ಮುಂಬಯಿ, ಅ. 6: ರಾಯನ್ಸ್ ಅಂತಾರಾಷ್ಟ್ರೀಯ ಶೈಕ್ಷಣಿಕ ಸಮೂಹದ ವತಿಯಿಂದ ಇಂಡಿಯಾ ಪ್ರಾದೇಶಿಕ ಮಟ್ಟದ ‘ವಿಶ್ವ ಸ್ಕಾಲರ್ ಪ್ರಶಸ್ತಿ’ ಪ್ರದಾನ ಸಮಾರಂಭವು ಆ. 1 ರಂದು ನಗರದ ರಾಯನ್ಸ್ ವಿದ್ಯಾಲಯದ ಸಭಾಗೃಹದಲ್ಲಿ ನಡೆಯಿತು.
ಮಹಾರಾಷ್ಟ್ರ ರಾಜ್ಯದ ಶಿಕ್ಷಣ, ಕ್ರೀಡೆ ಮತ್ತು ಯುವ ಕಲ್ಯಾಣ ಸಚಿವ ಆಶೀಶ್ ಶೇಲಾರ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ವಿಜೇತ ಪ್ರತಿಭಾವಂತ ವಿದ್ಯಾಥಿಗಳನ್ನು ಅಭಿನಂದಿಸಿ ಮಾತನಾಡಿ, ನಮ್ಮ ಉದ್ದೇಶವು ಮುಂದಿನ ಪೀಳಿಗೆಗೆ ಉತ್ತಮ ಶಿಕ್ಷಣದ ಜತೆಗೆ ಅವರ ಜ್ಞಾನವನ್ನು ಮತ್ತು ಅವರ ಬುದ್ಧಿವಂತಿಕೆಯನ್ನು ಹೊಳಪುಗೊಳಿಸುವುದಾಗಿದೆ. ನಮ್ಮ ದೇಶದ ವಿದ್ಯಾರ್ಥಿಗಳನ್ನು ವಿಶ್ವಕ್ಕೆ ಪರಿಚಯಿಸುವುದು ದೇಶದ ಶಿಕ್ಷಣ ಸಂಸ್ಥೆಗಳ ಗುರಿಯಾಗಲಿ ಎಂದರು.
ದಿ ವಲ್ಡ್ರ್ ಒನ್ ದಿ ಮಾರ್ಜಿನ್ ವಿಷಯದಲ್ಲಿ ಏರ್ಪಡಿಸಲಾದ ವಾರ್ಷಿಕ ಈ ಸ್ಪರ್ಧೆಯಲ್ಲಿ ಇತಿಹಾಸ, ವಿಜ್ಞಾನ, ಕಲೆ, ಸಾಹಿತ್ಯ, ಸಮಾಜ ಮತ್ತು ಪ್ರಚಲಿತ ವಿಷಯಗಳ ಮೇಲೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ವಿಶ್ವದ ಅತೀ ದೊಡ್ಡ ಈ ಪ್ರಾದೇಶಿಕ ಸ್ಪರ್ಧೆಯಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಿಗೆ ವಿಶ್ವ ದಲ್ಲಿನ ಸರ್ವೋತ್ಕೃಷ್ಟ ನಾಯಕರಾಗಲು ಉಪಯುಕ್ತವಾಗುವುದು ಮಾತ್ರವಲ್ಲದೆ ತಮ್ಮ ಪ್ರತಿಭೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಇಂತಹ ಸ್ಪರ್ಧೆಯು ಒಂದು ಮಾಧ್ಯಮವಾಗಿದೆ.
ಭಾರತೀಯ ವಿಜೇತರು ಮುಂದೆ ಚೀನಾದ ಬೀಜಿಂಗ್‌ನಲ್ಲಿರುವ ಚೈನಾ ನ್ಯಾಷನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯಲಿರುವ ಗ್ಲೋಬಲ್ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಸ್ಪರ್ಧೆಯ ಅಂತಿಮ ಸುತ್ತಿನ ವಲ್ಡ್ರ್ ಸ್ಕಾಲರ್ ಕಪ್ ಸ್ಪರ್ಧೆಯು ಯುಎಸ್‌ಎಯ ಯಾಲೆ ಯುನಿರ್ವಸಿಟಿಯಲ್ಲಿ ನಡೆಯಲಿದ್ದು ಅಲ್ಲೂ ಭಾರತೀಯ ವಿದ್ಯಾರ್ಥಿಗಳು ಪ್ರತಿನಿಧಿಸಲಿದ್ದಾರೆ ಎಂದು ರಾಯನ್ ಇಂಟರ್‌ನ್ಯಾಷನಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ಸ್‌ನ ಪ್ರವರ್ತಕಿ ಮೇಡಂ ಡಾ| ಗ್ರೇಸ್ ಪಿಂಟೊ ತಿಳಿಸಿದರು. ಈ ಸಂದರ್ಭದಲ್ಲಿ ಮೇಡಂ ಪಿಂಟೊ ಅವರು ನೂತನ ಶಿಕ್ಷಣ ಸಚಿವರಾಗಿ ನೇಮಕಗೊಂಡ ಸಚಿವ ಆಶೀಶ್ ಶೇಲಾರ್ ಅವರನ್ನು ಗೌರವಿಸಿ ಅಭಿನಂದಿಸಿ, ಇಂತಹ ಯುವ ನಾಯಕ ಶೈಕ್ಷಣಿಕ ರಂಗಕ್ಕೆ ಪ್ರಾಪ್ತಿಯಾಗಿರುವುದು ನಮ್ಮ ಭಾಗ್ಯ ಎಂದರು. ಹಳೆ ವಿದ್ಯಾರ್ಥಿಗಳಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಾದ ಸಂಗೀತ ಕಲಾವಿದೆ ದವಾನಿ ಬಾನುಶಾಲಿ, ನಟಿ ಅಸ್ನೋರ್ ಕೌರ್ ನಟಿ, ಅರೋಹಿ ಪುರೋಹಿತ್, ಕ್ರೀಡಾ ಸಾಧಕ ಅರ್ನಾವ್ ಕರ್ನಾವರ್ ಮತ್ತು ಹರ್ವೀತಿ ಬೊಯಿರ್ ಮೊದಲಾದವರನ್ನು ಸಚಿವರು ಸಮ್ಮಾನಿಸಿದರು.