Advertisement
ಯಲ್ಲಾಪುರ ದಾಟಿ ದಾಂಡೇಲಿ ರಸ್ತೆ ಹಿಡಿಯುತ್ತಿದ್ದಂತೆ ಕಾಣುವ ಸಾಗವಾನಿ ಮೀಸಲು ಅರಣ್ಯ, ಗಣೇಶಗುಡಿಯ ನೈಸರ್ಗಿಕ ಕಾಡು ನಮ್ಮನ್ನು ಆಕರ್ಷಿಸತೊಡಗಿತು. ದಾಂಡೇಲಿಯಲ್ಲಿ ಸಾಮಾನ್ಯವಾಗಿ ಕಾಣುವ ಗ್ರೇಟ್ ಇಂಡಿಯನ್ ಹಾರ್ನ್ಬಿಲ್ ಈ ಬಾರಿ ಹೆಚ್ಚಾಗಿ ಕಣ್ಣಿಗೆ ಬೀಳಲಿಲ್ಲ. ಅಲ್ಲಿನ ಟಿಂಬರ್ ಯಾರ್ಡ್‌ನ ಎತ್ತರದ ಮರಗಳ ಮೇಲೆ ದೂರದವರೆಗೆ ಕಣ್ಣು ಹಾಯಿಸಿದರೂ ಯಾವ ಪಕ್ಷಿಗಳ ಸುಳಿವೂ ಸಿಗಲಿಲ್ಲ.
Related Articles
Advertisement
ಬಾಲದಂಡೆಯ ಹಕ್ಕಿ ತನ್ನ ಆಕರ್ಷಕ ಬಣ್ಣ ಮತ್ತು ತನ್ನ ದೇಹಕ್ಕಿಂತ ಎರಡು ಪಟ್ಟು ಉದ್ದದ ಓಲಾಡುವ ಬಾಲದಿಂದಾಗಿ ಪಕ್ಷಿ ವೀಕ್ಷಕರನ್ನು ಆಕರ್ಷಿಸುತ್ತದೆ. ಇಂಡಿಯನ್ ಪ್ಯಾರಡೇಸ್ ಫ್ಲೈಕ್ಯಾಚರ್‌ಗಳು ಪ್ರಧಾನವಾಗಿ ಶ್ರೀಲಂಕಾ ಮತ್ತು ಮ್ಯಾನ್ಮಾರ್ ಸೇರಿದಂತೆ ಭಾರತೀಯ ಉಪಖಂಡದಾದ್ಯಂತ ಕಂಡುಬರುತ್ತವೆ. ದಟ್ಟವಾದ ಕಾಡುಗಳಲ್ಲಿ, ಸಸ್ಯವರ್ಗದ ಉದ್ಯಾನವನಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಸಾಮಾನ್ಯವಾಗಿ ವಯಸ್ಕ ಹಕ್ಕಿ ಸುಮಾರು ಏಳರಿಂದ ಒಂಬತ್ತು ಇಂಚುಗಳಷ್ಟು ಉದ್ದವಿರುತ್ತವೆ. ಅವುಗಳ ತಲೆಯ ಭಾಗ ಕತ್ತಿನಿಂದ ಮೇಲೆ ಹೊಳೆವ ಕಪ್ಪು ಬಣ್ಣದಿಂದ ಕೂಡಿದ್ದು ಕಿರೀಟದಂತಹ ಜುಟ್ಟು ಹೊಂದಿರುತ್ತವೆ.
ಗಂಡು ಹಕ್ಕಿಯ ಮೈ ಬಣ್ಣ ಪೂರ್ಣ ಬಿಳಿಯದಾಗಿದ್ದು, ಕತ್ತಿನಿಂದ ಬಾಲದ ತುದಿಯವರೆಗೂ ಬಿಳಿಯ ಬಣ್ಣದಿಂದ ಕೂಡಿರುತ್ತವೆ. ಸುಮಾರು ಎಂಟರಿಂದ ಒಂಬತ್ತು ಇಂಚು ಉದ್ದದ ಎರಡು ಬಿಳಿಯ ಬಾಲವೇ ಈ ಪಕ್ಷಿಯ ವಿಶೇಷ ಆಕರ್ಷಣೆ. ಹೆಣ್ಣು ಬಾಲದಂಡೆಯ ಹಕ್ಕಿ ಮೋಹಗೊಳ್ಳುವುದೂ ಇದೇ ಕಾರಣಕ್ಕೆ. ಸಂತಾನೋತ್ಪತ್ತಿಯ ಸಮಯದಲ್ಲಿ ಗಂಡು ಹಕ್ಕಿ ಹೆಣ್ಣನ್ನು ಆಕರ್ಷಿಸಲು ತನ್ನ ಭವ್ಯವಾದ ಬಾಲವನ್ನು ಪ್ರದರ್ಶಿಸಿ ಮರುಳುಗೊಳಿ ಸುತ್ತದೆ. ಹೆಣ್ಣು ಹಕ್ಕಿಗೆ ಇಷ್ಟು ಉದ್ದದ ಬಾಲ ಇರುವುದಿಲ್ಲ. ಅದು ಕಂದು ಬಣ್ಣದಿಂದ ಕೂಡಿದ್ದು ಸುಮಾರು ನಾಲ್ಕು ಇಂಚುಗಳಷ್ಟೇ ಉದ್ದವಿರುತ್ತದೆ. ಮರಿ ಗಂಡು ಹಕ್ಕಿ ನೋಡುವುದಕ್ಕೆ ಹೆಣ್ಣು ಬಾಲದಂಡೆ ಹಕ್ಕಿಯಂತೆಯೇ ಕಾಣುತ್ತವೆ. ಅವುಗಳ ಗರಿಗಳು ಉದ್ದವಿರುವುದಿಲ್ಲ ಮತ್ತು ಕಂದು ಬಣ್ಣದಿಂದ ಕೂಡಿರುತ್ತದೆ. ಮೂರು ವರ್ಷ ಆದ ನಂತರ ರೆಕ್ಕೆಯ ಬಣ್ಣ ಬಿಳಿಯಾಗುವುದಲ್ಲದೇ ಒಂಭತ್ತು ಇಂಚುಗಳವರೆಗೆ ಬೆಳೆಯುತ್ತಾ ಹೋಗುತ್ತದೆ.
ಬುಟ್ಟಿಯಾಕಾರದ ಗೂಡುಗಳು:
ಇವುಗಳ ಮುಖ್ಯ ಆಹಾರ ನೊಣಗಳು, ಸೊಳ್ಳೆಗಳು ಮತ್ತು ಇತರ ಹಾರುವ ಕೀಟಗಳು. ಇವು ಗಾಳಿಯಲ್ಲಿ ಹಾರಿ ಬಂದು ತನ್ನ ಬೇಟೆಯನ್ನು ಹಿಡಿಯುವಲ್ಲಿ ಚಮತ್ಕಾರಿಕ ಕುಶಲತೆಯನ್ನು ಪ್ರದರ್ಶಿಸುತ್ತವೆ. ಅತ್ಯಂತ ವೇಗವಾಗಿ ತನ್ನ ಉದ್ದ ಬಾಲವನ್ನು ಬೀಸುತ್ತಾ ಬಂದು ಬೇಟೆಯಾಡುತ್ತವೆ. ಬಾಲದಂಡೆಯ ಹಕ್ಕಿ ಮೂಲತಃ ವಲಸೆ ಹಕ್ಕಿ. ಮಾರ್ಚ್‌ನಿಂದ ಜುಲೈ ತಿಂಗಳವರೆಗೆ ಅವುಗಳ ಸಂತಾನೋತ್ಪತ್ತಿಯ ಸಮಯ. ಮರದ ಕೊಂಬೆಯ ಮೇಲೆ ಜೇಡರಬಲೆ ಮತ್ತು ಒಣಗಿದ ನಾರು, ಕಾಂಡಗಳನ್ನು ಬಳಸಿ, ಆಳವಿಲ್ಲದ ಚಿಕ್ಕ ಬುಟ್ಟಿಯಾಕಾರದ ಗೂಡುಗಳನ್ನು ನಿರ್ಮಿಸಿ ಅದರಲ್ಲಿ ಹೆಣ್ಣು ಹಕ್ಕಿ ಎರಡರಿಂದ ನಾಲ್ಕು ಮೊಟ್ಟೆಗಳನ್ನಿಟ್ಟು ಸುಮಾರು 14 ರಿಂದ 16 ದಿನಗಳವರೆಗೆ ಕಾವು ಕೊಡುತ್ತದೆ. ಮೊಟ್ಟೆ ಒಡೆದ 22 ದಿನಗಳಲ್ಲಿ ಮರಿಗಳು ಹಾರಲು ಸಿದ್ದವಾಗುತ್ತವೆ. ಗಂಡು ಮತ್ತು ಹೆಣ್ಣು ಹಕ್ಕಿಗಳೆರಡೂ ಮರಿಗಳಿಗೆ ಪೋಷಣೆ ಮತ್ತು ರಕ್ಷಣೆ ನೀಡುವಲ್ಲಿ ಸರಿಸಮವಾಗಿ ಕಾರ್ಯ ನಿರ್ವಹಿಸುತ್ತವೆ.
ರಾಜ ಪಕ್ಷಿ-ರಾಜ್ಯ ಪಕ್ಷಿ! : ಬಾಲದಂಡೆಯ ಹಕ್ಕಿ, ಮಧ್ಯ ಪ್ರದೇಶದ “ರಾಜ್ಯ ಪಕ್ಷಿ’ಯ ಸ್ಥಾನ ಪಡೆದಿದೆ. ಅಲ್ಲಿ ಈ ಹಕ್ಕಿಯನ್ನು ದೂಧ್ ರಾಜ್’ ಎಂದು ಕರೆಯುತ್ತಾರೆ. ಇದರ ತಲೆಯ ಮೇಲಿನ ಜುಟ್ಟು ಕಿರೀಟದಂತೆ ಇರುವುದರಿಂದ ಮತ್ತು ಅದರ ಬಾಲ ರಾಜರ ಪೋಷಾಕಿನಂತೆ ಕಾಣುವದರಿಂದ ಇದನ್ನು “ರಾಜ ಹಕ್ಕಿ’ ಎಂತಲೂ ಕರೆಯುತ್ತಾರೆ. ಸಂಸ್ಕೃತದಲ್ಲಿ ಈ ಹಕ್ಕಿಯನ್ನು ಅರ್ಜುನಕ ಎಂದು ಕರೆಯುತ್ತಾರೆ. ಭಾರತ ಮತ್ತು ಶ್ರೀಲಂಕಾ ದೇಶದ ಅಂಚೆ ಇಲಾಖೆ ಈ ಪಕ್ಷಿಯ ಚಿತ್ರದ ಅಂಚೆ ಚೀಟಿಗಳನ್ನೂ ಬಿಡುಗಡೆ ಮಾಡಿವೆ.