Advertisement

ಫುಟ್‌ಬಾಲ್‌ ವಿಶ್ವಕಪ್‌ಗೆ ಭಾರತ ತಂಡ: ಡಾ|ಚೆಮ್ಮನೂರು

11:57 PM Dec 02, 2022 | Team Udayavani |

ಮಂಗಳೂರು: ಮುಂದಿನ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಪಂದ್ಯಾವಳಿಯಲ್ಲಿ ಭಾರತೀಯ ತಂಡ ಪಾಲ್ಗೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದ್ದು, ಇದಕ್ಕಾಗಿ ಉತ್ತಮ ಆಟಗಾರರ ತಂಡ ವೊಂದನ್ನು ಸಜ್ಜು ಗೊಳಿಸುವ ಉದ್ದೇಶ ಹೊಂದಿರುವುದಾಗಿ ಚೆಮ್ಮನ್ನೂರು ಸಮೂಹ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ| ಬೋಬಿ ಚೆಮ್ಮನೂರು (ಬೋಚೆ) ತಿಳಿಸಿದ್ದಾರೆ.

Advertisement

ಮಾದಕ ದ್ರವ್ಯದ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಖ್ಯಾತ ಫುಟ್‌ಬಾಲ್‌ ಆಟಗಾರ ಡೀಗೊ ಮರಡೋನ ಅವರ “ಹ್ಯಾಂಡ್‌ ಆಫ್‌ ಗಾಡ್‌’ ಚಿನ್ನದ ಮೂರ್ತಿಯೊಂದಿಗೆ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ನಡೆಯುತ್ತಿರುವ ಕತಾರ್‌ ದೇಶಕ್ಕೆ ತೆರಳುತ್ತಿರುವ ಅವರು ಶುಕ್ರವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದರು.

“ಕೆಲವೇ ಲಕ್ಷ ಜನಸಂಖ್ಯೆ ಇರುವ ದೇಶಗಳು ಫುಟ್‌ಬಾಲ್‌ನಲ್ಲಿ ವಿಶ್ವದ ಉನ್ನತ ರ್‍ಯಾಂಕ್‌ನಲ್ಲಿವೆ. ಆದರೆ, 140 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ 11 ಮಂದಿ ಫುಟ್‌ಬಾಲ್‌ ಆಟಗಾರರನ್ನು ಆಯ್ಕೆ ಮಾಡಲು ಸಾಧ್ಯವಾಗದಿರುವುದು ಅತ್ಯಂತ ಖೇದಕರ. ಆದ್ದರಿಂದ ಆರ್ಜೆಂಟೀನಾ ಫುಟ್‌ಬಾಲ್‌ ಅಸೋಸಿಯೇಶನ್‌ ಮೂಲಕ ನಮ್ಮ ಉತ್ತಮ ಆಟಗಾರರಿಗೆ ತರಬೇತಿ ನೀಡುವ ಉದ್ದೇಶವನ್ನೂ ಹೊಂದಲಾಗಿದೆ. ತಂಡದ ರಚನೆ ಕೇಂದ್ರದ ಮಟ್ಟದಲ್ಲಿ ನಡೆಯಬೇಕಾಗಿರುವುದರಿಂದ ಬಳಿಕ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು. ಈ ನಿಟ್ಟಿನಲ್ಲಿ ವಿವಿಧ ಕ್ರೀಡಾಪಟುಗಳನ್ನು ಭೇಟಿ ಮಾಡಲಾಗಿದ್ದು, ಕೇರಳದಿಂದ ಪಿ.ಟಿ.ಉಷಾ ಅವರೂ ನಮ್ಮೊಂದಿಗೆ ಕೈಜೋಡಿಸಿದ್ದಾರೆ’ ಎಂದರು.

ಶಾಲಾ-ಕಾಲೇಜಿಗೆ ಭೇಟಿ
ಜನಜಾಗೃತಿ ಕಾರ್ಯಕ್ರಮ ಭಾಗವಾಗಿ ವಿವಿಧ ಶಾಲೆ-ಕಾಲೇಜುಗಳಿಗೆ ಭೇಟಿ ನೀಡಿ ಮಾದಕ ವಸ್ತು ಸೇವನೆಯಿಂದ ಆಗುವ ದುಷ್ಪರಿಣಾಮದ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಗುತ್ತದೆ. ಈಗಾಗಲೇ 70-80 ವಿದ್ಯಾ ಸಂಸ್ಥೆಗಳಿಗೆ ಭೇಟಿ ನೀಡಲಾಗಿದೆ. ಉಡುಪಿ, ಮಣಿಪಾಲ, ಭಟ್ಕಳ, ಕಾರವಾರ ಗೋವಾ ಮೂಲಕ ಮುಂಬಯಿಗೆ ತೆರಳಿ ಅಲ್ಲಿಂದ ಕತಾರ್‌ಗೆ ತೆರಳುವುದಾಗಿ ತಿಳಿಸಿದರು.

ತಪ್ಪಿತಸ್ಥ ಭಾವನೆಯಿಂದ ಮೂರ್ತಿ
ಡೀಗೋ ಮರಡೋನ ಅವರೂ ಮಾದಕ ವ್ಯಸನಿಯಾಗಿ ಬಳಿಕ ತ್ಯಜಿಸಿದ್ದರು. ಈ ಹಿಂದೆ ಅವರನ್ನು ಭೇಟಿಯಾಗಿದ್ದಾಗ ಸುಮಾರು 6 ಲಕ್ಷ ರೂ. ಮೊತ್ತದ ಚಿನ್ನದ ಫುಟ್‌ಬಾಲ್‌ ಉಡುಗೊರೆಯಾಗಿ ಕೊಡಲು ಹೋಗಿದ್ದೆ. ಆದರೆ ಅವರು ಅದನ್ನು ಸ್ವೀಕರಿಸಿರಲಿಲ್ಲ. ಬದಲಾಗಿ ನನ್ನದೊಂದು ಚಿನ್ನದ ಮೂರ್ತಿಯನ್ನು ನಿರ್ಮಿಸಿ ಕೊಡು ಎಂದು ಹೇಳಿದ್ದರು. ಅದನ್ನು ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಅವರ ನಿಧನದ ಬಳಿಕ ತಪ್ಪಿತಸ್ಥ ಭಾವನೆ ಕಾಡಿತು. ಆದ್ದರಿಂದ 1 ಕೋಟಿ ರೂ. ವೆಚ್ಚದಲ್ಲಿ ಮೂರ್ತಿ ನಿರ್ಮಿಸಿ ಕತಾರ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್‌ ಫುಟ್‌ಬಾಲ್‌ ಪಂದ್ಯಾಟದ ಮೈದಾನಕ್ಕೆ ತೆಗೆದುಕೊಂಡು ಹೋಗುತ್ತಿದ್ದು, ಬಳಿಕ ಅಲ್ಲಿನ ಮ್ಯೂಸಿಯಂನಲ್ಲಿ ಇರಿಸಲಾಗುವುದು ಎಂದರು.

Advertisement

ರೀಲ್ಸ್ -ಸೆಲ್ಫಿ ಕಾಂಟೆಸ್ಟ್‌
ಮರಡೋನ ಮೂರ್ತಿಯೊಂದಿಗೆ ರೀಲ್ಸ್ -ಸೆಲ್ಫಿ ಕಾಂಟೆಸ್ಟ್‌ ಆಯೋಜಿಸಲಾಗಿದ್ದು, ಬೋಚೆ ಇನ್‌ಸ್ಟಾ ಪೇಜ್‌ಗೆ ಶೇರ್‌ ಅಥವಾ ಟ್ಯಾಗ್‌ ಮಾಡಲು ಅವಕಾಶವಿದೆ. ಇದರಲ್ಲಿ ಅದೃಷ್ಟಶಾಲಿಗಳಿಗೆ ಕತಾರ್‌ನಲ್ಲಿ ಫುಟ್‌ಬಾಲ್‌ ಪಂದ್ಯಾಟ ವೀಕ್ಷಿಸಲು ಉಚಿತವಾಗಿ ವ್ಯವಸ್ಥೆ ಮಾಡಲಾಗುವುದು ಎಂದರು.

ದ.ಕ. ಜಿಲ್ಲಾ ಫುಟ್‌ಬಾಲ್‌ ಅಸೋಸಿಯೇಶನ್‌ ಅಧ್ಯಕ್ಷ ಡಿ.ಎಂ. ಅಸ್ಲಾಂ, ಪ್ರಮುಖರಾದ ಜೋಜಿ ಎಂ.ಜೆ., ಸೆಲಿನಾ, ಲವಿಟಾ ಮಿನೇಜಸ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next