ಹೊಸದಿಲ್ಲಿ: ಕೋವಿಡ್ ಹಿನ್ನೆಲೆಯಲ್ಲಿ ಅಮೆರಿಕದ ವಿಶ್ವವಿದ್ಯಾಲಯಗಳು ಆನ್‌ಲೈನ್‌ನಲ್ಲೇ ವರ್ಷಪೂರ್ತಿ ತರಗತಿಗಳನ್ನು ನಡೆಸಲು ತೀರ್ಮಾನಿಸಿದರೆ, ಇಲ್ಲಿ ಕಲಿಯುತ್ತಿರುವ ವಿದೇಶಿ ವಿದ್ಯಾರ್ಥಿಗಳು ತಮ್ಮ ದೇಶಕ್ಕೆ ಮರಳಬೇಕಾಗುತ್ತದೆ ಎಂಬ ಅಮೆರಿಕದ ವಲಸೆ ಪ್ರಾಧಿಕಾರದ ಇತ್ತೀಚಿನ ಆದೇಶ, ಅಮೆರಿಕದಲ್ಲಿನ ಭಾರತೀಯ ವಿದ್ಯಾರ್ಥಿಗಳಲ್ಲಿ ಆತಂಕ ಹುಟ್ಟು ಹಾಕಿದೆ.
ಶಿಕ್ಷಣ ಅರ್ಧಕ್ಕೆ ಮೊಟಕುಗೊಂಡರೆ ತಮ್ಮ ಮುಂದಿನ ಭವಿಷ್ಯ ಏನು?, ಶಿಕ್ಷಣಕ್ಕಾಗಿ ಮಾಡಿರುವ ಸಾಲದ ಕಥೆಯೇನು?, ಮುಂದೆ ಉದ್ಯೋಗ ಪಡೆಯುವುದಾದರೂ ಹೇಗೆ? ಎಂಬ ಚಿಂತೆ ಇವರನ್ನು ಕಾಡುತ್ತಿದೆ. ಪ್ರಸ್ತುತ ಅಮೆರಿಕದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ 1,94,556 ಮಂದಿ ಭಾರತೀಯ ಮೂಲದವರು ಅಧ್ಯಯನ ನಡೆಸುತ್ತಿದ್ದಾರೆ. ಇವರೆಲ್ಲ ಈಗ ಗಡೀಪಾರಾಗುವ ಆತಂಕ ಎದುರಿಸುತ್ತಿದ್ದಾರೆ.
“ಈ ಆದೇಶ ಜಾರಿಯಾದರೆ, ಇದ್ದಕ್ಕಿದ್ದಂತೆ ನನ್ನ ವಾಸ್ತವ್ಯಕ್ಕೆ ಕಾನೂನಿನ ಮಾನ್ಯತೆ ರದ್ದಾಗುತ್ತದೆ. ಹೀಗಾಗಿ, ಕೋವಿಡ್ ಸಂಕಷ್ಟದ ಈ ಸಮಯದಲ್ಲಿ ಗಡೀಪಾರಾಗುವ ಭಯ ನನ್ನನ್ನು ಕಾಡುತ್ತಿದೆ. ಒಂದು ವೇಳೆ, ನನ್ನನ್ನು ಈಗ ಗಡೀಪಾರು ಮಾಡಿದರೆ, ಕೆಲ ತಿಂಗಳ ಅನಂತರ ಹಿಂದಿರುಗಿ ಬಂದು ಶಿಕ್ಷಣ ಮುಂದು ವರಿಸಲು ಸಾಧ್ಯವೇ ಎಂಬ ಬಗ್ಗೆ ನನಗೆ ಯಾವುದೇ ಖಚಿತತೆ ಇಲ್ಲ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಡ್ನೂಕ್ ವಿವಿಯಲ್ಲಿ ಓದುತ್ತಿರುವ ಶೋಭನಾ ಮುಖರ್ಜಿ. “ಹೀಗಾದರೆ, ಈ ಸೆಮಿಸ್ಟರ್‌ನ ಕಥೆ ಏನು? ಪರೀಕ್ಷೆ ತೆಗೆದುಕೊಳ್ಳಲು ನನಗೆ ಅನುಮತಿ ದೊರೆಯುವುದೇ? ಇಲ್ಲವೇ? ಎಂಬ ಭಯ ನನ್ನನ್ನು ಕಾಡುತ್ತಿದೆ. ಶಿಕ್ಷಣಕ್ಕಾಗಿ ನಾನು ಮಾಡಿರುವ ಸಾಲದ ಕಥೆ ಏನು?. ಜತೆಗೆ, ಬೋಧನಾ ಶುಲ್ಕ ಭರಿಸಲು ವಿವಿಯಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ಈ ಕೆಲಸ ಹೋದರೆ ನನ್ನ ಗತಿಯೇನು?. ಶಿಕ್ಷಣ ಮುಂದುವರಿಸಲು ಸಾಧ್ಯವಾಗದಿದ್ದರೆ, ನನಗೆ ಮುಂದೆ ಉದ್ಯೋಗ ಸಿಗುವುದಾದರೂ ಹೇಗೆ?’ ಎಂಬ ಆತಂಕ ಇಲಿನಾಯ್ಸ ವಿವಿಯ ವಿದ್ಯಾರ್ಥಿಯದು.