ವಿಶ್ವಸಂಸ್ಥೆ: ಆಫ್ಘಾನಿಸ್ತಾನದಲ್ಲಿ ಕಳೆದ ವರ್ಷ ಶರಣಾಗತರಾಗಿರುವ 1,400ಕ್ಕೂ ಅಧಿಕ ಇಸ್ಲಾಮಿಕ್ ಸ್ಟೇಟ್ ಉಗ್ರರ ಗುಂಪಿನಲ್ಲಿ ಭಾರತದವರೂ ಇದ್ದಾರೆ. ಅವರೆಲ್ಲ ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಆ್ಯಂಡ್ ದ ಲೆವಾಂತ್- ಖೊರಸಾನ್ (ಐಎಸ್‌ಐಎಲ್-ಕೆ)ನ ದಕ್ಷಿಣ ಏಷ್ಯಾ ಶಾಖೆಗೆ ಸೇರಿದವರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ಅಲ್‌ಖೈದಾ ನಿಷೇಧ ಸಮಿತಿ (1267 Al Qaeda Sanctions Committee) 25ನೇ ವರದಿಯಲ್ಲಿ ಈ ಅಂಶ ಉಲ್ಲೇಖೀಸಲಾಗಿದೆ.
“ಆಫ್ಘನ್ನ ಭದ್ರತಾ ಪಡೆಗಳು ಐಎಸ್‌ಐಎಲ್-ಕೆಗೆ ಭಾರಿ ಪ್ರಮಾಣದಲ್ಲಿ ಹಾನಿ ಮಾಡುವಲ್ಲಿ ಯಶಸ್ವಿಯಾಗಿವೆ. ಜತೆಗೆ ತಾಲಿಬಾನ್ ಉಗ್ರರೂ ಅವರಿಗೆ ಸಾಕಷ್ಟು ಹಿನ್ನಡೆ ಉಂಟುಮಾಡಿದ್ದಾರೆ. ಇದರಿಂದಾಗಿ ನಂಗರ್‌ಹಾರ್ ಪ್ರಾಂತ್ಯದಲ್ಲಿ ಐಎಸ್‌ಐಎಲ್-ಕೆ ನಿಯಂತ್ರಣ ಕಳೆದುಕೊಳ್ಳುವಂತಾಗಿದೆ.
1,400 ಉಗ್ರರು ಈ ವೇಳೆ ಆಫ್ಘನ್ ಪಡೆಗಳಿಗೆ ಶರಣಾಗಿದ್ದರು. ಅವರಲ್ಲಿ ಭಾರತ, ಅಝರ್‌ಬೈಜಾನ್, ಕೆನಡಾ, ಫ್ರಾನ್ಸ್, ಮಾಲ್ಡೀವ್ಸ್, ಪಾಕ್, ತಜಕಿಸ್ತಾನ, ಟರ್ಕಿ ಮತ್ತು ಉಜ್ಬೇಕಿಸ್ತಾನದ ಪ್ರಜೆಗಳು ಇದ್ದಾರೆ.’ ಆದರೆ ಈ ವರದಿಯಲ್ಲಿ ಯಾವ ದೇಶಕ್ಕೆ ಸೇರಿದವರು ಎಷ್ಟು ಮಂದಿ ಎಂದು ಗೊತ್ತಾಗಿಲ್ಲ.