ಹೊಸದಿಲ್ಲಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಬಹಳ ಗಡಿಬಿಡಿಯಲ್ಲಿ, ಒಂದು ವಾರ ಮುಂಚಿತವಾಗಿ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಿರುವುದು ಕುತೂಹಲದ ಸಂಗತಿಯಾಗಿದೆ.
ಸೆ. 4ರಂದು ಪ್ರಕಟಗೊಳ್ಳಬೇಕಿದ್ದ ಈ ತಂಡವನ್ನು ಆ. 29ರ ರಾತ್ರಿ ದಿಢೀರನೇ ಹೆಸರಿಸಲಾಗಿತ್ತು. ಇದಕ್ಕೇನು ಕಾರಣ ಗೊತ್ತೇ? ಭಾರತದ ಕ್ರಿಕೆಟಿಗರ ನೂತನ ಜೆರ್ಸಿಯನ್ನು ತಯಾರಿಸಲು ‘ನೈಕ್ ಕಂಪೆನಿ’ ಹೆಚ್ಚಿನ ಕಾಲಾವಕಾಶ ಕೇಳಿದ್ದು!
ಭಾರತ ತಂಡದ ‘ಟೈಟಲ್ ಸ್ಪಾನ್ಸರ್’ ಈಗ ಬದಲಾಗಿದ್ದು, ಸೆ. ಒಂದರಿಂದ ಒಪ್ಪೊ ಬದಲು ‘ಬೈಜುಸ್’ ಕಾಣಿಸಿಕೊಳ್ಳಲಿದೆ. ಆಯ್ಕೆಯಾದ ಕ್ರಿಕೆಟಿಗರ ಜೆರ್ಸಿ ಮೇಲೆ ಇದರ ಲಾಂಛನವನ್ನು ಮುದ್ರಿಸಬೇಕಿದೆ. ಇದಕ್ಕೆ ‘ನೈಕ್’ ಹೆಚ್ಚಿನ ಸಮಯ ಕೇಳಿತ್ತು ಎಂಬುದಾಗಿ ಬಿಸಿಸಿಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಜೊಹ್ರಿ ಹೇಳಿದ್ದಾರೆ.
ಆಯ್ಕೆ ಸಮಿತಿಯ ಸಂದಿಗ್ಧ
ಭಾರತದ ರಾಷ್ಟ್ರೀಯ ಆಯ್ಕೆ ಸಮಿತಿಗೂ ಇದು ತಿಳಿದಿರಲಿಲ್ಲ. ಗುರುವಾರ ಬೆಳಗ್ಗೆ ದಿಢೀರನೇ ವಿಷಯ ತಿಳಿಸಿದ ಬಿಸಿಸಿಐ, ಕೂಡಲೇ ಟಿ20 ತಂಡವನ್ನು ಪ್ರಕಟಿಸಬೇಕೆಂದು ಸೂಚಿಸಿತು. ಇದರಿಂದ ಆಯ್ಕೆ ಮಂಡಳಿ ಸಂದಿಗ್ಧಕ್ಕೆ ಸಿಲುಕಿತು. ಏಕೆಂದರೆ, ಸಮಿತಿಯ ಸದಸ್ಯರೆಲ್ಲ ಒಂದೊಂದು ಕಡೆ ಇದ್ದರು. ಒಬ್ಬರು ತಿರುವನಂತಪುರದಲ್ಲಿ, ಮತ್ತೂಬ್ಬರು ಹೊಸದಿಲ್ಲಿಯಲ್ಲಿ, ಇನ್ನೊಬ್ಬರು ಬೆಂಗಳೂರಲ್ಲಿದ್ದರು. ಒಬ್ಬರಂತೂ ವೆಸ್ಟ್ ಇಂಡೀಸಿನ ಕಿಂಗ್‌ಸ್ಟನ್‌ಗೆ ತೆರಳಿದ್ದರು!
ದೂರವಾಣಿಯಲ್ಲಿ ಸಂಪರ್ಕ
ಸೀಮಿತ ಅವಧಿಯಲ್ಲಿ ಇವರೆಲ್ಲ ಒಂದೆಡೆ ಸೇರುವುದು ಸಾಧ್ಯವೇ ಇರಲಿಲ್ಲ. ಕೊನೆಗೆ ಬೇರೆ ಉಪಾಯ ಕಾಣದೆ ದೂರವಾಣಿಯಲ್ಲಿ ಸಂಪರ್ಕ ಸಾಧಿಸಿ, ಇಲ್ಲೇ ಚರ್ಚೆ ನಡೆಸಿ ಟಿ20 ತಂಡವನ್ನು ಹೆಸರಿಸಲಾಯಿತು!