Advertisement

ಸ್ವಿಝರ್ ಲ್ಯಾಂಡಿನ ವಿಶ್ವಪ್ರಸಿದ್ಧ ಪರ್ವತದ ಮೇಲೆ ಪಡಿಮೂಡಿದ ತ್ರಿವರ್ಣ ಧ್ವಜ; ಯಾಕೆ ಗೊತ್ತೇ?

01:43 PM May 04, 2020 | Hari Prasad |

ನವದೆಹಲಿ: ವಿಶ್ವಕ್ಕೆ ವಿಶ್ವವೇ ಕೋವಿಡ್ 19 ವೈರಸ್ ತಂದೊಡ್ಡಿರುವ ಸಂಕಟಕ್ಕೆ ನಲುಗುತ್ತಿದೆ. ತಮ್ಮ ಪ್ರಜೆಗಳಿಗೆ ಸೋಂಕು ವ್ಯಾಪಿಸದಂತೆ ತಡೆಯಲು ಸರಕಾರಗಳು ನಾನಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿವೆ.

Advertisement

ಜನರ ಜೀವಗಳನ್ನು ಕಾಪಾಡಲು ವೈದ್ಯ ಸಮೂಹ ಹಗಲು ರಾತ್ರಿಯೆನ್ನದೆ ಕಾರ್ಯನಿರತವಾಗಿದೆ. ಜನರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಮನೆಯಲ್ಲೇ ಸುಮ್ಮನೆ ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣಗೊಂಡಿದೆ. ಇದಕ್ಕೆಲ್ಲಾ ಕಾರಣ ಕಣ್ಣಿಗೆ ಕಾಣಿಸದ ಒಂದು ವೈರಾಣು.

ಈ ಸಂದರ್ಭದಲ್ಲಿ ಕೋವಿಡ್ ವೈರಸ್ ವಿರುದ್ಧ ಹೋರಾಡುತ್ತಿರುವವರೆಲ್ಲರಿಗೂ ಬೇಕಾಗಿರುವುದು ಸಹಾಯ ಹಸ್ತ ಒಂದೆಡೆಯಾದರೆ ನೈತಿಕ ಸ್ಥೈರ್ಯ ಇನ್ನೊಂದೆಡೆ. ಈ ರೀತಿಯಾಗಿ ಕೋವಿಡ್ ವಿರುದ್ಧ ಹೋರಾಡುತ್ತಿರುವ ದೇಶಗಳ ಬದ್ಧತೆಯನ್ನು ಶ್ಲಾಘಿಸಲು ಹಾಗೂ ಆ ದೇಶಗಳಿಗೆ ಪರ್ವತ ಸದೃಶ ನೈತಿಕ ಸ್ಥೈರ್ಯವನ್ನು ತುಂಬು ಸ್ವಿಝರ್ ಲ್ಯಾಂಡ್ ಪ್ರವಾಸೋದ್ಯಮ ಇಲಾಖೆ ಒಂದು ಹೊಸ ಯೋಚನೆಯನ್ನು ಸಾಕಾರಗೊಳಿಸಿದೆ.

ಅದೇನೆಂದರೆ ಕೋವಿಡ್ ವಿರುದ್ಧ ಸಶಕ್ತವಾಗಿ ಹೋರಾಡುತ್ತಿರುವ ದೇಶಗಳ ರಾಷ್ಟ್ರ ಧ್ವಜಗಳ ಪ್ರತಿರೂಪವನ್ನು ವಿಶ್ವಪ್ರಸಿದ್ಧ ಮ್ಯಾಟರ್ ಹಾರ್ನ್ ಪರ್ವತ ಶ್ರೇಣಿಯ ಮೇಲೆ ಲೇಸರ್ ಬೀಮ್ ಮೂಲಕ ಪಡಿಮೂಡಿಸಿದೆ.

ಅದರಲ್ಲಿ ನಮ್ಮ ದೇಶದ ತ್ರಿವರ್ಣ ಧ್ವಜವೂ ಸೇರಿದೆ ಎಂಬುದು ಭಾರತೀಯರಾದ ನಮಗೆಲ್ಲಾ ಹೆಮ್ಮೆಯ ವಿಷಯವೇ ಸರಿ. ಸುಮಾರು 1000 ಮೀಟರ್ ಗಾತ್ರದ ಬೃಹತ್ ತ್ರಿವರ್ಣ ಧ್ವಜವನ್ನು ಲೇಸರ್ ಕಿರಣಗಳ ಮೂಲಕ ಈ ಪರ್ವತದ ಮೇಲೆ ಪಡಿಮೂಡಿಸಲಾಗಿದೆ. ಸ್ವಿಝರ್ ಲ್ಯಾಂಡ್ ಹಾಗೂ ಇಟಲಿ ದೆಶಗಳ ನಡುವೆ ಪಿರಮಿಡ್ ಆಕಾರದಲ್ಲಿರುವ ಈ ಪರ್ವತ ಇದೆ.

Advertisement

ಇಲ್ಲಿನ ಲೈಟ್ ಆರ್ಟಿಸ್ಟ್ ಗೆರ್ರಿ ಹಾಫ್ ಸ್ಟೆಟ್ಟರ್ ಅವರು ಪಿರಮಿಡ್ ಶೈಲಿಯಲ್ಲಿರುವ 4,478 ಮೀಟರ್ ಎತ್ತರದ ಈ ಹಿಮ ಪರ್ವತದ ಮೇಲೆ ಭಾರತದ ತ್ರಿವರ್ಣ ಧ್ವಜದ ರೂಪವನ್ನು ಪಡಿಮೂಡಿಸಿದ್ದಾರೆ. ಮತ್ತು ಕೋವಿಡ್ ವಿರುದ್ಧ ಹೋರಾಡುತ್ತಿರುವ ಎಲ್ಲಾ ಭಾರತೀಯರಿಗೂ ಆಶಾವಾದ ಹಾಗೂ ಶಕ್ತಿ ಬರಲಿ ಎಂಬ ಸಂದೇಶವನ್ನು ನೀಡಲಾಗಿದೆ.

‘ವಿಶ್ವದಲ್ಲೇ ಅತೀಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತವು ಇದೀಗ ಕೋವಿಡ್ ವೈರಸ್ ವಿರುದ್ಧ ತನ್ನೆಲ್ಲಾ ಶಕ್ತಿಯನ್ನು ಒಗ್ಗೂಡಿಸಿ ಹೋರಾಡುತ್ತಿದೆ. ಹಾಗಾಗಿ ಈ ದೈತ್ಯ ಪರ್ವತದ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ರೂಪಿಸುವ ಮೂಲಕ ನಾವು ಆ ದೇಶದ ಜನರಿಗೆ ಮಾನಸಿಕ ಸ್ಥೈರ್ಯವನ್ನು ತುಂಬಲು ಬಯಸುತ್ತೇವೆ’ ಎಂದು ಸ್ವಿಝ್ ಪ್ರವಾಸೋದ್ಯಮ ಸಂಸ್ಥೆ ಝೆರ್ಮ್ಯಾಟ್ ಮ್ಯಾಟರ್ ಹಾರ್ನ್ ತನ್ನ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದೆ.ಈ ಚಿತ್ರವನ್ನು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ‘ವಿಶ್ವವೇ ಕೋವಿಡ್ ವಿರುದ್ಧ ಹೋರಾಡುತ್ತಿದೆ.

ಈ ಸಾಂಕ್ರಾಮಿಕದ ಮೇಲೆ ಮಾನವೀಯತಯು ಶೀಘ್ರ ಜಯ ಸಾಧಿಸಲಿದೆ’ ಎಂದು ಬರೆದುಕೊಂಡಿದ್ದಾರೆ.ಮಾರ್ಚ್ ಕೊನೆಯಲ್ಲಿ ಪ್ರಾರಂಭವಾಗಿರುವ ಈ ಪರ್ವತ ಲೇಸರ್ ಲೈಟ್ ಶೋ ಇದೀಗ ಕೋವಿಡ್ ವಿರುದ್ಧ ಜನರಿಗೆ ಮತ್ತು ದೇಶಗಳಿಗೆ ಸ್ಥೈರ್ಯ ತುಂಬುವುದಕ್ಕೆ ಮೀಸಲಿಡಲಾಗಿದೆ. ಕೋವಿಡ್ ವಿರುದ್ಧ ಹೋರಾಡುತ್ತಿರವ ವಿಶ್ವದ ವಿವಿಧ ದೇಶಗಳ ರಾಷ್ಟ್ರಧ್ವಜಗಳನ್ನು ಲೇಸರ್ ಕಿರಣದ ಮೂಲಕ ಈ ಪರ್ವತದ ಮೇಲೆ ಪಡಿಮೂಡಿಸಲಾಗುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next