ಹೊಸದಿಲ್ಲಿ : ಸಾವಿರಾರು ರೂಪಾಯಿ ಟಿಕೆಟ್ ದರ ಇರುವ ಪ್ಯಾಲೇಸ್ ಆನ್ ವೀಲ್ಸ್, ಗೋಲ್ಡನ್ ಚ್ಯಾರಿಯಟ್ ಮತ್ತು ಮಹಾರಾಜ ಎಕ್ಸ್‌ಪ್ರೆಸ್ ರೈಲುಗಳ ಐಷಾರಾಮಿ ವೈಭವದ ಸವಿಯನ್ನು ಜನಸಾಮಾನ್ಯರೂ ಸವಿಯಬೇಕೆಂಬ ಕಾರಣಕ್ಕೆ ಭಾರತೀಯ ರೈಲ್ವೆ ಈ ರೈಲುಗಳ ಪ್ರಯಾಣ ದರವನ್ನು ಶೇ.50ರಷ್ಟು ಇಳಿಸುವ ಸಾಧ್ಯತೆ ಇದೆ.
ಪ್ರವಾಸೋದ್ಯಮ ಇಲಾಖೆ ಮತ್ತು ಐಆರ್‌ಸಿಟಿಸಿ ಸಂಸ್ಥೆ ರೈಲು ಪ್ರಯಾಣ ದರದ ಸ್ವಲ್ಪಾಂಶವನ್ನು ತಾವು ಭರಿಸಲು ಮುಂದೆ ಬಂದಿರುವ ಕಾರಣ ಭಾರತೀಯ ರೈಲ್ವೆ ಐಶಾರಾಮಿ ರೈಲುಗಳ ಪ್ರಯಾಣ ದರವನ್ನು ಶೇ.50ರಷ್ಟು ಇಳಿಸಲು ಸಾಧ್ಯವಾಗಿದೆ ಎಂದು ಪಯನೀರ್ ವರದಿ ತಿಳಿಸಿದೆ.
ಈ ಐಶಾರಾಮೀ ರೈಲುಗಳಲ್ಲಿ ಸಾಮಾನ್ಯ ಆರ್ಥಿಕ ವರ್ಗದ ಅಧಿಕ ಸಂಖ್ಯೆಯ ಯಾತ್ರಿಕರು, ಪ್ರವಾಸಿಗರು ಪ್ರಯಾಣಿಸಿದಲ್ಲಿ ಅದರಿಂದ ಪ್ರವಾಸೋದ್ಯಕ್ಕೂ ಐಆರ್‌ಸಿಟಿಸಿಗೂ ಲಾಭವಾಗುವುದರಿಂದ ಈ ಔದಾರ್ಯವನ್ನು ಅವು ತೋರಿರುವುದಾಗಿ ವರದಿ ತಿಳಿಸಿದೆ.
ಇನ್ನೊಂದು ಮುಖ್ಯ ಕಾರಣವೆಂದರೆ ಈ ಐಶಾರಾಮೀ ರೈಲುಗಳಲ್ಲಿ ಪ್ರಯಾಣಿಸುವವ ವಿದೇಶೀ ಪ್ರವಾಸಿಗರ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿರುವುದು ಎಂದು ವರದಿತಿಳಿಸಿದೆ.
ಪ್ಯಾಲೇಸ್ ಆನ್ ವೀಲ್ಸ್ ಮತ್ತು ರಾಯಲ್ ರಾಜಸ್ಥಾನ್ ರೈಲುಗಳನ್ನು ನಿರ್ವಹಿಸುವ ಭಾರತೀಯ ರೈಲ್ವೆ ಮತ್ತು ರಾಜಸ್ಥಾನ ಪ್ರವಾಸೋದ್ಯಮ ಇಲಾಖೆಯ ಆದಾಯ ಅನುಕ್ರಮವಾಗಿ ಶೇ.24 ಮತ್ತು ಶೇ.63ಕ್ಕೆ ಇಳಿದಿರುವುದು ಕಾರಣವಾಗಿದೆ.