ನವದೆಹಲಿ: ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ ಇಲ್ಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಓಡಾಡುವ ಮಾರ್ಗಗಳಲ್ಲಿ ಹೆಚ್ಚಿನ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಯಾವ ಮಾರ್ಗಗಳಲ್ಲಿ ವೇಯ್ಟಿಂಗ್ ಲಿಸ್ಟ್‌ನಲ್ಲಿರುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆಯೋ, ಅಂಥ ಮಾರ್ಗಗಳಲ್ಲಿ ಹೆಚ್ಚುವರಿ ರೈಲುಗಳನ್ನು ಓಡಿಸಲಾಗುತ್ತದೆ. ಈ ವ್ಯವಸ್ಥೆಯನ್ನು “ಕ್ಲೋನ್ ಟ್ರೈನ್’ ಎಂದು ಕರೆಯಲಾಗುತ್ತದೆ.
ಮುಂದಿನ 15 ದಿನಗಳಲ್ಲೇ ಹಂತ ಹಂತವಾಗಿ ಈ ಯೋಜನೆ ಜಾರಿಗೆ ಬರಲಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವೈ.ಕೆ.ಯಾದವ್ ತಿಳಿಸಿದ್ದಾರೆ. ನಿಗದಿತ ರೈಲುಗಳಿಗೆ ಬೇಡಿಕೆ ಇರುವಲ್ಲಿ ಹೆಚ್ಚುವರಿಯಾಗಿ ರೈಲು ಓಡಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುವಂತೆ ಮಾಡಲಾಗುತ್ತದೆ. ಆದರೆ, ಈ ರೈಲುಗಳಿಗೆ ಎಲ್ಲ ನಿಲ್ದಾಣಗಳಲ್ಲೂ ನಿಲುಗಡೆ ಇರುವುದಿಲ್ಲ.
ನಿಗದಿತ ರೈಲಿನ ಸಂಚಾರ ಆರಂಭವಾಗುವ ಮುನ್ನವೇ ಕ್ಲೋನ್ ರೈಲುಗಳು ಸಂಚರಿಸಲಿದ್ದು,ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆಯಿರಲಿದೆ ಎಂದು ಅವರು ಹೇಳಿದ್ದಾರೆ. ಕ್ಲೋನ್ ರೈಲು ವ್ಯವಸ್ಥೆಯಲ್ಲಿ ಒಂದೇ ಹೆಸರಲ್ಲಿ ಮತ್ತೂಂದು ರೈಲನ್ನು ಹೆಚ್ಚುವರಿಯಾಗಿ ಓಡಿಸಲಾಗುತ್ತದೆ. ಉದಾ ಹರಣೆಗೆ, 12423/12424 ನವದೆಹಲಿ – ದಿಬ್ರೂಗಢ ರಾಜಧಾನಿ ಎಕ್ಸ್‌ಪ್ರೆಸ್ ನಲ್ಲಿ ಇರುವ ಎಲ್ಲಾ ಸೀಟ್‌ಗಳು ಕಾಯ್ದಿರಿಸಿದ್ದರೆ, ರೈಲ್ವೆ ಇಲಾಖೆಯು ಅದೇ ಹೆಸರಿನ ಮತ್ತೂಂದು ರೈಲನ್ನು ಓಡಿಸುತ್ತದೆ. ಆದರೆ ಇಂಥ ವ್ಯವಸ್ಥೆ ಯನ್ನು ಶುರು ಮಾಡಲು ಹೆಚ್ಚುವರಿ ರೈಲುಗಳ ಅಗತ್ಯತೆಯೂ ಸರ್ಕಾರಕ್ಕೆ ಇದೆ.
ಐಆರ್‌ಸಿಟಿಸಿ ಶೇ. 20ಷೇರುಗಳ ಮಾರಾಟ
ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಷನ್ (ಐಆರ್ ಸಿಟಿಸಿ) ನ ಶೇ.15-20ರಷ್ಟು ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಸಾರ್ವಜನಿಕ ಸೊತ್ತು ನಿರ್ವಹಣೆ ಮತ್ತು ಬಂಡವಾಳ ಹೂಡಿಕೆ ವಿಭಾಗ ಮರ್ಚೆಂಟ್ ಬ್ಯಾಂಕ್ ಒಂದನ್ನು ನೇಮಕ ಮಾಡಲು ಆಹ್ವಾನ ನೀಡಿದೆ.
ಈ ಬಗ್ಗೆ ಸೆ.11ರಿಂದ ಬಿಡ್ಡಿಂಗ್ ಪ್ರಕ್ರಿಯೆ ಶುರುವಾಗಲಿದೆ. ಆಫರ್ ಆನ್ ಸೇಲ್ ಅಥವಾ ಇಳಿಕೆ ಮಾರಾಟದ ನೀಡಿಕೆ ಆಧಾರದಲ್ಲಿ ಷೇರು ಮಾರಾಟ ಮಾಡಲಾಗುತ್ತದೆ. ಐಆರ್‌ಸಿಟಿಸಿಯಲ್ಲಿ ಕೇಂದ್ರ ಶೇ.87.40ರಷ್ಟು ಪಾಲು ಹೊಂದಿದೆ.