Advertisement

ಬೆಂಗಳೂರು: ಮಾವು ಬೆಳಗಾರರು ಬೆಳೆದ ತಾಜಾತನ ಹೊಂದಿದ ಮಾವಿನ ಹಣ್ಣುಗಳನ್ನು ಜನರ ಮನೆಬಾಗಿಲಿಗೆ ತಲುಪಿಸಿ ಗ್ರಾಹಕರ ಮನಗೆದ್ದಿರುವ ಭಾರತೀಯ ಅಂಚೆ ಇಲಾಖೆ ಇದೀಗ ಮಲೆನಾಡು ಭಾಗದಲ್ಲಿ ಬೆಳೆಯುವ ಸಂಬಾರು ಮಸಾಲೆ ಪದಾರ್ಥಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಮತ್ತೂಂದು ಯೋಜನೆ ರೂಪಿಸಿದೆ.

Advertisement

ಈ ಮೂಲಕ ವಾಣಿಜ್ಯೋದ್ಯಮದ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮಲೆನಾಡು ಭಾಗದಲ್ಲಿ ದೊರೆಯುವ ಮಸಾಲೆ ಪದಾರ್ಥಗಳನ್ನು ತಂದು ಪ್ಯಾಕ್‌ ಮಾಡಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಿದೆ. ರೈತರ ಆದಾಯ ದ್ವಿಗುಣವಾಗಲಿದೆ ಮತ್ತು ಗ್ರಾಹಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಇದಕ್ಕೆ ಅಂಚೆ ಇಲಾಖೆ ಮುಂದಾಗಿದೆ.

ಭಾರತೀಯ ಅಂಚೆ ಇಲಾಖೆ ಇಲಾಖೆ ಈಗಾಗಲೇ ಶಬರಿಮಲೈ ಇನ್ನಿತರ ದೇವಾಲಯಗಳ ಪ್ರಸಾದವನ್ನು ಭಕ್ತರ ಮನೆಬಾಗಿಲಿಗೆ ತಲುಪಿಸುತ್ತಿದೆ. ಜತೆಗೆ ಗಂಗಾಜಲ ಸೇರಿದಂತೆ ಇನ್ನಿತರ ಸೇವೆಗಳನ್ನು ಗ್ರಾಹಕರಿಗೆ ಬೇಡಿಕೆಗೆ ಅನುಗುಣವಾಗಿ ಸಕಾಲದಲ್ಲಿ ಪೂರೈಸುತ್ತಿದೆ. ಅದೇ ರೀತಿಯಲ್ಲಿ ಸಂಬಾರು ಮಸಾಲೆ ಪದಾರ್ಥಗಳನ್ನು ಗ್ರಾಹಕರ ಬೇಡಿಕೆಗೆ ತಕ್ಕಂತೆ ಪೂರೈಸುವ ಇರಾದೆ ಇದೆ ಎಂದು ಅಂಚೆ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಕುಮಟ, ಭಟ್ಕಳ, ಯಲ್ಲಾಪುರ, ಅಂಕೋಲ, ಹಳಿಯಾಳ, ಸಿದ್ದಾಪುರ, ಶಿವಮೊಗ್ಗ ಜಿಲ್ಲೆಯ ಸಾಗರ, ತೀರ್ಥಹಳ್ಳಿ, ಹೊಸನಗರ ಸೇರಿದಂತೆ ಮಲೆನಾಡು ಭಾಗದ ರೈತರು ಮಸಾಲೆ ಪದಾರ್ಥಗಳನ್ನು ಅಂಚೆ ಮೂಲಕ ಗ್ರಾಹಕರಿಗೆ ತಲುಪಿಸುವ ಸಂಬಂಧ ಬೇಡಿಕೆಯಿಟ್ಟಿದ್ದಾರೆ ಎಂದು ಭಾರತೀಯ ಅಂಚೆ ಇಲಾಖೆಯ ಕರ್ನಾಟಕ ವೃತ್ತದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏಲಕ್ಕಿ, ಚಕ್ಕೆ, ಲವಂಗ, ಕರಿಮೆಣಸು ಮತ್ತಿತರರ ಮಸಾಲೆ ಪದಾರ್ಥಗಳನ್ನು ಬೇಡಿಕೆಯಿರುವ ಗ್ರಾಹಕರ ಮನೆಬಾಗಿಲಿಗೆ ತಲುಪಿಸುವ ಕಾರ್ಯ ನಡೆಯಲಿದೆ.ಶೀಘ್ರದಲ್ಲೆ ಈ ಬಗ್ಗೆ ಅಂಚೆ ಇಲಾಖೆ ಒಂದು ತೀರ್ಮಾನಕ್ಕೆ ಬರುವ ಆಲೋಚನೆ ಇದೆ. ಈಗಾಗಲೇ ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಬೆಂಗಳೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಳೆಯುವ ಮಾವಿನ ಹಣ್ಣುಗಳನ್ನು ಬೆಂಗಳೂರಿನಲ್ಲಿರುವ ಗ್ರಾಹಕರ ಮನೆಬಾಗಿಲಿಗೆ ತಲುಪಿಸುವ ಕೆಲಸ ಅಂಚೆ ಇಲಾಖೆ ಮಾಡುತ್ತಿದೆ. ಅದೇರೀತಿ ಮಸಾಲೆ ವಸ್ತುಗಳನ್ನು ಪೋಸ್ಟ್‌ ಮ್ಯಾನ್‌ ಮೂಲಕ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ

Advertisement

ಅಂಚೆ ಸೇವೆಗೆ ಗ್ರಾಹಕರು ಖುಷಿ :

ಕೋವಿಡ್‌ ಲಾಕ್‌ ಡೌನ್‌ ವೇಳೆ ಸಬರಾಜು ಇಲ್ಲದ ಹಿನ್ನೆಲೆಯಲ್ಲಿ ತರಕಾರಿ ಸೇರಿದಂತೆ ಹಣ್ಣು ಪದಾರ್ಥಗಳ ಮೇಲೆ ಭಾರಿ ಹೊಡೆತ ಬಿದ್ದಿತ್ತು. ಮಾವು ಬೆಳೆಗಾರರು ಕೂಡ ಸಂಕಷ್ಟಕ್ಕೆ ಸಿಲುಕಿದ್ದರು. ಆ ವೇಳೆ ಮಾವು ಅಭಿವೃದ್ಧಿ ನಿಗಮ ಅಂಚೆ ಇಲಾಖೆ ಜತೆಗೂಡಿ ಪಾರ್ಸಲ್‌ ಸೇವೆ ಮೂಲಕ ಗ್ರಾಹಕರು ಮನೆಬಾಗಿಲಿಗೆ ಮಧ್ಯವರ್ತಿಗಳ ಹಾವಳಿಯಿಲ್ಲದೆ ತಜಾತನ ಹೊಂದಿದ ಮಾವುಗಳನ್ನು ಮಾರಾಟಕ್ಕೆ ಮುಂದಾಗಿತ್ತು. 3 ಕೆ.ಜಿ.ಬಾಕ್ಸ್‌ ನ ಮಾವಿನ ಹಣ್ಣುಗಳನ್ನು ಅಂಚೆ ಇಲಾಖೆ ಗ್ರಾಹಕರ ಮನೆಬಾಗಿಲಿಗೆ ತಲುಪಿಸುವಲ್ಲಿ ಯಶಸ್ವಿಆಗಿತ್ತು. ರೈತರಿಗೂ ಆದಾಯ ಬಂದಿತ್ತು. ಅಂಚೆ ಅಣ್ಣನ ಸೇವೆಗೆ ಗ್ರಾಹಕರು ಕೂಡ ಸಂತೃಪ್ತರಾಗಿದ್ದರು. ಲಾಕ್‌ ಡೌನ್‌ ವೇಳೆ 35 ಸಾವಿರ ಮಾವಿನ ಹಣ್ಣಿನ ಬಾಕ್ಸ್‌ಗಳು ಮಾರಾಟವಾಗಿತ್ತು. ಕಳೆದ ವರ್ಷ ಸುಮಾರು 20 ಸಾವಿರ ಮಾವಿನ ಹಣ್ಣಿನ ಬಾಕ್ಸ್‌ ಖರೀದಿ ಆಗಿತ್ತು. ಈ ವರ್ಷ ಸುಮಾರು 25 ಸಾವಿರ ಬಾಕ್ಸ್‌ಗಳನ್ನು ಮಾರಾಟ ಮಾಡುವ ಗುರಿ ಹೊಂದಲಾಗಿದೆ ಎಂದು ಅಂಚೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮಲೆನಾಡ ರೈತರ ಬೇಡಿಕೆ : ಮಲೆನಾಡು ಭಾಗದ ತೋಟಗಾರಿಕಾ ಬೆಳೆಗಾರರು ಮಸಾಲೆ ಪದಾರ್ಥಗಳನ್ನು ಅಂಚೆ ಮೂಲಕ ಬೇಡಿಕೆಗೆ ಇರುವ ಗ್ರಾಹಕರಿಗೆ ತಲುಪಿಸುವ ಸಂಬಂಧ ಬೇಡಿಕೆ ಇಟ್ಟಿದ್ದಾರೆ. ಶಿರಸಿ ಸೇರಿದಂತೆ ಮತ್ತಿತರ ಮಲೆನಾಡು ಭಾಗದ ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಅಂಚೆ ಇಲಾಖೆಯ ಕರ್ನಾಟಕ ವೃತ್ತ ಮಸಾಲೆ ಪದಾರ್ಥಗಳನ್ನು ಕೂಡ ಮುಂದಿನ ದಿನಗಳಲ್ಲಿ ಅಂಚೆ ಸೇವೆ ಮೂಲಕ ಗ್ರಾಹಕರ ಮನೆಬಾಗಿಲಿಗೆ ತಲುಪಿಸುವ ಆಲೋಚನೆ ಹೊಂದಿದೆ ಎಂದು ಕರ್ನಾಟಕ ವೃತ್ತ ಚೀಪ್‌ ಪೋಸ್ಟ್‌ ಮಾಸ್ಟರ್‌ ಜನರಲ್‌ ಎಸ್‌. ರಾಜೇಂದ್ರಕುಮಾರ್‌ ತಿಳಿಸಿದ್ದಾರೆ.

 

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next