ಬ್ರಿಸ್ಬೇನ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪಾಕಿಸ್ಥಾನ ಕ್ರಿಕೆಟ್ ತಂಡ ಇದೀಗ ಮೈದಾನದ ಹೊರಗಿನ ಘಟನೆಯೊಂದರಿಂದ ಸುದ್ದಿಯಲ್ಲಿದೆ. ಶಹೀನ್ ಶಾ ಅಫ್ರಿದಿ, ಯಾಸಿರ್ ಶಾ ಮತ್ತು ನಾಸೀಮ್ ಶಾ ಸೇರಿದಂತೆ ಪಾಕ್ ಕ್ರಿಕೆಟ್ ತಂಡದ ಐವರು ಆಟಗಾರರು ಊಟಕ್ಕೆಂದು ಬ್ರಿಸ್ಬೇನ್ ನಲ್ಲಿರುವ ಭಾರತೀಯ ರೆಸ್ಟೋರೆಂಟ್ ಒಂದಕ್ಕೆ ಕ್ಯಾಬ್ ನಲ್ಲಿ ಹೋಗಿದ್ದಾರೆ.
ಆ ಕ್ಯಾಬ್ ಚಾಲಕ ಭಾರತೀಯನಾಗಿದ್ದರು ಮತ್ತು ತನ್ನ ಕ್ಯಾಬ್ ನಲ್ಲಿದ್ದ ಪಾಕಿಸ್ಥಾನೀ ಆಟಗಾರರನ್ನು ರೆಸ್ಟೋರೆಂಟಿಗೆ ಬಿಟ್ಟ ನಂತರ ಅವರ ಕೈಯಿಂದ ಬಾಡಿಗೆಯನ್ನು ಪಡೆದುಕೊಳ್ಳಲು ನಿರಾಕರಿಸಿದ್ದರು. ಇದಕ್ಕೆ ಪ್ರತಿಯಾಗಿ ಈ ಐವರೂ ಪಾಕಿಸ್ಥಾನೀ ಆಟಗಾರರು ಈ ಕ್ಯಾಬ್ ಚಾಲಕನನ್ನು ತಮ್ಮ ಜೊತೆಯಲ್ಲೇ ರೆಸ್ಟೋರೆಂಟಿಗೆ ಕರೆದುಕೊಂಡು ಹೋಗಿ ಜೊತೆಯಲ್ಲೇ ಊಟ ಮಾಡಿಸಿದ್ದಾರೆ.
ಈ ಘಟನೆಯನ್ನು ಎಸಿಬಿ ರೆಡಿಯೋ ಉದ್ಘೋಷಕಿ ಅಲಿಸನ್ ಮಿಶೆಲ್ ಅವರು ಆಸೀಸ್ ಮಾಜೀ ಆಟಗಾರ ಮಿಶೆಲ್ ಜಾನ್ಸನ್ ಅವರಿಗೆ ಹೇಳುವ ಮೂಲಕ ಈ ವಿಚಾರ ಬೆಳಕಿಗೆ ಬಂದಿದೆ. ಮತ್ತು ಇದೀಗ ಅಲಿಸನ್ ಮತ್ತು ಜಾನ್ಸನ್ ಅವರ ನಡುವಿನ ರೆಡಿಯೋ ಸಂಭಾಷಣೆ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಅಂದ ಹಾಗೆ ಭಾರತೀಯ ಕ್ಯಾಬ್ ಚಾಲಕ ಪಾಕಿಸ್ಥಾನಿ ಕ್ರಿಕೆಟಿಗರನ್ನು ಬಾಡಿಗೆ ಹಣ ಪಡೆದುಕೊಳ್ಳದೇ ರೆಸ್ಟೋರೆಂಟಿಗೆ ಬಿಟ್ಟ ವಿಚಾರ ಮತ್ತು ಇದಕ್ಕೆ ಪ್ರತಿಯಾಗಿ ಅವರು ತಮ್ಮ ಜೊತೆಯಲ್ಲಿ ಚಾಲಕನನ್ನು ಊಟಕ್ಕೆ ಕರೆದುಕೊಂಡ ಹೋದ ವಿಚಾರವನ್ನು ಸ್ವತಃ ಆ ಭಾರತೀಯ ಕ್ಯಾಬ್ ಚಾಲಕನೇ ಅಲಿಸನ್ ಅವರಿಗೆ ತಿಳಿಸಿದ್ದಾರೆ.
ಅಲಿಸನ್ ಅವರು ಗಬ್ಬಾ ಸ್ಟೇಡಿಯಂಗೆ ಈ ವ್ಯಕ್ತಿಯ ಕ್ಯಾಬ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಆತನನ್ನು ಮಾತಿಗೆಳೆದಾಗ ಆತ ಈ ಕುತೂಹಲಕಾರಿ ವಿಚಾರವನ್ನು ಅಲಿಸನ್ ಅವರ ಹತ್ತಿರ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಭಾರತೀಯ ಕ್ಯಾಬ್ ಚಾಲಕನ ಅಭಿಮಾನ ಮತ್ತು ಪಾಕ್ ಕ್ರಿಕೆಟಿಗರ ಔದಾರ್ಯ ಇದೀಗ ನಿಜ ಕ್ರೀಡಾಸ್ಪೂರ್ತಿಯ ಕಥೆಯಾಗಿ ಎಲ್ಲೆಡೆ ಹರಿದಾಡುತ್ತಿದೆ.