ಬ್ರಿಸ್ಬೇನ್ : ಆಸ್ಟ್ರೇಲಿಯ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್ ತಂಡದಲ್ಲಿ ಗಾಯಾಳುಗಳ ಸಂಖ್ಯೆ 11ಕ್ಕೆ ಏರಿದೆ. ಇದು ಹಿಂದಿನ ಯಾವುದೇ ವಿದೇಶಿ ಅಥವಾ ಸ್ವದೇಶಿ ಸರಣಿಗಳಲ್ಲೇ ಅತಿ ಗರಿಷ್ಠ ಗಾಯಾಳುಗಳ ಸಂಖ್ಯೆ ಎಂಬುದೊಂದು ದಾಖಲೆ!
ಇದಕ್ಕೆ ಕಾರಣಗಳು ಹಲವಾರಿವೆ. ಮುಖ್ಯವಾಗಿ ಆಟಗಾರರ ಕಾರ್ಯದ ಒತ್ತಡವನ್ನು ನಿಭಾಯಿಸಲು ವಿಫಲವಾಗಿರುವುದು, ತಂಡದ ಆಟಗಾರರನ್ನು ಆವರ್ತನ ಪದ್ಧತಿಯಂತೆ ಬದಲಾಯಿಸದೇ ಇರುವುದು, ಕೋವಿಡ್ ಸಮಯದಲ್ಲಿನ ದೀರ್ಘ ವಿಶ್ರಾಂತಿ… ಇವೆಲ್ಲ ಗಾಯಗೊಳ್ಳಲು ಮುಖ್ಯ ಕಾರಣ ಎಂದಿದ್ದಾರೆ ತಜ್ಞರು.
ಆವರ್ತನ ಪದ್ಧತಿ ಅಗತ್ಯ :
ಆವರ್ತನ ಪದ್ಧತಿಯಿಂದ ಆಟಗಾರರ ಒತ್ತಡವನ್ನು ತಪ್ಪಿಸಬಹುದು. ದೀರ್ಘ ವಿಶ್ರಾಂತಿಯಿಂದ ಹೊರಬಂದ ತಂಡದ ಪ್ರಮುಖ ವೇಗಿ ಜಸ್‌ಪ್ರೀತ್ ಬುಮ್ರಾ, ಐಪಿಎಲ್ ಸೇರಿ ಇದುವರೆಗೆ 205 ಓವರ್‌ಎಸೆದಿದ್ದಾರೆ. ಇದನ್ನು ಹೊರತುಪಡಿಸಿ ನೆಟ್‌ನಲ್ಲೂ ಅವರ ಬೌಲಿಂಗ್, ವ್ಯಾಯಾಮ ಎಂದಿನಂತೆ ಇದ್ದೇ ಇರುತ್ತದೆ! ಇದನ್ನು ಸಹಿಸಿಕೊಳ್ಳುವ ಶಕ್ತಿ ದೇಹಕ್ಕಿರುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.
ಇನ್ನೊಂದು ಸಮಸ್ಯೆಯೆಂದರೆ, ಆಸ್ಟ್ರೇಲಿಯದ ಕ್ರಿಕೆಟ್ ಅಂಕಣದ 30 ಗಜದ ಹೊರಭಾಗದಲ್ಲಿ ಮರಳು ಸ್ವಲ್ಪ ಜಾಸ್ತಿಯಿದೆ. ಇದು ಆಟಗಾರರನ್ನು ಗಾಯಗೊಳಿಸುತ್ತಿದೆ.
ಹಾಗೆಯೇ ಕೊರೊನಾ ವೇಳೆ ಎಷ್ಟೇ ತರಬೇತಿ ಪಡೆದಿದ್ದರೂ, ಸ್ಪರ್ಧಾತ್ಮಕ ಕ್ರಿಕೆಟ್‌ನ ಒತ್ತಡಕ್ಕೆ ಅದು ಸಾಕಾಗುವುದಿಲ್ಲ ಎಂದು ಶ್ರೀನಿವಾಸನ್, ಮೈಕೆಲ್ ಹಾರ್ಡಿಂಗ್ ಅವರಂತಹ ತಜ್ಞರು ಹೇಳಿದ್ದಾರೆ.