ಹೊಸದಿಲ್ಲಿ: ಸತತ ಮೂರು ದಿನ ನಿರಂತರವಾಗಿ ಪ್ರತಿಭಟನೆ ನಡೆಸಿದ್ದ ಭಾರತೀಯ ಕುಸ್ತಿಪಟುಗಳಿಗೆ ಜಯ ಸಿಕ್ಕಿದೆ.
ಈ ಹಿನ್ನೆಲೆಯಲ್ಲಿ ಬಜರಂಗ್ ಪುನಿಯಾ, ರವಿ ದಹಿಯ, ವಿನೇಶ್ ಪೋಗಟ್, ಸಾಕ್ಷಿ ಮಲಿಕ್ ನೇತೃತ್ವದಲ್ಲಿ ನಡೆಸಿದ್ದ ಹೋರಾಟವನ್ನು ಕುಸ್ತಿ ಪಟುಗಳು ಸದ್ಯಕ್ಕೆ ಹಿಂಪಡೆದ್ದಾರೆ.
ಡಬ್ಯು ಎಫ್ಐ (ಭಾರತೀಯ ಕುಸ್ತಿ ಒಕ್ಕೂಟ) ಅಧ್ಯಕ್ಷ ಬೃಜ್‌ಭೂಷಣ್ ಸಿಂಗ್‌ರನ್ನು ತನಿಖೆ ಮುಗಿಯುವವರೆಗೆ ಅಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಯುವಂತೆ ಸೂಚಿ ಸಲಾಗಿದೆ.
ಹಾಗೆಯೇ ಕುಸ್ತಿಪಟುಗಳು ಮಾಡಿರುವ ಆರೋಪಗಳ ತನಿಖೆಗೆ ಕೇಂದ್ರ ಕ್ರೀಡಾ ಸಚಿವಾಲಯವೂ ಒಂದು ನಿಗಾ ಸಮಿತಿ ರಚಿಸಿದೆ. ಇದೇ ಸಮಿತಿ ತಾತ್ಕಾಲಿಕವಾಗಿ ಕುಸ್ತಿ ಸಂಸ್ಥೆಯ ದಿನನಿತ್ಯದ ವ್ಯವಹಾರಗಳನ್ನು ನೋಡಿಕೊಳ್ಳಲಿದೆ ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಿಳಿಸಿದರು.
Related Articles
ಶುಕ್ರವಾರ ತಡರಾತ್ರಿ ಅನುರಾಗ್ ಠಾಕೂರ್ ಮತ್ತು ಕುಸ್ತಿಪಟುಗಳ ನಡುವೆ ದೀರ್ಘಕಾಲ ಮಾತುಕತೆ ನಡೆಯಿತು. ಕಡೆಗೆ ಎರಡೂ ಬಣಗಳಿಗೆ ಸಮ್ಮತವಾಗುವ ನಿರ್ಧಾರವೊಂದಕ್ಕೆ ಬರಲಾಯಿತು. ಕೇಂದ್ರದ ಈ ಸಮಿತಿ ಮತ್ತು ಐಒಎ ಶುಕ್ರವಾರ ನೇಮಿಸಿದ್ದ ಸಮಿತಿ ಏನು ವರದಿ ನೀಡುತ್ತವೆ ಎನ್ನುವುದನ್ನು ಆಧರಿಸಿ ಅಂತಿಮ ನಿರ್ಧಾರವಾಗಲಿದೆ.
ತನಿಖೆಗೆ 4 ವಾರಗಳ ಗಡುವು: ಕೇಂದ್ರ ಕ್ರೀಡಾ ಸಚಿವಾಲಯ ನೇಮಿಸಿರುವ ಸಮಿತಿಗೆ ವರದಿ ನೀಡಲು 4 ವಾರಗಳ ಕಾಲಾವಕಾಶ ನೀಡಲಾಗಿದೆ. ಈ ಸಮಿತಿ ಕುಸ್ತಿಪಟುಗಳು ಮಾಡಿರುವ ಎಲ್ಲ ಆರೋಪಗಳ ವಿಚಾರಣೆ ನಡೆಸಲಿದೆ. ಅಲ್ಲಿಯವರೆಗೆ ಬೃಜ್‌ಭೂಷಣ್ ಅಧಿಕಾರದಲ್ಲಿರುವುದಿಲ್ಲ ಎಂದು ಸಚಿವ ಅನುರಾಗ್ ಘೋಷಿಸಿದರು.
ಇದರ ಬೆನ್ನಲ್ಲೇ ನಾವು ಧರಣಿ ಮುಗಿಸಿದ್ದೇವೆ. ಸರಕಾರ ನಮಗೆ ಸುರಕ್ಷೆ ಮತ್ತು ಭದ್ರತೆಯ ಭರವಸೆ ನೀಡಿದೆ ಎಂದು ಬಜರಂಗ್ ಪುನಿಯಾ ಹೇಳಿದರು.
ಕುಸ್ತಿ ಸಂಸ್ಥೆ ಸಹ ಕಾರ್ಯದರ್ಶಿ ಅಮಾನತು
ಬೃಜ್‌ಭೂಷಣ್ ವಿರುದ್ಧದ ಆರೋ ಪಗಳು ಆಧಾರರಹಿತ, ಪ್ರತಿಭಟಿಸಿದ ಕುಸ್ತಿಪಟುಗಳು ಇನ್ನೂ ಸೂಕ್ತ ಸಾಕ್ಷಿಗಳನ್ನು ನೀಡಿಲ್ಲ ಎಂದಿದ್ದ ಕುಸ್ತಿ ಒಕ್ಕೂಟದ ಸಹ ಕಾರ್ಯದರ್ಶಿ ವಿನೋದ್ ತೋಮರ್‌ರನ್ನು ಕೇಂದ್ರ ಸರಕಾರ ಅಮಾನತು ಮಾಡಿದೆ. ಸ್ವತಃ ಸರಕಾರವೇ ತನಿಖಾ ಸಮಿತಿ ರಚನೆ ಮಾಡಿದ್ದರೂ ತೋಮರ್ ಕುಸ್ತಿಪಟುಗಳ ವಿರುದ್ಧ ಹರಿಹಾಯ್ದಿದ್ದರು.