ನವದೆಹಲಿ : ಒಮಿಕ್ರಾನ್ ಸೇರಿದಂತೆ ಕೊರೊನಾದ ಯಾವುದೇ ರೂಪಾಂತರಿ ಬಂದರೂ ಬಹುತೇಕ ಭಾರತೀಯರು ಸುರಕ್ಷಿತವಾಗಿರಲಿದ್ದಾರೆ. ಹಾಗಾಗಿ ಹೊಸ ರೂಪಾಂತರದ ಬಗ್ಗೆ ಭಯ ಪಡಬೇಕಾಗಿಲ್ಲ.
ಹೀಗೆಂದು ಹೇಳಿದ್ದು ದೇಶದ ಪ್ರಮುಖ ವೈರಾಲಜಿಸ್ಟ್ ಹಾಗೂ ಕೋವಿಡ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಡಾ.ಶಾಹಿದ್ ಜಮೀಲ್. ಇಡೀ ದೇಶವೇ ಒಮಿಕ್ರಾನ್ ಭೀತಿಯಲ್ಲಿರುವಾಗ ಜಮೀಲ್ ಅವರು ಈ ಹೇಳಿಕೆ ನೀಡುವ ಮೂಲಕ ಭಾರತೀ ಯರಿಗೆ ರಿಲೀಫ್ ನೀಡಿದ್ದಾರೆ.
ಎಲ್ಲರೂ ಎಚ್ಚರಿಕೆಯಿಂದಿರಬೇಕು. ಆದರೆ, ಭೀತಿ ಪಡಬೇಕಾಗಿಲ್ಲ. ಡೆಲ್ಟಾ ರೂಪಾಂತರಿಯಿಂದ ಭಾರತದಲ್ಲಿ ಎದ್ದ ಎರಡನೇ ಅಲೆಯ ವೇಳೆ ಸಾಕಷ್ಟು ಜನರು ಸೋಂಕಿಗೆ ಒಳಗಾಗಿದ್ದಾರೆ. ದೇಶದ ಶೇ.67ರಷ್ಟು ಮಂದಿಯ ದೇಹದಲ್ಲಿ ಪ್ರತಿ ಕಾಯ ಸೃಷ್ಟಿಯಾಗಿದೆ. ಹೀಗಾಗಿ, ಯಾವುದೇ ರೂಪಾಂತರಿ ಬಂದರೂ ಭಾರತೀಯರು ಸುರಕ್ಷಿತವಾಗಿರಲಿದ್ದಾರೆ ಎಂದು ಡಾ. ಜಮೀಲ್ ಅಭಿಪ್ರಾಯಪಟ್ಟಿದ್ದಾರೆ.
ಒಮಿಕ್ರಾನ್ ದೃಢಪಟ್ಟಿಲ್ಲ: ದೇಶದಲ್ಲಿ ಒಮಿಕ್ರಾನ್ ಪತ್ತೆಯಾಗಿಲ್ಲ. ಅದನ್ನು ದೇಶ ದೊಳಕ್ಕೆ ಆಗಮಿಸಲು ಅವಕಾಶ ನೀಡುವುದೇ ಇಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವಿಯಾ ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ತಿಳಿಸಿದ್ದಾರೆ.
ಶಾಲೆ ಓಪನ್ ಲೇಟ್: ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಶಾಲೆಗಳ ಪುನಾರಂಭವನ್ನು ಡಿ.15ಕ್ಕೆ ಮುಂದೂಡಲಾಗಿದೆ ಎಂದು ಬೃಹನ್ಮುಂಬೈ ನಗರ ಪಾಲಿಕೆ ಹೇಳಿದೆ. ಡಿ.1ರಂದು ಶಾಲಾರಂಭ ಮಾಡಲು ಈ ಮೊದಲು ನಿರ್ಧರಿಸಲಾಗಿತ್ತು. ಈ ನಡುವೆ, ಆಫ್ರಿಕಾ ರಾಷ್ಟ್ರಗಳಿಂದ ಕಳೆದ 15 ದಿನಗಳಲ್ಲಿ ಒಂದು ಸಾವಿರ ಮಂದಿ ಮುಂಬೈಗೆ ಬಂದಿಳಿದಿ ದ್ದಾರೆ. ಆದರೆ, ಈ ಪೈಕಿ ಕೇವಲ 466 ಮಂದಿಯ ಮಾಹಿತಿಯಷ್ಟೇ ಸಿಕ್ಕಿದೆ ಎಂದು ಬಿಎಂಸಿ ಮಾಹಿತಿ ನೀಡಿದೆ. ಇದೇ ವೇಳೆ, ಜಪಾನ್‌ನಲ್ಲಿ ಒಮಿಕ್ರಾನ್‌ನ ಮೊದಲ ಪ್ರಕರಣ ಮಂಗಳವಾರ ಪತ್ತೆಯಾಗಿದೆ.