂಂದೆಡೆ, ಅಫ್ಘಾನಿಸ್ಥಾನ ಸರಕಾರದ ಜತೆಗೆ ಸಹಿ ಹಾಕಿದ್ದ ಎಲ್ಲ ರೀತಿಯ ರಕ್ಷಣ ಒಪ್ಪಂದಗಳನ್ನು ಅಮೆರಿಕ ಸರಕಾರ ರದ್ದುಗೊಳಿಸಿದೆ. ಈ ಬಗ್ಗೆ ರಕ್ಷಣ ಇಲಾಖೆಯ ಗುತ್ತಿಗೆದಾರರಿಗೆ ಸರಕಾರದ ವತಿಯಿಂದ ನೋಟಿಸ್ ನೀಡಲಾಗಿದೆ. ವಿವಿಧ ಹಂತಗಳಲ್ಲಿರುವ ಮತ್ತು ಜಾರಿಯ ಹಂತದಲ್ಲಿರುವ ರಕ್ಷಣ ಒಪ್ಪಂದಗಳಿಗೂ ಇದು ಅನ್ವಯ ಎಂದು ಅದರಲ್ಲಿ ಪ್ರಸ್ತಾವಿಸಲಾಗಿದೆ.