ವಾಷಿಂಗ್ಟನ್: ಅಮೆರಿಕದ ಇಂಡಿಯಾನಾ ರಾಜ್ಯದ ಫಿಟ್‌ನೆಸ್ ಸೆಂಟರ್‌ನಲ್ಲಿ ಚೂರಿ ಇರಿತಕ್ಕೆ ಒಳಗಾಗಿದ್ದ 24 ವರ್ಷದ ಭಾರತೀಯ ವಿದ್ಯಾರ್ಥಿ ವರುಣ್ ರಾಜ್ ಪುಚಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಆತ ಓದುತ್ತಿದ್ದ ವಿಶ್ವವಿದ್ಯಾಲಯ ತಿಳಿಸಿದೆ.
ವಾಲ್ಪಾರೈಸೊ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದ ವರುಣ್, ಕಳೆದ ತಿಂಗಳು ಅಕ್ಟೋಬರ್ 29 ರಂದು ಜಿಮ್‌ವೊಂದರಲ್ಲಿ ದುಷ್ಕರ್ಮಿ ಜೋರ್ಡಾನ್ ಆಂಡ್ರೇಡ್ (24) ಎಂಬಾತ ಚಾಕುವಿನಿಂದ ವರುಣ್ ತಲೆಗೆ ಇರಿದು ಗಂಭೀರ ಗಾಯಗೊಂಡಿದ್ದ ವರುಣ್ ನನ್ನು ಇಂಡಿಯಾನಾದ ವಾಲ್‌ಪಾರೈಸೊದಲ್ಲಿರುವ ಫೋರ್ಟ್ ವೇನ್‌ನ ಲುಥೆರನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತಿತ್ತು.
ಕಳೆದ ಹತ್ತು ದಿನಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವರುಣ್ ಬುಧವಾರ ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿರುವುದಾಗಿ ವರುಣ್ ವ್ಯಾಸಂಗ ಮಾಡುತ್ತಿದ್ದ ವಿಶ್ವವಿದ್ಯಾಲಯ ಮಾಹಿತಿ ಹಂಚಿಕೊಂಡಿದೆ.
ಈ ಕುರಿತು ಟ್ವಿಟರ್ X ನಲ್ಲಿ ಮಾಹಿತಿ ಹಂಚಿಕೊಂಡ ಕಾಲೇಜು ಆಡಳಿತ ವರುಣ್ ರಾಜ್ ಪುಚ್ಚಾ ಅವರ ಅಗಲಿಕೆಯನ್ನು ನಾವು ಭಾರವಾದ ಹೃದಯದಿಂದ ಹಂಚಿಕೊಳ್ಳುತ್ತೇವೆ. ನಮ್ಮ ಕ್ಯಾಂಪಸ್ ಸಮುದಾಯವು ತನ್ನದೇ ಆದ ಓರ್ವನನ್ನು ಕಳೆದುಕೊಂಡಿದ್ದೇವೆ ದೇವರು ಆತನ ಕುಟುಂಬಕ್ಕೆ ಹಾಗೂ ಆತನ ಗೆಳೆಯರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕಾಲೇಜು ಆಡಳಿತ ಮಂಡಳಿ ಹೇಳಿಕೊಂಡಿದೆ.
ಘಟನೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಜೊತೆಗೆ ಆತನಲ್ಲಿದ್ದ ಆಯುಧವನ್ನು ವಶಕ್ಕೆ ಪಡೆದುಕೊಂಡಿದ್ದಾರೆ, ಸದ್ಯ ಪೊಲೀಸರ ವಶದಲ್ಲಿರುವ ಆರೋಪಿಯನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.
ವರುಣ್ ಸಾವಿನ ಸುದ್ದಿಯನ್ನು ಅಮೆರಿಕದ ಅಧಿಕಾರಿಗಳು ಕುಟುಂಬ ಸದಸ್ಯರಿಗೆ ತಿಳಿಸಿದ್ದು. ವಿಚಾರ ಗೊತ್ತಾಗುತ್ತಿದ್ದಂತೆ ವರುಣ್ ಕುಟುಂಬ ಶೋಕದಲ್ಲಿ ಮುಳುಗಿದೆ. ವರುಣ್ ಮೃತ ದೇಹವನ್ನು ಭಾರತಕ್ಕೆ ತರವ ಪ್ರಯತ್ನಗಳು ನಡೆಯುತ್ತಿವೆ.