ದುಬೈ: ಐಸಿಸಿ ಟಿ20 ವಿಶ್ವಕಪ್ ಕೂಟದಲ್ಲಿ ತನ್ನ ನಾಲ್ಕನೇ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಸ್ಕಾಟ್ಲೆಂಡ್ ವಿರುದ್ಧ ಸುಲಭ ಗೆಲುವು ದಾಖಲಿಸಿದ ಟೀಂ ಇಂಡಿಯಾ ಸೆಮಿ ಫೈನಲ್ ಕನಸು ಜೀವಂತವಾಗಿದೆ.
ಕೂಟದಲ್ಲಿ ಮೊದಲ ಬಾರಿಗೆ ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಭಾರತದ ಸಾಂಘಿಕ ಬೌಲಿಂಗ್ ದಾಳಿಗೆ ಬೆಚ್ಚಿದ ಸ್ಕಾಟ್ಲೆಂಡ್ ಕೇವಲ 85 ರನ್ ಗಳಿಗೆ ಸರ್ವಪತನ ಕಂಡಿತು. ಆರಂಭಿಕ ಆಟಗಾರ ಮನ್ಸಿ ಹೊರತು ಪಡಿಸಿ ಯಾವ ಆಟಗಾರರು ಭಾರತದ ಬೌಲಿಂಗ್ ನ್ನು ಸಮರ್ಥವಾಗಿ ಎದುರಿಸುವ ಧೈರ್ಯ ಮಾಡಲಿಲ್ಲ. ಮನ್ಸಿ 24 ರನ್ ಮಾಡಿದರು.
ಬಿಗು ಬೌಲಿಂಗ್ ದಾಳಿ ನಡೆಸಿದ ಜಡೇಜಾ ಮತ್ತು ಶಮಿ ತಲಾ ಮೂರು ವಿಕೆಟ್ ಕಿತ್ತರೆ, ಬುಮ್ರಾ ಎರಡು ವಿಕೆಟ್ ಪಡೆದರು. ಒಂದು ವಿಕೆಟ್ ಅಶ್ವಿನ್ ಪಾಲಾಯಿತು.
ಇದನ್ನೂ ಓದಿ:ಜನಮನ್ನಣೆಗೆ ತಕ್ಕಂತೆ ಸರಕಾರದಿಂದ ಗೌರವ : ಅಪ್ಪು ನಿವಾಸದಲ್ಲಿ ಸಿಎಂ ಬೊಮ್ಮಾಯಿ
ಅಫ್ಘಾನಿಸ್ಥಾನ ತಂಡಕ್ಕಿಂತ ಹೆಚ್ಚಿನ ನೆಟ್ ರನ್ ರೇಟ್ ಪಡೆಯಲು ಭಾರತ ಈ ಮೊತ್ತವನ್ನು ಕೇವಲ 7.1 ಓವರ್ ಗಳಲ್ಲಿ ಬೆನ್ನಟ್ಟಬೇಕಿತ್ತು. ಇದೇ ಯೋಜನೆಯಂತೆ ಕಣಕ್ಕಿಳಿದ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಸ್ಕಾಟ್ಲೆಂಡ್ ಬೌಲರ್ ಗಳ ಮೇಲೆ ದಾಳಿ ನಡೆಸಿದರು. ರಾಹುಲ್ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಗಳಿಸಿದರೆ, ರೋಹಿತ್ 16 ಎಸೆತಗಳಲ್ಲಿ 30 ರನ್ ಗಳಿಸಿದರು. ಅಂತಿಮವಾಗಿ ಭಾರತ ತಂಡ 6.3 ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು.