Advertisement

ಭಾರತ ಮಹಿಳಾ ಹಾಕಿ ದಿಗ್ವಿಜಯ

10:10 AM Jun 30, 2019 | Vishnu Das |

ಭಾರತ ಮಹಿಳಾ ಹಾಕಿ ಕ್ಷೇತ್ರದಲ್ಲಿ ಹೊಸ ಶಕೆಯೊಂದು ಉದಯವಾಗಿದೆ. ಅಂತಾರಾಷ್ಟ್ರೀಯ ಹಾಕಿ ಕೂಟಗಳಲ್ಲಿ ಪುರುಷರ ತಂಡದಷ್ಟು ಸಾಧನೆಯನ್ನು ಭಾರತ ಮಹಿಳಾ ತಂಡ ಮಾಡಿಲ್ಲವಾದರೂ ಎಫ್ಐಎಚ್‌ ಮಹಿಳಾ ಹಾಕಿ ಸೀರೀಸ್‌ನಲ್ಲಿ ಪ್ರಶಸ್ತಿ ಗೆದ್ದ ಮೇಲೆ ರಾಣಿ ರಾಂಪಾಲ್‌ ಪಡೆ “ನಾವು ಯಾರಿಗೂ ಕಮ್ಮಿ ಇಲ್ಲ’ ಎನ್ನುವುದನ್ನು ಸಾರಿದೆ.

Advertisement

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಮಹಿಳಾ ತಂಡವು ಪದಕ ಗೆದ್ದು ತರುವ ಸಾಮರ್ಥ್ಯ ಹೊಂದಿದೆ. ಗುರ್ಜಿತ್‌ ಕೌರ್‌ ರಂತಹ ತಾರಾ ಆಟಗಾರರು, ರಾಣಿ ರಾಂಪಾಲ್‌ರಂತಹ ಶ್ರೇಷ್ಠ ನಾಯಕಿಯ ಬಲ ತಂಡಕ್ಕಿದೆ. ಇನ್ನಷ್ಟು ತರಬೇತಿ, ಕೋಚ್‌, ಕಠಿಣ ಶ್ರಮವಹಿಸಿದ್ದೇ ಆದರೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಸ್ವರ್ಣದ ನಗು ಚೆಲ್ಲುವುದರಲ್ಲಿ ಅನುಮಾನವೇ ಇಲ್ಲ.

ಭಾರತ ಸಂಭ್ರಮ: ಜಪಾನ್‌ ಪ್ರವಾಸಕ್ಕೂ ಮೊದಲು ಎಫ್ಐಎಚ್‌ ಮಹಿಳಾ ಹಾಕಿ ಸೀರೀಸ್‌ ಫೈನಲ್ಸ್‌ನಲ್ಲಿ ಭಾರತ ಗೆಲ್ಲುತ್ತದೆ ಎಂದು ಯಾರು ಊಹಿಸಿರಲಿಕ್ಕಿಲ್ಲ. ಎಲ್ಲ ಸಂದೇಹಗಳಿಗೂ ಭಾರತ ಆಟಗಾರ್ತಿಯರು ಉತ್ತರ ನೀಡಿದರು. ಎಲ್ಲ ಸವಾಲನ್ನು ಮೆಟ್ಟಿನಿಂತು ಕೂಟದ ಅಂತಿಮ ಹಂತಕ್ಕೆ ಪ್ರವೇಶಿಸಿಯೇ ಬಿಟ್ಟರು. ಆದರೆ ಫೈನಲ್‌ ಗೆಲ್ಲುವುದು ರಾಣಿ ರಾಂಪಾಲ್‌ ಪಡೆಗೆ ಅಷ್ಟೊಂದು ಸುಲಭದ ವಿಷಯವಾಗಿರಲಿಲ್ಲ. ಏಕೆಂದರೆ ಎದುರಾಳಿ ಆತಿಥೇಯ ಜಪಾನ್‌ ತಂಡ. ತವರಲ್ಲಿ ಆ ತಂಡವನ್ನು ಸೋಲಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಆದರೆ ಗುರ್ಜಿತ್‌ ಕೌರ್‌ ಬುಲೆಟ್‌ ವೇಗದಲ್ಲಿ ಸಿಡಿಸಿದ ಎರಡು ಗೋಲಿನ ನೆರವಿನಿಂದ ಭಾರತೀಯರು ಎಲ್ಲ ಸವಾಲನ್ನು ಮೆಟ್ಟಿನಿಂತು ಕೆಚ್ಚೆದೆಯ ಪ್ರದರ್ಶನ ನೀಡಿದರು. ಭಾರತ ಕಪ್‌ ಗೆಲ್ಲುವುದರಲ್ಲಿ ಮುಂಚೂಣಿಯ ಪಾತ್ರವಹಿಸಿದರು. ರಾಣಿ ರಾಂಪಾಲ್‌ ಕೂಡ ಒಂದು ಗೋಲು ಬಾರಿಸಿ ತಂಡದ ಗೆಲುವಿಗೆ ಕಾರಣರಾದರು. ಒಟ್ಟಿನಲ್ಲಿ ಭಾರತೀಯರ ಸಂಭ್ರಮ ಮುಗಿಲು ಮುಟ್ಟಿತ್ತು. ಎಲ್ಲ ಕಡೆಯಿಂದ ಭಾರತೀಯ ಆಟಗಾರ್ತಿಯರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂತು. ಸ್ವತಃ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ “ಇದು ನಮ್ಮ ಹುಡುಗಿಯರ ಸ್ಪಿರಿಟ್‌’ ಎಂದು ಟ್ವೀಟರ್‌ ಮೂಲಕ ಖುಷಿ ವ್ಯಕ್ತಪಡಿಸಿದ್ದರು.

ಒಲಿಂಪಿಕ್ಸ್‌ ಗೆಲ್ಲುವ ಗುರಿ: ಭಾರತೀಯ ಆಟಗಾರ್ತಿಯರು ಎಫ್ಐಎಚ್‌ ಮಹಿಳಾ ಹಾಕಿ ಸೀರೀಸ್‌ ಫೈನಲ್ಸ್‌ ಗೆಲ್ಲುವ ಮೂಲಕ ಮುಂಬರುವ ಒಲಿಂಪಿಕ್ಸ್‌ ಅರ್ಹತಾ ಕೂಟಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆಯಬಹುದು.

ಭಾರತ ಮಹಿಳಾ ತಂಡ ಇದುವರೆಗೆ ಒಟ್ಟು 2 ಸಲ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದೆ. 1980ರಲ್ಲಿ ಮೊದಲ ಬಾರಿಗೆ ಮಾಸ್ಕೋದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಆ ಬಳಿಕ 2016ರಲ್ಲಿ ಭಾರತ ರಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡು 12ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

Advertisement

ಅಂ.ರಾ ಕೂಟದಲ್ಲಿ ಭಾರತ ಗೆದ್ದ ಪದಕ
ಭಾರತ ಮಹಿಳಾ ತಂಡ ಇದುವರೆಗೆ ಹಲವಾರು ಅಂತಾರಾಷ್ಟ್ರೀಯ ಕೂಟಗಳಲ್ಲಿ ಭಾಗವಹಿಸಿದೆ. ಮೊದಲನೆಯದಾಗಿ ಕಾಮನ್ವೆಲ್ತ್‌ ಗೇಮ್ಸ್‌ ಕೂಟವನ್ನು ಗಮನಿಸುವುದಾದರೆ ಭಾರತ ಈ ಪ್ರತಿಷ್ಠಿತ ಕೂಟದಲ್ಲಿ ಎರಡು ಸಲ ಮಾತ್ರ ಪದಕ ಗೆದ್ದಿದೆ. 1998ರಲ್ಲಿ ಭಾರತ ಮೊದಲ ಬಾರಿಗೆ ಕಾಮನ್ವೆಲ್ತ್‌ ಕೂಟದಲ್ಲಿ ಪಾಲ್ಗೊಂಡಿತ್ತು. ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. 2002ರಲ್ಲಿ ಇಂಗ್ಲೆಂಡ್‌ನ‌ಲ್ಲಿ ನಡೆದಿದ್ದ ಕೂಟದಲ್ಲಿ ಭಾಗವಹಿಸಿದ್ದ ಭಾರತೀಯರು ಮೊದಲ ಸಲ ಚಿನ್ನದ ಪದಕ ಗೆದ್ದಿದ್ದರು. ಆ ಬಳಿಕ 2006 ಆಸ್ಟ್ರೇಲಿಯದಲ್ಲಿ ನಡೆದ ಕೂಟದಲ್ಲಿ ಭಾರತೀಯರು ಬೆಳ್ಳಿ ಪದಕ ಗೆದ್ದುಕೊಂಡಿದ್ದರು. 2010, 2014 ಹಾಗೂ 2018ರಲ್ಲಿ ಭಾರತ ಫೈನಲ್‌ ತಲುಪಲು ಸಾಧ್ಯವಾಗಿಲ್ಲ. ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ 1982ರಲ್ಲಿ ಚಿನ್ನದ ಪದಕ ಗೆದ್ದಿತ್ತು. 1986ರಲ್ಲಿ ಕಂಚು, 1998ರಲ್ಲಿ ಬೆಳ್ಳಿ, 2006ರಲ್ಲಿ ಕಂಚು, 2014ರಲ್ಲಿ ಕಂಚು ಹಾಗೂ 2018ರಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿತ್ತು. ವಿಶ್ವ ಲೀಗ್‌ ಹಾಗೂ ವಿಶ್ವಕಪ್‌ ಹಾಕಿ ಕೂಟಗಳಲ್ಲಿ ಇದುವರೆಗೆ ಭಾರತೀಯ ಮಹಿಳಾ ತಂಡಕ್ಕೆ ಒಂದು ಸಲವೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಇದನ್ನು ಗಂಭೀರವಾಗಿ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಶ್ರೇಷ್ಠ ನಿರ್ವಹಣೆ ನೀಡುವ ಹೊಣೆಗಾರಿಕೆ ಭಾರತೀಯ ತಂಡದ ಆಟಗಾರ್ತಿಯರ ಮೇಲಿದೆ ಎನ್ನುವುದನ್ನು ಗಮನದಲ್ಲಿಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next