ಬೆಂಗಳೂರು /ಹಾವೇರಿ ಉಕ್ರೇನ್ ಮೇಲೆ ಯುದ್ದ ಸಾರಿರುವ ರಷ್ಯಾದ ಶೆಲ್ ದಾಳಿಗೆ ಕರ್ನಾಟಕದ ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ರಾಣೆಬೆನ್ನೂರ ತಾಲೂಕಿನ ಚಳಗೇರಿ ಗ್ರಾಮದ ಚಳಗೇರಿ ಗ್ರಾಮದ ನವೀನ್ ಶೇಖರಪ್ಪ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ನವೀನ್ ಇಂದು ಬೆಳಗ್ಗೆ ತಿಂಡಿ ತರಲು ಹೊರಗೆ ಬಂದಿದ್ದ. ಈ ವೇಳೆ ಶೆಲ್ ಬಾಂಬ್ ದಾಳಿಯಲ್ಲಿ ರಷ್ಯ ಸೇನೆ ಕಟ್ಟಡ ದ್ವಂಸ ಮಾಡಿದೆ. ಕಟ್ಟಡದ ಬಳಿ ಇದ್ದ ಮೆಡಿಕಲ್ ವಿದ್ಯಾರ್ಥಿ ನವೀನ್ ದುರ್ಮರಣ ಹೊಂದಿದ್ದಾನೆ.
ಈ ಕುರಿತು ಭಾರತೀಯ ರಾಯಭಾರಿ ಕಚೇರಿ ಜೊತೆ ಮಾತುಕತೆ ನಡೆಸಿದ ಮೃತನ ಸಹೋದರನಿಗೆ ನವೀನ್ ಶೆಲ್ ದಾಳಿಯಲ್ಲಿ ಸಾವನ್ನಪ್ಪಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಖಾರ್ಕಿವ್ ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ನವೀನ್ ತನ್ನ ಸ್ನೇಹಿತರೊಂದಿಗೆ ವಾಸವಾಗಿದ್ದರು.
Related Articles
ವಿದೇಶಾಂಗ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ಇಂದು ಬೆಳಿಗ್ಗೆ ಖಾರ್ಕಿವ್‌ನಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬರು ಶೆಲ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ನಾವು ತೀವ್ರ ದುಃಖದಿಂದ ದೃಢಪಡಿಸುತ್ತೇವೆ. ಸಚಿವಾಲಯವು ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ.ಕುಟುಂಬಕ್ಕೆ ನಮ್ಮ ಆಳವಾದ ಸಂತಾಪವನ್ನು ತಿಳಿಸುತ್ತೇವೆ ಎಂದು ಟ್ವೀಟ್ ಮಾಡಿದೆ.
ವಿದೇಶಾಂಗ ಕಾರ್ಯದರ್ಶಿಯವರು ರಷ್ಯಾ ಮತ್ತು ಉಕ್ರೇನ್‌ನ ರಾಯಭಾರಿಗಳನ್ನು ಕರೆಸಿಕೊಂಡು ಖಾರ್ಕಿವ್‌ನಲ್ಲಿರುವ ಭಾರತೀಯ ಪ್ರಜೆಗಳಿಗೆ ಮತ್ತು ಇತರ ಸಂಘರ್ಷ ವಲಯಗಳಲ್ಲಿರುವ ನಗರಗಳಿಗೆ ತುರ್ತು ಸುರಕ್ಷಿತ ಮಾರ್ಗಕ್ಕಾಗಿ ನಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ. ಇದೇ ರೀತಿಯ ಕ್ರಮವನ್ನು ರಷ್ಯಾ ಮತ್ತು ಉಕ್ರೇನ್‌ನಲ್ಲಿರುವ ನಮ್ಮ ರಾಯಭಾರಿಗಳು ಸಹ ಕೈಗೊಳ್ಳುತ್ತಿದ್ದಾರೆ ಎಂದು ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.
ಯುವಕ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದ್ದು ತಂದೆ-ತಾಯಿ ಸೇರಿದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.