Advertisement

ಅಂತೂ ಇಂತೂ ಮುಗಿದೇ ಹೋಯಿತು ಒಲಿಂಪಿಕ್ಸ್ 2020 !

04:49 PM Aug 09, 2021 | Team Udayavani |

ಈ ಒಲಿಂಪಿಕ್ಸ್ ಭಾರತೀಯರಿಗೆ ಹಲವಾರು ರೀತಿಯಲ್ಲಿ ವಿಶೇಷ. ಕಳುಹಿಸಿದ ಕ್ರೀಡಾಪಟುಗಳಿಂದ ಹಿಡಿದು, ಕಂಡ ಫಲಿತಾಂಶಗಳವರೆಗೆ ಎಲ್ಲವೂ ಅವಿಸ್ಮರಣೀಯ. ಕೆಲವೊಂದು ಅಂಕಿ ಅಂಶಗಳನ್ನು ಸಂಗ್ರಹಿಸಿಡುವ ಪ್ರಯತ್ನ ಇಲ್ಲಿದೆ.

Advertisement

1.ಭಾರತದ ಪರ, ಈ ಬಾರಿ ಹಿಂದೆಂದಿಗಿಂತಲೂ ಅಧಿಕ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು. 2016ರಲ್ಲಿ 116 ಮಂದಿ ಭಾಗವಹಿಸಿದ್ದರೆ, ಈ ವರ್ಷ 127 ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸಿದ್ದರು.

2.ಭಾರತದ ಒಲಿಂಪಿಕ್ಸ್ ಇತಿಹಾಸದಲ್ಲಿಯೇ, ಅತ್ಯಧಿಕ ಪದಕಗಳನ್ನು ದೇಶವು ಬಾಚಿಕೊಂಡಿತು. 2012ರಲ್ಲಿ ಒಟ್ಟು 6(2+4) ಪದಕಗಳು ಬಂದಿದ್ದರೆ, ಈ ಬಾರಿ ಅದನ್ನು ಮೀರಿ 7 (1+2+4) ಪದಕಗಳನ್ನು ಗೆಲ್ಲುವಲ್ಲಿ ಭಾರತ ಸಫಲಗೊಂಡಿತು.

3.ಈ ಬಾರಿಯ ಒಲಿಂಪಿಕ್ಸ್ ಹಾಕಿ ಕ್ರೀಡೆಯಲ್ಲಿ ಪುರುಷ ಹಾಗೂ ಮಹಿಳಾ ಸೆಮಿಫೈನಲ್‌ ಗೆ ಅರ್ಹತೆ ಗಿಟ್ಟಿಸಿಕೊಂಡ ಏಕೈಕ ದೇಶ ಭಾರತ

4.ಭಾರತದ ಪುರುಷರ ಹಾಕಿ ತಂಡ 41 ವರ್ಷಗಳ ಬಳಿಕ ಒಲಿಂಪಿಕ್ ಪದಕವನ್ನು (ಕಂಚು) ಗೆದ್ದುಕೊಂಡಿತು.

Advertisement

ಇದನ್ನೂ ಓದಿ : ಖಾತೆ ಬದಲಾವಣೆ ಬಗ್ಗೆ ಸಮಾಧಾನವೂ ಇಲ್ಲ, ಅಸಮಾಧಾನವೂ ಇಲ್ಲ: ಶ್ರೀರಾಮುಲು

5.ಪಿ.ವಿ.ಸಿಂಧೂ ಎರಡು ಒಲಿಂಪಿಕ್ಸ್ ಪದಕ (2016ರಲ್ಲಿ ಬೆಳ್ಳಿ, ಈ ಬಾರಿ ಕಂಚು) ಗೆದ್ದ ಭಾರತದ ಮೊದಲ ವನಿತಾ ಕ್ರೀಡಾಪಟು ಎನಿಸಿಕೊಂಡರು ಹಾಗೂ ಭಾರತದ ಪರ ಎರಡು ಒಲಿಂಪಿಕ್ಸ್ ಪದಕ ಗೆದ್ದ ಕೇವಲ ಎರಡನೇ ಕ್ರೀಡಾಪಟು (ಸುಶೀಲ್ ಕುಮಾರ್ ಮೊದಲಿಗರು)

6.ನೀರಜ್ ಚೋಪ್ರಾ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದು ಒಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೆಟಿಕ್ಸ್ (ಟ್ರ್ಯಾಕ್ ಆ್ಯಂಡ್ ಫೀಲ್ಡ್) ಪದಕದ ಬರವನ್ನು ನೀಗಿಸಿದರು. ಅದರೊಂದಿಗೆ, ವೈಯಕ್ತಿಕ ಕ್ರೀಡೆಯಲ್ಲಿ ಚಿನ್ನದ ಪದಕ ಗೆದ್ದ ಕೇವಲ ಎರಡನೇ ಕ್ರೀಡಾಪಟು ಎನಿಸಿಕೊಂಡರು (ಅಭಿನವ್ ಬಿಂದ್ರಾ ಮೊದಲಿಗರು – ಶೂಟಿಂಗ್)

7.ಮೀರಾ ಬಾಯ್ ಚಾನು (ವೇಯ್ಟ್ ಲಿಫ್ಟಿಂಗ್ – ಬೆಳ್ಳಿ), ರವಿ ಕುಮಾರ್ ದಹಿಯಾ (ಕುಸ್ತಿ – ಬೆಳ್ಳಿ), ಲವ್ಲೀನಾ(ಬಾಕ್ಸಿಂಗ್ ವೆಲ್ಟರ್ ವೈಟ್ – ಕಂಚು), ಬಜರಂಗ್ ಪೂನಿಯಾ (ಕುಸ್ತಿ – ಕಂಚು) ತಮ್ಮ ಕ್ರೀಡೆ-ವಿಭಾಗದಲ್ಲಿ ಪದಕ ಗೆದ್ದು ಭಾರತವು ಪದಕ ಪಟ್ಟಿಯಲ್ಲಿ ಮೇಲೇರುವಂತೆ ಮಾಡಿದರು.

8.ಕನ್ನಡತಿ ಅದಿತಿ ಅಶೋಕ್ ಗಾಲ್ಫ್ ಕ್ರೀಡೆಯಲ್ಲಿ ಪದಕದ ಭರವಸೆ ಮೂಡಿಸಿ, ಕೊನೆ ಕ್ಷಣದಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಮೊದಲ ಮೂರು ಸುತ್ತು 2ನೇ ಸ್ಥಾನದಲ್ಲಿದ್ದ ಅದಿತಿ, ಕೊನೆಯ ಅಂದರೆ 4ನೇ ಸುತ್ತಿನಲ್ಲಿ 2 ಸ್ಥಾನ ಕುಸಿತ ಕಂಡರು. ಆದಾಗ್ಯೂ, ಒಲಿಂಪಿಕ್ಸ್‌ನಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನ ಇದಾಗಿದೆ. ಅದರಲ್ಲೂ, ವಿಶ್ವ ರ್ಯಾಂಕಿಂಗ್‌ನಲ್ಲಿ 200ನೇ ಸ್ಥಾನದಲ್ಲಿರುವ ಅದಿತಿಯವರ ಈ ಫಲಿತಾಂಶ ಶ್ಲಾಘನೀಯ.

9.ಹಲವರಿಗೆ ಗೊತ್ತೂ ಇರದ ಇಕ್ವೆಸ್ಟ್ರಿಯನ್ ಕ್ರೀಡೆಯಲ್ಲಿ ಫೌವಾದ್ ಮಿರ್ಜಾ ಫೈನಲ್ (ಟಾಪ್ 25) ತಲುಪಿದ ಸಾಧನೆ ಮಾಡಿದರು. ಒಲಂಪಿಕ್ಸ್ ಇಕ್ವೆಸ್ಟ್ರಿಯನ್ ಕ್ರೀಡೆಯಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ.

10.ಒಲಿಂಪಿಕ್ಸ್‌ ನಲ್ಲಿ ಫೆನ್ಸಿಂಗ್ ಕ್ರೀಡೆಗೆ ಅರ್ಹತೆ ಗಿಟ್ಟಿಸಿದ ಮೊದಲ ಭಾರತೀಯ ಕ್ರೀಡಾಪಟು ಎನಿಸಿಕೊಂಡ ಸಿ.ಎ.ಭವಾನಿ ದೇವಿ, ಮೊದಲ ಪಂದ್ಯವನ್ನೂ ಗೆದ್ದಿದ್ದು ಇತಿಹಾಸ. ಎರಡನೇ ಪಂದ್ಯದಲ್ಲಿ ಸೋತು ಹೊರಬಂದರು.

11.ನೇತ್ರಾ ಕುಮಾನನ್ ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ಸೈಲರ್ (ನಾವಿಕ) ಎನಿಸಿಕೊಂಡರು.

12.ಸಾಜನ್ ಪ್ರಕಾಶ್ ಮತ್ತು ಶ್ರೀಹರಿ ನಟರಾಜ್ ಅವರು ಈಜು ಕ್ರೀಡೆಯಲ್ಲಿ ‘ಎ’ ಅರ್ಹತಾ ಮಾನದಂಡವನ್ನು ಸಾಧಿಸುವ ಮೂಲಕ ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಭಾರತದ ಮೊದಲ ಈಜುಗಾರರಾಗಿದ್ದಾರೆ.

13.ಒಲಿಂಪಿಕ್ಸ್‌ ರೋವಿಂಗ್‌ನಲ್ಲಿ ಸೆಮಿಫೈನಲ್ ತಲುಪಿದ ಮೊದಲ ಭಾರತೀಯ ಜೋಡಿ ಎನಿಸಿಕೊಂಡ ಅರ್ಜುನ್ ಲಾಲ್ ಜಾಟ್ ಮತ್ತು ಅರವಿಂದ್ ಸಿಂಗ್

  1. ಡಿಸ್ಕಸ್ ಥ್ರೋ ಆಟದಲ್ಲಿ ಫೈನಲ್ ತಲುಪಿ ಅಚ್ಚರಿ ಮೂಡಿಸಿದ್ದ ಕಮಲ್‌ಪ್ರೀತ್ ಕೌರ್, ಅಂತಿಮ ಸುತ್ತಿನಲ್ಲಿ 6ನೇ ಸ್ಥಾನ ಪಡೆದು, ಭಾರತದ ಅಥ್ಲೀಟ್‌ಗಳಿಗೆ ಸ್ಪೂರ್ತಿಯ ಸೆಲೆಯಾಗಿ ನಿಂತಿದ್ದಾರೆ.
  2. 4*400 ಮೀಟರ್ ಪುರುಷರ ರಿಲೆಯಲ್ಲಿ ಭಾರತದ ತಂಡ ಏಷ್ಯನ್ ದಾಖಲೆಯನ್ನು ಮುರಿದು, ನಾವೂ ಟ್ರ್ಯಾಕ್ ಈವೆಂಟ್ಸ್‌ಗಳಲ್ಲಿ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ.

ಇನ್ನೂ ಹಲವಾರು…. ಕ್ರಿಕೆಟ್ ಆಟಗಾರರನ್ನೇ ಆರಾಧಿಸುವವರಿಗೆ ಅದೆಷ್ಟೋ ಹೊಸ ಕ್ರೀಡೆಗಳ ಪರಿಚಯ ಆಗಿದ್ದು ಸುಳ್ಳಲ್ಲ. ರಾಷ್ಟ್ರೀಯ ಕ್ರೀಡೆ ಹಾಕಿಯಲ್ಲಿ ಮತ್ತೊಮ್ಮೆ ಪಾರುಪತ್ಯ ಸ್ಥಾಪಿಸಿದ್ದು, ಶ್ರೀಮಂತರ ಕ್ರೀಡೆ ಎಂದು ಕರೆಯಲ್ಪಡುವ ಗಾಲ್ಫ್, ಇಕ್ವೆಸ್ಟ್ರಿಯನ್‌ ಕಡೆ ಭಾರತೀಯರನ್ನು ಸೆಳೆದದ್ದು, ಹಲವಾರು ಕ್ರೀಡಾಪಟುಗಳು ಕೊನೆ ಕ್ಷಣದವರೆಗೂ ಹೋರಾಡಿದ್ದು ಎಲ್ಲದರ ಪರಿಣಾಮ, ಯಾರಿಗೂ ಪರಿಚಿತರಲ್ಲದವರು ಇಂದು ಎಲ್ಲರ ಮನೆಮಾತಾಗಿದ್ದಾರೆ.

ಸಿನಿಮಾ, ಕ್ರಿಕೆಟ್‌ಪಟುಗಳನ್ನೇ ಸೆಲೆಬ್ರಿಟಿ ಎಂದು ಪೂಜಿಸುವ ಈ ದೇಶದಲ್ಲಿ ಮುಂದಿನ ದಿನಗಳಲ್ಲಿ ಇಂತಹ ಕ್ರೀಡಾಪಟುಗಳನ್ನೂ ಆರಾಧಿಸಿ, ಪ್ರೋತ್ಸಾಹಿಸಿದರೆ, ಮತ್ತಷ್ಟು ಸಾಧಕರು ಹೊರಹೊಮ್ಮುವುದರಲ್ಲಿ ಯಾವುದೇ ಸಂಶಯವಿಲ್ಲ!

– ಇಂದುಧರ ಹಳೆಯಂಗಡಿ

ಇದನ್ನೂ ಓದಿ : ಹಿರಿಯ ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ಸುಧಾರಾಣಿ-ಶೃತಿ-ಮಾಳವಿಕಾ

Advertisement

Udayavani is now on Telegram. Click here to join our channel and stay updated with the latest news.

Next