ಡರ್ಬಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಆಂಗ್ಲರ ನಾಡಿನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. 11ನೇ ಮಹಿಳಾ ವಿಶ್ವಕಪ್ ಕ್ರಿಕೆಟ್ ಕೂಟದ
ಎರಡನೇ ಸೆಮಿಫೈನಲ್ ಪಂದ್ಯಾಟದಲ್ಲಿ ಹಾಲಿ ಚಾಂಪಿಯನ್ ಆಗಿರುವ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು 36 ರನ್ನುಗಳಿಂದ ಸದೆಬಡಿಯುವ ಮೂಲಕ ಮಿಥಾಲಿ ರಾಜ್ ನೇತೃತ್ವದ ಭಾರತೀಯ ಮಹಿಳಾ ಪಡೆ ಎರಡನೇ ಬಾರಿಗೆ ವಿಶ್ವಕಪ್ ಫೈನಲಿಗೆ ಲಗ್ಗೆಯಿರಿಸಿದೆ.
ಹರ್ಮಿನ್ ಪ್ರೀತ್ ಕೌರ್ (171) ಅವರ ಭರ್ಜರಿ ಬ್ಯಾಟಿಂಗ್ ನೆರವಿನೊಂದಿಗೆ ಭಾರತವು 42 ಓವರುಗಳಲ್ಲಿ 4 ವಿಕೆಟ್ ನಷ್ಟದಲ್ಲಿ 281 ರನ್ನುಗಳ ಸವಾಲಿನ ಮೊತ್ತವನ್ನು ಪೇರಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಆಸೀಸ್ ತಂಡವು ತನ್ನ ಸಾಮರ್ಥ್ಯಕ್ಕೆ ತಕ್ಕುದಾದ ಆಟವನ್ನು ಆಡುವಲ್ಲಿ ವಿಫಲಗೊಂಡಿತು. ಆಸೀಸ್ ಪಾಳಯದ ಆರಂಭಿಕ ಕ್ರಮಾಂಕದ ವೈಫಲ್ಯದಿಂದಾಗಿ ಮತ್ತು ಭಾರತೀಯ ಬೌಲರ್‌ಗಳ ಶಿಸ್ತುಬದ್ಧ ದಾಳಿಯಿಂದಾಗಿ ಸವಾಲಿನ ಮೊತ್ತವನ್ನು ಬೆನ್ನಟ್ಟಲು ಆಸೀಸ್ ಆಟಗಾರ್ತಿಯರಿಗೆ ಸಾಧ್ಯವಾಗಲಿಲ್ಲ.
ಆಸೀಸ್ ಪಾಳಯದಲ್ಲಿ ಅಲೆಕ್ಸ್ ಬ್ಲ್ಯಾಕ್‌ವೆಲ್ ಅವರದ್ದು ಏಕಾಂಗಿ ಹೋರಾಟವಾಗಿತ್ತು. ಕೊನೆಯವರಾಗಿ ಔಟಾಗುವ ಮುನ್ನು ಈ ಆಟಗಾರ್ತಿ ಕೇವಲ 56 ಎಸೆತಗಳಲ್ಲಿ 90 ರನ್ನುಗಳನ್ನು ಬಾರಿಸಿ ಮಿಂಚಿದರು. ಉಳಿದಂತೆ ಇ.ಜೆ. ವಿಲಾನಿ (75), ಪೆರಿ (38), ಅವರಿಂದ ಮಾತ್ರವೇ ಎರಡಂಕೆಯ ಮೊತ್ತ ದಾಖಲಾಯಿತು.
ಆಸ್ಟ್ರೇಲಿಯಾ ವನಿತೆಯರು 40 ಓವರುಗಳಲ್ಲಿ 245 ರನ್ನುಗಳಿಗೆ ಆಲೌಟ್ ಆಗುವ ಮೂಲಕ ಸತತ ಎರಡನೇ ಬಾರಿಗೆ ಹಾಗೂ ದಾಖಲೆಯ ಏಳನೇ ಬಾರಿ ವಿಶ್ವಕಪ್ ಟ್ರೋಫಿ ಎತ್ತುವ ಕನಸು ನುಚ್ಚುನೂರಾಯಿತು.
ಅಂತಿಮವಾಗಿ ಆಸೀಸ್ ವಿರುದ್ಧ 36 ರನ್ನುಗಳ ಅಧಿಕಾರಯುತ ಜಯ ದಾಖಲಿಸಿದ ಭಾರತೀಯ ವನಿತೆಯರು 12 ವರ್ಷಗಳ ಬಳಿಕ ಈ ಪ್ರತಿಷ್ಠಿತ ಕೂಟದ ಫೈನಲಿಗೇರಿದ ಸಾಧನೆ ಮಾಡಿದರು. ಭಾರತವು ಫೈನಲಿನಲ್ಲಿ ಮೂರು ಬಾರಿಯ ವಿಶ್ವಕಪ್ ಚಾಂಪಿಯನ್ ಹಾಗೂ ಅತಿಥೇಯ ಇಂಗ್ಲಂಡ್ ತಂಡದ ಸವಾಲನ್ನು ಎದುರಿಸಲಿದೆ.
ಶಿಸ್ತುಬದ್ಧ ದಾಳಿ ನಡೆಸಿದ ಭಾರತೀಯ ಆಟಗಾರ್ತಿಯರಲ್ಲಿ ದೀಪ್ತಿ ಶರ್ಮಾ 3 ವಿಕೆಟ್ ಪಡೆದು ಮಿಂಚಿದರೆ, ಗೋಸ್ವಾಮಿ, ಲೆಗ್ ಸ್ಪಿನ್ನರ್ ಶಿಖಾ ಪಾಂಡೆ ತಲಾ ಎರಡು ವಿಕೆಟ್ ಪಡೆದರು.