ಹೊಸದಿಲ್ಲಿ: ಜರ್ಮನಿಯ ಸುಹ್ಲನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್ ಕೂಟದ ವನಿತೆಯರ 25 ಮೀ. ಪಿಸ್ತೂಲ್ ವಿಭಾಗದಲ್ಲಿ ಭಾರತೀಯ ಶೂಟರ್‌ಗಳು ಕ್ಲೀನ್ ಸ್ವೀಪ್ ಸಾಧನೆ ಮಾಡಿದ್ದಾರೆ.
ಇದರಿಂದಾಗಿ ಪದಕಪಟ್ಟಿಯಲ್ಲಿ ತಮ್ಮ ಮುನ್ನಡೆಯನ್ನು ಮುಂದುವರಿಸಿದ್ದಾರೆ.
ರವಿವಾರ ನಡೆದ ಈ ಸ್ಪರ್ಧೆಯಲ್ಲಿ ರಿಥಮ್ ಸಂಗ್ವಾನ್ ಚಿನ್ನ ಗೆದ್ದರೆ ಮನು ಭಾಕರ್ ಬೆಳ್ಳಿ ಮತ್ತು ನಾಮ್ಯಾ ಕಪೂರ್ ಕಂಚು ಪಡೆದರು.
ಅರ್ಹತಾ ಸುತ್ತಿನಿಂದಲೇ ಈ ಮೂವರು ಭಾರತೀಯರು ಅಮೋಘ ನಿರ್ವಹಣೆ ನೀಡುತ್ತ ಬಂದಿದ್ದರು. ಅರ್ಹತಾ ಸುತ್ತು ಮುಗಿದಾಗ ಸಂಗ್ವಾನ್ 588 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ ಭಾಕರ್ (584) ದ್ವಿತೀಯ ಮತ್ತು ನಾಮ್ಯಾ (583) ಮೂರನೇ ಸ್ಥಾನದಲ್ಲಿದ್ದರು. ಎಲಿಮಿನೇಶನ್ ಸುತ್ತಿನಲ್ಲಿಯೂ ಮೂವರು ಉತ್ತಮ ನಿರ್ವಹಣೆ ನೀಡಿದ್ದರು.
ಪುರುಷರ 50 ಮೀ. ರೈಫಲ್ ತ್ರಿ ಪೊಸಿಸನ್‌ನಲ್ಲಿ ಶಿವಂ ದಬಾಸ್ ಬೆಳ್ಳಿ ಜಯಿಸಿದ್ದಾರೆ. ಫೈನಲ್‌ನಲ್ಲಿ ಅವರು ಇಟಲಿಯ ಡ್ಯಾನಿಲೊ ಸೊಲಾಝೊ ಅವರ ಕೈಯಲ್ಲಿ ಸೋತಿದ್ದರು. ಭಾರತ ಇಷ್ಟರವರೆಗೆ ಈ ಸ್ಪರ್ಧೆಯಲ್ಲಿ 9 ಚಿನ್ನ, 10 ಬೆಳ್ಳಿ ಮತ್ತು ಒಂದು ಕಂಚಿನ ಪದಕ ಸಹಿತ ಒಟ್ಟು 20 ಪದಕ ಗೆದ್ದುಕೊಂಡಿದೆ.