ಬೆಂಗಳೂರು: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಕೂಟಕ್ಕೆ ಇದೇ ಮೊದಲ ಬಾರಿಗೆ ಪ್ರವೇಶಿಸಿ ಚೊಚ್ಚಲ ಕಿರೀಟ ಗೆಲ್ಲುವ ಸುನೀಲ್ ಚೆಟ್ರಿ ನೇತೃತ್ವದ ಬೆಂಗಳೂರು ಎಫ್ ಸಿ ತಂಡದ ಕನಸು ಭಗ್ನಗೊಂಡಿದೆ.
ಉದ್ಯಾನಗರಿಯ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದ ಆರಂಭದಲ್ಲಿ ಸುನೀಲ್ ಚೆಟ್ರಿ ಗೋಲಿನ ಮುನ್ನಡೆ ತಂದುಕೊಟ್ಟರಾದರೂ ನಂತರದ ಹಂತದಲ್ಲಿ ಬೆಂಗಳೂರು ಹೆಡೆ ಮುರಿ ಕಟ್ಟಿದ ಚೆನ್ನೈಯನ್ ಎಫ್ ಸಿ 3-2 ಗೋಲುಗಳಿಂದ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಬೆಂಗಳೂರು ಆರಂಭಿಕ ಶೂರತ್ವ: ತವರಿನ ಅಭಿಮಾನಿಗಳ ಅಪಾರ ಬೆಂಬಲದೊಂದಿಗೆ ಬೆಂಗಳೂರು ತಂಡ ಕಣಕ್ಕಿಳಿಯಿತು. ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಫೈನಲ್‌ಗೆ ಏರಿದ್ದ ಬೆಂಗಳೂರು ತಂಡವು ಅಷ್ಟೇ ಹುರುಪಿನ ಆಟ ಪ್ರದರ್ಶಿಸಿತು. ಪಂದ್ಯ ಆರಂಭವಾಗಿ 9ನೇ ನಿಮಿಷದಲ್ಲಿ ಸುನೀಲ್‌ಚೆಟ್ರಿ ಮೊದಲ ಗೋಲು ದಾಖಲಿಸಿದರು. ತಂಡಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು.
ಮೇಲ್ಸನ್ ಅಬ್ಬರ, ತಿರುಗಿ ಬಿದ್ದ ಚೆನ್ನೈಯನ್: ಬೆಂಗಳೂರು ತಂಡ 1-0 ಅಂತರಕ್ಕೆ ಗೋಲಿನ ಸಂಖ್ಯೆ ಹೆಚ್ಚಿಸಿಕೊಂಡ ಬೆನ್ನಲ್ಲೇ ಚೆನ್ನೈಯನ್ ತಂಡ ಸಿಡಿದೆದ್ದು ಆಟ ಪ್ರದರ್ಶಿಸಿತು. ಪಂದ್ಯದ 17ನೇ ನಿಮಿಷ ಆಗುವಷ್ಟರಲ್ಲಿ ಚೆನ್ನೈಯನ್ ತಂಡಕ್ಕೆ ಮೈಲ್‌ಸನ್ ಗೋಲು ತಂದುಕೊಟ್ಟರು. ಇದರಿಂದ ಚೆನ್ನೈ 1-1ರಿಂದ ಸಮಸಾಧಿಸಿಕೊಂಡಿತು. ಇದಾದ ನಂತರದ ಹಂತದಲ್ಲಿ ಬೆಂಗಳೂರು ತಂಡ ಗೋಲುಗಳಿಸಲು ಸಾಕಷ್ಟು ಪ್ರಯತ್ನ ನಡೆಸಿ ವಿಫಲವಾಯಿತು. ಆದರೆ ಮೇಲ್ಸನ್ ಬೆಂಗಳೂರು ಪಾಲಿಗೆ ಮತ್ತೂಮ್ಮೆ ಕಹಿಯಾದರು. ಪಂದ್ಯದ 45ನೇ ನಿಮಿಷದಲ್ಲಿ ಅವರು ತಂಡಕ್ಕೆ 2ನೇ ಗೋಲು ಒದಗಿಸಿಕೊಟ್ಟರು. ವೈಯಕ್ತಿಕವಾಗಿ ಅದು 2ನೇ ಗೋಲು ಕೂಡ ಆಗಿತ್ತು. ಹೀಗಾಗಿ ಚೆನ್ನೈಯನ್ ತಂಡ ಗೊಲಿನ ಸಂಖ್ಯೆಯನ್ನು 2-1ಕ್ಕೆ ಏರಿಸಿಕೊಂಡಿತು. ಆದರೆ ಪಂದ್ಯದ 67ನೇ ನಿಮಿಷದಲ್ಲಿ ರಾಫಾಯೆಲ್ ಆಗುಸ್ಟೊ ಗೋಲು ದಾಖಲಿಸಿದರು. ತಂಡಕ್ಕೆ 3-1 ಅಂತರದಿಂದ ಮುನ್ನಡೆ ತಂದುಕೊಟ್ಟು ಗೆಲುವನ್ನು ಖಾತ್ರಿಗೊಳಿಸುವ ಸೂಚನೆ ನೀಡಿದರು.
ಮಂಕಾದ ಬೆಂಗಳೂರು: ಪಂದ್ಯದ 70ನೇ ನಿಮಿಷದಲ್ಲಿ ಸುನೀಲ್ ಚೆಟ್ರಿ ಪಡೆ 2 ಗೋಲು ದಾಖಲಿಸುವ ಅವಕಾಶವಿತ್ತು. ಆದರೆ ಒಂದರ ಬೆನ್ನ ಹಿಂದೆ ಒಂದರಂತೆ ಅವಕಾಶಗಳು ಮಿಸ್ ಆದವು. ಇಂದು ಚೆಟ್ರಿ ಪಡೆಯ ಚಿಂತೆಯನ್ನು ಹೆಚ್ಚಿಸಿತು. ಆದರೆ 90 ಪ್ಲಸ್ 2ನೇ ನಿಮಿಷದಲ್ಲಿ ಬೆಂಗಳೂರು ತಂಡದ ಪರ ಫೆಡೊರ್ ಗೋಲು ದಾಖಲಿಸಿದರು. ಹೀಗಾಗಿ ಬೆಂಗಳೂರು ಗೋಲಿನ ಅಂತರವನ್ನು 3-2ಕ್ಕೆ ತಗ್ಗಿಸಿಕೊಂಡಿತು. ಮುಂದಿನ 3 ನಿಮಿಷದಲ್ಲಿ ಬೆಂಗಳೂರು ಗೋಲು ದಾಖಲಿಸಿ ಸಮಗೊಳಿಸಬಹುದು ಎನ್ನುವ ಸಣ್ಣ ನಿರೀಕ್ಷೆ ಅಭಿಮಾನಿಗಳದ್ದಾಗಿತ್ತು. ಆದರೆ ಇದಕ್ಕೆ ಚೆನ್ನೈಯನ್ ಆಟಗಾರರು ಅವಕಾಶವೇ ನೀಡಲಿಲ್ಲ. ಹೀಗಾಗಿ ಸೋಲಿಗೆ ಶರಣಾಗಬೇಕಾಯಿತು.
2ನೇ ಸಲ ಪ್ರಶಸ್ತಿ ಗೆದ್ದ ಚೆನ್ನೈಯನ್
2015ರಲ್ಲಿ ಚೆನ್ನೈಯನ್ ತಂಡ 3-2 ಗೋಲುಗಳಿಂದ ಗೋವಾ ತಂಡವನ್ನು ಸೋಲಿಸಿ ಮೊದಲ ಸಲ ಟ್ರೋಫಿ ಜಯಿಸಿತ್ತು. ಇದಕ್ಕೂ ಮೊದಲು ಕೂಟದ ಮೊದಲ ಆವೃತ್ತಿ 2014ರಲ್ಲೂ ಚೆನ್ನೈಯನ್ ಎಫ್ ಸಿ ತಂಡ ಉತ್ತಮ ಆಟ ಪ್ರದರ್ಶಿಸಿತು. 3ನೇ ಸ್ಥಾನ ಪಡೆದುಕೊಂಡಿತ್ತು. ಇದೀಗ ನಾಲ್ಕನೇ ಆವೃತ್ತಿ ಟ್ರೋಫಿಯನ್ನು ಜಯಿಸಿದೆ.
ಐಎಸ್‌ಎಲ್ ಚಾಂಪಿಯನ್ಸ್
2014 -ಅಟ್ಲೆಟಿಕೊ ಡಿ ಕೋಲ್ಕತಾ
2015-ಚೆನ್ನೈಯನ್ ಎಫ್ ಸಿ
2016-ಅಟ್ಲೆಟಿಕೊ ಡಿ ಕೋಲ್ಕತಾ
2017-18- ಚೆನ್ನೈಯನ್ ಎಫ್ ಸಿ