ಇಂಡಿಯನ್ ವೆಲ್ಸ್: ವಿಶ್ವದ 7ನೇ ರ್‍ಯಾಂಕಿಂಗ್ ಆಟಗಾರ ಡೊಮಿನಿಕ್ ಥೀಮ್ ಕ್ವಾರ್ಟರ್ ಫೈನಲ್ ಪಂದ್ಯವಾಡದೆಯೇ “ಇಂಡಿಯನ್ ವೆಲ್ಸ್ ಮಾಸ್ಟರ್ ಟೆನಿಸ್’ ಕೂಟದ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಎದುರಾಳಿ ಗೇಲ್ ಮಾನ್‌ಫಿಲ್ಸ್ ಗಾಯಾಳಾಗಿ ಕೂಟದಿಂದ ನಿರ್ಗಮಿಸಿದ್ದರಿಂದ ಥೀಮ್ ಮುನ್ನಡೆ ಸುಗಮಗೊಂಡಿತು. ಇಲ್ಲಿ ಅವರು ಮಿಲೋಸ್ ರಾನಿಕ್ ವಿರುದ್ಧ ಸೆಣಸಲಿದ್ದಾರೆ.
ಫಿಲಿಪ್ ಕೋಹ್ಲಶ್ರೀಬರ್ ವಿರುದ್ಧ ಬುಧವಾರ ರಾತ್ರಿ 4ನೇ ಸುತ್ತಿನ ಪಂದ್ಯದ ವೇಳೆ ಮಾನ್‌ಫಿಲ್ಸ್ ಎಡ ಪಾದದ ನೋವಿಗೆ ಸಿಲುಕಿದ್ದರು. ಇದು ವಾಸಿಯಾಗದ ಕಾರಣ ಕ್ವಾರ್ಟರ್ ಫೈನಲ್ ಪಂದ್ಯಕ್ಕೂ ಸ್ವಲ್ಪ ಮುನ್ನ ಹೊರಗುಳಿಯುವ ನಿರ್ಧಾರಕ್ಕೆ ಬಂದರು.
ಇನ್ನೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೆನಡಾದ ಮಿಲೋಸ್ ರಾನಿಕ್ ಸರ್ಬಿಯಾದ 19ರ ಹರೆಯದ ಆಟಗಾರ ಮಿಯೋಮಿರ್ ಕೆಮನೋವಿಕ್ ವಿರುದ್ಧ 6-3, 6-4 ನೇರ ಸೆಟ್‌ಗಳ ಜಯ ಸಾಧಿಸಿದರು. 5ನೇ ಶ್ರೇಯಾಂಕದ ಕೆವಿನ್ ಆ್ಯಂಡರ್ಸನ್ ಕೂಟದಿಂದ ಹಿಂದೆ ಸರಿದುದರಿಂದ ಕೆಮನೋವಿಕ್ ಅವಕಾಶ ಪಡೆದಿದ್ದರು. ವಿಶ್ವ ರ್‍ಯಾಂಕಿಂಗ್‌ನಲ್ಲಿ 14ನೇ ಸ್ಥಾನದಲ್ಲಿರುವ ರಾನಿಕ್ 3 ವರ್ಷಗಳ ಹಿಂದೆ ಇಲ್ಲಿ ರನ್ನರ್-ಅಪ್ ಆಗಿದ್ದರು. ಆದರೆ ಕ್ವಾರ್ಟರ್ ಫೈನಲ್ ಕಾಳಗದಲ್ಲಿ ರಾನಿಕ್ ಅವರ ಸರ್ವ್ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಇಲ್ಲಿ ಸುಧಾರಣೆ ಕಾಣುವ ವಿಶ್ವಾಸ ಅವರಿಗಿದೆ. ಶುಕ್ರವಾರ ರಾತ್ರಿ ಟೆನಿಸ್ ದಿಗ್ಗಜರಾದ ರೋಜರ್ ಫೆಡರರ್, ರಫೆಲ್ ನಡಾಲ್ ಅವರ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿವೆ.
ವೀನಸ್‌ಗೆ ಸೋಲುಣಿಸಿದ ಕೆರ್ಬರ್
ಇಲ್ಲೇ ನಡೆಯುತ್ತಿರುವ ವನಿತೆಯರ “ಬಿಎನ್‌ಪಿ ಪರಿಬಾಸ್ ಓಪನ್’ ಟೆನಿಸ್ ಪಂದ್ಯಾವಳಿಯಿಂದ ಅಮೆರಿಕದ ಮಾಜಿ ನಂ.1 ಆಟಗಾರ್ತಿ ವೀನಸ್ ವಿಲಿಯಮ್ಸ್ ಹೊರಬಿದ್ದಿದ್ದಾರೆ. ಕ್ವಾರ್ಟರ್ ಫೈನಲ್ ಕಾಳಗದಲ್ಲಿ ಅವರನ್ನು ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್ 7-6 (3), 6-3 ಅಂತರದಿಂದ ಮಣಿಸಿದರು. 3 ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಕೆರ್ಬರ್ ಮೊದಲ ಸಲ ಇಲ್ಲಿ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದ್ದಾರೆ.
ಕೆರ್ಬರ್ ಅವರ ಸೆಮಿಫೈನಲ್ ಎದುರಾಳಿ ಸ್ವಿಜರ್‌ಲ್ಯಾಂಡಿನ ಬೆಲಿಂಡಾ ಬೆನ್ಸಿಕ್. ದಿನದ ಇನ್ನೊಂದು ಪಂದ್ಯದಲ್ಲಿ ಅವರು ವಿಶ್ವದ ನಂ.5 ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾ ವಿರುದ್ಧ 3 ಸೆಟ್‌ಗಳ ಕಾದಾಟದ ಬಳಿಕ 6-3, 4-6, 6-3 ಅಂತರದ ಜಯ ಸಾಧಿಸಿದರು. ವಿಶ್ವದ ನಂ.1 ಆಟಗಾರ್ತಿ, ಹಾಲಿ ಚಾಂಪಿಯನ್ ಜಪಾನಿನ ನವೋಮಿ ಒಸಾಕಾ ಅವರನ್ನು ಮಣಿಸಿದ ಹೆಗ್ಗಳಿಕೆ ಬೆನ್ಸಿಕ್ ಪಾಲಿಗಿದೆ.
ಇನ್ನೊಂದೆಡೆ ಪ್ಲಿಸ್ಕೋವಾ ಕಳೆದ ತಿಂಗಳು ನಡೆದ ದುಬಾೖ ಡ್ನೂಟಿ ಫ್ರೀ ಟೆನಿಸ್ ಕೂಟದ ಚಾಂಪಿಯನ್ ಆಗಿದ್ದರು. “ವೀನಸ್ ವಿರುದ್ಧ ಆಡುವುದು ಯಾವತ್ತೂ ದೊಡ್ಡ ಸವಾಲು. ಮೊದಲ ಸೆಟ್ ವೇಳೆ ನಾನು ಸಾಕಷ್ಟು ತೊಂದರೆ ಅನುಭವಿಸಿದೆ. ಆದರೆ ದ್ವಿತೀಯ ಸೆಟ್‌ನಲ್ಲಿ ಹೋರಾಡಿದ ರೀತಿ ಖುಷಿ ಕೊಟ್ಟಿದೆ’ ಎಂದು ಕೆರ್ಬರ್ ಹೇಳಿದ್ದಾರೆ.