Advertisement

ಮೆಲುದನಿಯ ಗಾಯಕ

03:04 PM Oct 20, 2018 | |

ರಾತ್ರಿ ವೇಳೆಯೇ ಹೆಚ್ಚಾಗಿ ಸಂಚರಿಸುವ ಹಕ್ಕಿಯಿದು. ಸಾಮಾನ್ಯವಾಗಿ, ಕಾಂಡ್ಲಾ ಹುಲ್ಲಿನ ಅಥವಾ ಜೊಂಡು ಹುಲ್ಲಿನ ಪೊದೆಯಲ್ಲಿ ಅಡಗಿಕೊಂಡಿರುತ್ತದೆ. ಕಾವು ಕೊಡುವ ಸಂದರ್ಭದಲ್ಲಿ ಮೆಲುದನಿಯಲ್ಲಿ ಹಾಡುವುದು ಇದರ ವಿಶೇಷ…
 
Black bittern (Dupetor flavicollis  (Latham) R, RM -Indian Pond heron+, Village hen

Advertisement

ಕಪ್ಪು ಜವಳು ಹಕ್ಕಿ, ಕರಿ ಗಜನಿ ಹಕ್ಕಿ, ಕರಿ ಗುಪ್ಪಿ, ಕಪ್ಪು ಗೂನು ಹಕ್ಕಿ- ಹೀಗೆ ವಿವಿಧ ಹೆಸರಿನಿಂದ ಈ ನೀರು ಹಕ್ಕಿಯನ್ನು ಕರೆಯುತ್ತಾರೆ. ಇದು 58 ಸೆಂ.ಮೀ ಉದ್ದ ಇರುವ ಕೊಕ್ಕರೆಗುಪ್ಪಿ. ಬೆನ್ನು ಬಗ್ಗಿಸಿ, ಕುತ್ತಿಗೆಯನ್ನು ಕುಗ್ಗಿಸಿ ಮುದುಡಿ ಕುಳಿತುಕೊಳ್ಳುವುದರಿಂದ ಇದನ್ನು “ಗುಪ್ಪಿ’ ಎಂದೂ ಕರೆಯಲಾಗಿದೆ.

  ಇದು ಹುಲ್ಲು ಜೊಂಡು, ಇಲ್ಲವೇ ಚಿಕ್ಕ ಜಲಸಸ್ಯಗಳ ಪೊದೆಯಲ್ಲಿ ಅಡಗಿರುತ್ತದೆ. ಇಂಗ್ಲಿಷ್‌ನಲ್ಲಿ ಇದನ್ನು “ಬಿಟರಿನ್‌’ ಎಂದು ಕರೆಯುವುದುಂಟು. ಈ ಕುಟುಂಬಕ್ಕೆ ಸೇರಿದ ಇನ್ನೂ ಮೂರು ವಿಧದ ಹಕ್ಕಿಗಳಿವೆ.
  ಈ ಹಕ್ಕಿಗಳೆಲ್ಲಾ ಆಳವಿಲ್ಲದ ಜಲ ಪ್ರದೇಶದಲ್ಲಿ- ಅಂದರೆ, ನದಿ ತೀರ, ಗಜನಿ ಪ್ರದೇಶ- ಉಪ್ಪು ಬೆಳೆಯುವ, ಉಪ್ಪು ನೀರು ತುಂಬುವ, ತೇಲುವ ಜಲ ಪ್ರದೇಶಗಳಲ್ಲಿ ಓಡಾಡಿಕೊಂಡು- ಕಪ್ಪೆ, ಮೀನು, ಸೀಗಡಿ, ರೆಕ್ಕೆ ಹುಳ, ಮಿಡತೆ, ಬಸವನ ಹುಳು, ಕಪ್ಪೆಚಿಪ್ಪಿನ ಮಾಂಸ ತಿನ್ನುತ್ತವೆ. ಹಸಿರು ಗುಪ್ಪಿ, ಕೆಸರು ಗುಪ್ಪಿ, ರಾತ್ರಿ ಗುಪ್ಪಿ, ಹಳದಿ ಗುಪ್ಪಿ ಎಂದು ಈ ಹಕ್ಕಿಗಳನ್ನು ಬಣ್ಣ ವ್ಯತ್ಯಾಸದಿಂದ ಗುರುತಿಸಲಾಗುತ್ತದೆ. ಇದು ಹಗಲಿನಲ್ಲಿ ಸಂಚರಿಸುವುದು ಕಡಿಮೆ. ರಾತ್ರಿ ವೇಳೆ ಇದರ ಸಂಚಾರ ಅಧಿಕ.

  ಈ ಹಕ್ಕಿ ಸದಾ ಏಕಾಂಗಿಯಾಗಿರುತ್ತದೆ. ಇತರ ಗುಪ್ಪಿಗಳಂತೆ ಇದೂ ಕಾಂಡ್ಲಾ ಗಿಡಗಳ ಪೊದೆ ಇಲ್ಲವೇ ಜೊಂಡು ಹುಲ್ಲಿನ ಪೊದೆಗಳ ನಡುವೆ ಅಡಗಿಕೊಂಡಿರುತ್ತದೆ. ಏಕಾಗ್ರತೆಯಿಂದ ಕಾದು ಕುಳಿತು, ಬಳಿ ಬಂದ ಬೇಟೆಯನ್ನು ಚಕ್ಕನೆ ಹಿಡಿದು ತಿನ್ನುತ್ತವೆ. ಹೆಣ್ಣು ಹಕ್ಕಿ, ಗಂಡಿಗಿಂತ ಹೆಚ್ಚು ಬೆಳ್ಳಗಿರುತ್ತದೆ. ಇದರ ಕಾಲು ಕಪ್ಪು ಬಣ್ಣದಿಂದ ಕೂಡಿರುತ್ತದೆ. ಉದ್ದನೆಯ ಕಾಲುಗಳನ್ನು ಹೊಂದಿರುವುದರಿಂದ, ನೀರಿನಲ್ಲಿರುವ ಹುಳು, ಮೀನುಗಳನ್ನು ಬೇಟೆಯಾಡಲು ಅನುಕೂಲಕರ. ಹೆಣ್ಣು ಹಕ್ಕಿಯ ಹೊಟ್ಟೆ ಭಾಗದಲ್ಲಿ ದಟ್ಟ ತಿಳಿಹಳದಿ ಬಣ್ಣ ಇದೆ.

  ಕಾವು ಕೊಡುವ ಸಮಯದಲ್ಲಿ ಇದರ ಹಾಡು ಮಂದ್ರವಾಗಿರುತ್ತದೆ. ಕೆಲವೊಮ್ಮೆ “ವೂØ ಉ-ಉ-ಉ-ಊ’ ಎಂದೂ ಕೂಗುವುದು. ಸಂಗಾತಿಯನ್ನು ಕರೆಯಲು ಮತ್ತು ಓಲೈಸಲು ಹಾಗೂ ತನ್ನ ಇರುನೆಲೆ ಇದೇ ಎಂದು ಘೋಷಿಸಲು, ತನ್ನ ವೈರಿಗಳು ಬಂದಾಗ ವೈವಿಧ್ಯಮಯವಾಗಿ ಕೂಗಿ, ಮುನ್ಸೂಚನೆ ನೀಡುತ್ತದೆ. ಜೊಂಡು ಹುಲ್ಲು ಮತ್ತು ತೇಲು ಜಲಸಸ್ಯ ಇರುವ ಜಾಗ, ಇದರ ಗೂಡಿಗೆ ಒಳ್ಳೆಯ ಸ್ಥಳ.

Advertisement

  ಮೊದಲು ಕಾಂಡ್ಲಾ ಅಥವಾ ಇತರ ಗಿಡಗಳ ಕೋಲನ್ನು ಸೇರಿಸಿ ಅಟ್ಟಣಿಗೆ ಕಟ್ಟುತ್ತದೆ. ಅದರ ಮೇಲೆ ಜಲಸಸ್ಯಗಳ ಎಲೆ, ಇಲ್ಲವೇ ಜೊಂಡು ಹುಲ್ಲು ಹಾಕಿ, ಅದರ ಮಧ್ಯದಲ್ಲಿ ಮೆತ್ತನೆ ಹಾಸನ್ನು ಎಲೆ ಮತ್ತು ಹುಲ್ಲಿನಿಂದ ನಿರ್ಮಿಸುತ್ತದೆ. ಹಾಸಿಗೆಯಂಥ ಈ ಜಾಗದಲ್ಲಿ ಐದು ಮೊಟ್ಟೆಗಳನ್ನು ಇಡುತ್ತದೆ. ಗಂಡು ಹೆಣ್ಣು ಸೇರಿ ಕಾವು ಕೊಡುತ್ತವೆ.

ಪಿ.ವಿ.ಭಟ್‌ ಮೂರೂರು

Advertisement

Udayavani is now on Telegram. Click here to join our channel and stay updated with the latest news.

Next