Advertisement

Indo-Bangla: ಬಾಂಗ್ಲಾದಲ್ಲಿ ಭಾರತೀಯ ಯೋಧರ ಸ್ಮಾರಕ

08:17 PM Oct 29, 2023 | Team Udayavani |

ಭಾರತ-ಪಾಕಿಸ್ತಾನ ನಡುವೆ ಈವರೆಗೆ ನಾಲ್ಕು ಯುದ್ಧಗಳಾಗಿವೆ. ನಾಲ್ಕರಲ್ಲೂ ಭಾರತವೇ ಗೆದ್ದಿದೆ. ಆದರೆ 1971ರಲ್ಲಿ ಭಾರತ ತನ್ನ ಹಿತಕ್ಕಾಗಿಯಲ್ಲ, ನೆರೆಯ ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿತು. ಆ ಯುದ್ಧದಲ್ಲಿ ಪಾಕ್‌ ಸೋಲೊಪ್ಪಿಕೊಳ್ಳುವ ಹೊತ್ತಿಗೆ; ಭಾರತದ 1,600 ಯೋಧರು ಹುತಾತ್ಮರಾಗಿದ್ದರು. ಅದರ ಫ‌ಲವಾಗಿಯೇ ಬಾಂಗ್ಲಾ ಎಂಬ ಪ್ರತ್ಯೇಕ ದೇಶ ರಚನೆಯಾಗಿದ್ದು. ಅವರನ್ನೆಲ್ಲ ಸ್ಮರಿಸಿಕೊಳ್ಳಲು ಬಾಂಗ್ಲಾದೇಶ ಒಂದು ಸ್ಮಾರಕವನ್ನು ಡಿಸೆಂಬರ್‌ನಲ್ಲಿ ಲೋಕಾರ್ಪಣೆಗೊಳಿಸಲಿದೆ.

Advertisement

ಹೇಗಿರಲಿದೆ ಸ್ಮಾರಕ?
ಬಾಂಗ್ಲಾ ರಾಜಧಾನಿ ಢಾಕಾಗೆ ಅತಿ ಸನಿಹದಲ್ಲಿರುವ ಆಶುಗಂಜ್‌ನಲ್ಲಿ ಸ್ಮಾರಕ ತಲೆಎತ್ತಲಿದೆ. ಒಟ್ಟು 4 ಎಕರೆ ವಿಸ್ತೀರ್ಣದ ಈ ಸ್ಮಾರಕದಲ್ಲಿ 1600 ಭಾರತೀಯ ಯೋಧರ ಹೆಸರುಗಳನ್ನು ಬರೆಯಲಾಗುತ್ತದೆ. ಇದು ಎರಡೂ ದೇಶಗಳ ಸ್ನೇಹದ ಸಂಕೇತವಾಗಿರುತ್ತದೆ. ಇಲ್ಲಿ ಪಕ್ಕೆಲುಬುಗಳ ಮೂಳೆಗಳ ಚಿತ್ರ ಇರುತ್ತದೆ. ಆತ್ಮ ಮತ್ತು ಹೃದಯಗಳನ್ನು ಈ ಮೂಳೆಯೇ ರಕ್ಷಿಸುವುದು ಎನ್ನುವುದು ಇಲ್ಲಿನ ಇಂಗಿತಾರ್ಥ. ಬಾಂಗ್ಲಾ ಮತ್ತು ಭಾರತೀಯ ಯೋಧರು ಒಗ್ಗೂಡಿರುವುದನ್ನು ಇಲ್ಲಿ ಧ್ವನಿಸಲಾಗುತ್ತದೆ.

ಲೆ.ಕ.ಸಜ್ಜದ್‌ ಝಹೀರ್‌ ಸೂತ್ರಧಾರ
ಇಡೀ ಯೋಜನೆಯ ಸೂತ್ರಧಾರ ಬಾಂಗ್ಲಾದ ನಿವೃತ್ತ ಸೇನಾಧಿಕಾರಿ ಲೆಫ್ಟಿನೆಂಟ್‌ ಕರ್ನಲ್‌ ಖಾಜಿ ಸಜ್ಜದ್‌ ಅಲಿ ಝಹೀರ್‌. ಬಾಂಗ್ಲಾದ ಸ್ವಾಧಿನಾತ, ಬೀರ್‌ ಪ್ರೊತೀಕ್‌ ಪದಕ ಪಡೆದಿರುವ ಅವರು, ಭಾರತದಿಂದ ಪದ್ಮಶ್ರೀಯನ್ನು ಪಡೆದುಕೊಂಡಿದ್ದಾರೆ. ಅವರೊಮ್ಮೆ ಆ ಯುದ್ಧದಲ್ಲಿ ಮಡಿದಿದ್ದ ಭಾರತೀಯ ಯೋಧ ಲ್ಯಾನ್ಸ್‌ ನಾಯಕ್‌ ಆಲ್ಬರ್ಟ್‌ ಎಕ್ಕಾ ಅವರ ಪತ್ನಿಯನ್ನು ಭೇಟಿ ಮಾಡಿದ್ದರು. ಆಕೆ ನಮ್ಮ ಪತಿ ಅಲ್ಲಿಗೆ ಹೋಗಿ ಪ್ರಾಣಬಿಟ್ಟರು, ಆದರೆ ಬಾಂಗ್ಲಾ ಮಾತ್ರ ಅವರನ್ನು ನೆನಪಿಸಿಕೊಳ್ಳುತ್ತಲೇ ಇಲ್ಲ ಎಂದಿದ್ದರು. ಒಂದು ವೇಳೆ ಇದನ್ನು ಹೀಗೆಯೇ ಬಿಟ್ಟರೆ ಇತಿಹಾಸ ನಮ್ಮನ್ನು ಕೃತಜ್ಞತೆ ಇಲ್ಲದ ದೇಶವೆನ್ನುತ್ತದೆ ಎಂದು ಝಹೀರ್‌ಗೆ ಅನಿಸಿತು. ಅದನ್ನೇ ಅವರು ಪ್ರಧಾನಿ ಶೇಖ್‌ ಹಸೀನಾಗೆ ತಿಳಿಸಿದ್ದಾರೆ. 2021 ಮಾರ್ಚ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಈ ಸ್ಮಾರಕಕ್ಕೆ ಅಡಿಗಲ್ಲು ಹಾಕಿದರು.

ಯುದ್ಧವಾಗಿದ್ದೇಕೆ?
ಬಂಗಾಳ ರಾಜ್ಯದಿಂದ ಪ್ರತ್ಯೇಕಗೊಂಡು ಪೂರ್ವ ಬಂಗಾಳವಾಗಿದ್ದ ನೆಲವನ್ನು ಪಾಕಿಸ್ತಾನ ತನ್ನ ವಶಕ್ಕೆ ತೆಗೆದುಕೊಂಡಿತ್ತು. ಇದನ್ನು ವಿರೋಧಿಸಿ ಬಾಂಗ್ಲಾದೇಶೀಯರು 1971ರಲ್ಲಿ ಪ್ರತಿಭಟನೆ ಆರಂಭಿಸಿದರು. ಪಾಕ್‌ ಸೇನೆ ಬಾಂಗ್ಲನ್ನರನ್ನು ನಿಗ್ರಹಿಸಲು ಹಿಂಸಾತ್ಮಕ ಮಾರ್ಗ ಹಿಡಿಯಿತು. ಆಗ ಭಾರತೀಯ ಸೇನೆ ಮಧ್ಯಪ್ರವೇಶಿಸಿ ಪಾಕನ್ನು ಮಟ್ಟ ಹಾಕಿತು. ಡಿ.16ರಂದು ಬಾಂಗ್ಲಾ ಸ್ವತಂತ್ರವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next