ನಾಗ್ಪುರ: ಬಾರ್ಡರ್- ಗಾವಸ್ಕರ್ ಟ್ರೋಫಿ ಕೂಟದ ಮೊದಲ ದಿನದಾಟವೇ ವಿವಾದವೊಂದು ಎದ್ದಿದೆ. ಬೌಲರ್ ರವೀಂದ್ರ ಜಡೇಜಾಗೆ ಸಿರಾಜ್ ಅವರು ಗುಟ್ಟಾಗಿ ಏನನ್ನೋ ನೀಡುತ್ತಿರುವ ಚಿತ್ರವನ್ನು ಆಸೀಸ್ ಮಾಧ್ಯಮಗಳು ಅಪರಾಧದಂತೆ ಚಿತ್ರಿಸಿದ್ದು, ಟೀಂ ಇಂಡಿಯಾ ಉತ್ತರ ನೀಡಿದೆ.
ಸಿರಾಜ್ ಅವರು ರವೀಂದ್ರ ಜಡೇಜಾಗೆ ನೋವು ನಿವಾರಕ ಕ್ರೀಮ್ ನೀಡಿದ್ದಾರೆ ಎಂದು ಭಾರತೀಯ ತಂಡದ ಮ್ಯಾನೇಜ್ ಮೆಂಟ್ ಐಸಿಸಿ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಗೆ ತಿಳಿಸಿದೆ.
ಇದನ್ನೂ ಓದಿ:ರಾಶಿ ಫಲ: ಧನ ವೃದ್ಧಿ, ಸಂದರ್ಭಕ್ಕೆ ಸರಿಯಾಗಿ ಸಹಾಯ ಒದಗಿ ಕೆಲಸ ಕಾರ್ಯಗಳಲ್ಲಿ ಪ್ರಗತಿ
ವೀಡಿಯೊ ತುಣುಕಿನಲ್ಲಿ, ಜಡೇಜಾ ತನ್ನ ಬಲಗೈಯಿಂದ ಮೊಹಮ್ಮದ್ ಸಿರಾಜ್ ಅವರ ಅಂಗೈಯ ಹಿಂಭಾಗದಿಂದ ವಸ್ತುವನ್ನು ತೆಗೆದುಕೊಳ್ಳುತ್ತಿರುವುದು ಕಂಡುಬಂದಿದೆ. ಜಡೇಜಾ ಬೌಲ್ ಮಾಡಲು ಪ್ರಾರಂಭಿಸುವ ಮೊದಲು ಈ ವಸ್ತುವನ್ನು ಅವರ ಎಡಗೈಯ ತೋರು ಬೆರಳಿಗೆ ಉಜ್ಜಿದರು. ಫೂಟೇಜ್ ನಲ್ಲಿ ಯಾವುದೇ ಹಂತದಲ್ಲಿ ಜಡೇಜಾ ಚೆಂಡಿನ ಮೇಲೆ ಏನನ್ನೂ ಉಜ್ಜುವುದನ್ನು ಕಂಡು ಬಂದಿಲ್ಲ, ಆದರೂ ಆ ಸಮಯದಲ್ಲಿ ಅವರ ಕೈಯಲ್ಲಿ ಚೆಂಡನ್ನು ಹೊಂದಿದ್ದರು.
ಆಸ್ಟ್ರೇಲಿಯಾ 5 ವಿಕೆಟ್‌ಗೆ 120 ರನ್ ಗಳಿಸಿದ್ದಾಗ ಈ ಘಟನೆ ನಡೆದಿದ್ದು, ಆ ವೇಳೆಗಾಗಲೇ ಜಡೇಜಾ ಮಾರ್ನಸ್ ಲ್ಯಾಬುಶೇನ್, ಮ್ಯಾಟ್ ರೆನ್‌ಶಾ ಮತ್ತು ಸ್ಟೀವನ್ ಸ್ಮಿತ್‌ರನ್ನು ಔಟ್ ಮಾಡಿದ್ದರು.
ಮೊದಲ ದಿನದ ಆಟ ಮುಗಿದ ತಕ್ಷಣ ಜಡೇಜಾ ಜೊತೆಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ತಂಡದ ಮ್ಯಾನೇಜರ್ ಅವರಗೆ ಈ ವೀಡಿಯೊ ಕ್ಲಿಪ್ ಅನ್ನು ತೋರಿಸಲಾಗಿದೆ ಎಂದು ತಿಳಿದು ಬಂದಿದೆ. ರೆಫ್ರಿ ಪೈಕ್ರಾಫ್ಟ್ ಘಟನೆಯ ಬಗ್ಗೆ ತಂಡಕ್ಕೆ ತಿಳಿಸಲು ಬಯಸಿದ್ದರು ಮತ್ತು ಜಡೇಜಾ ವಿರುದ್ಧ ಯಾವುದೇ ಆರೋಪ ಹೊರಿಸಲಾಗಿಲ್ಲ ಎಂದು ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ವರದಿ ಮಾಡಿದೆ.