ಹೊಸದಿಲ್ಲಿ : ಭಾರತ ಕ್ರಿಕೆಟ್ ತಂಡದ ವೇಗದ ಎಸೆಗಾರ ಮೊಹಮ್ಮದ್ ಶಮಿ ವಿರುದ್ಧದ ಮ್ಯಾಚ್ ಫಿಕ್ಸಿಂಗ್ ಆರೋಪದ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತನಿಖೆ ನಡೆಸಲಿದೆ.
ಶಮಿ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದು ಬೇರೆ ಯಾರೂ ಅಲ್ಲ – ಸ್ವತಃ ಆತನ ಪತ್ನಿ ಹಸೀನ್ ಜಹಾನ್.
ಹಸೀನ್ ಜಹಾನ್ ಪ್ರಕಾರ ಪತಿ ಮೊಹಮ್ಮದ್ ಶಮಿ, ಪಾಕಿಸ್ಥಾನದ ಅಲಿಷ್‌ಬಾ ಎಂಬ ಮಹಿಳೆಯ ಒತ್ತಾಯದ ಪ್ರಕಾರ ಇಂಗ್ಲಂಡ್‌ನಲ್ಲಿರುವ ಉದ್ಯಮಿ ಮೊಹಮ್ಮದ್ ಭಾಯಿ ಅವರಿಂದ ಮ್ಯಾಚ್ ಫಿಕ್ಸಿಂಗ್ ಹಣ ತೆಗೆದುಕೊಂಡಿದ್ದಾರೆ.
ಈ ಮ್ಯಾಚ್ ಫಿಕ್ಸಿಂಗ್ ಆರೋಪದ ಬಗ್ಗೆ ತನಿಖೆ ಮಾಡುವಂತೆ ಸುಪ್ರೀಂ ಕೋರ್ಟ್ ನೇಮಿತ ಬಿಸಿಸಿಐ ಆಡಳಿತಗಾರರ ಮಂಡಳಿಯು ನೀರಜ್ ಕುಮಾರ್ ನೇತೃತ್ವದ ಭಷ್ಟಾಚಾರ ನಿಗ್ರಹ ಮತ್ತು ಭದ್ರತಾ ಘಟಕ (ಎಸಿಎಸ್‌ಯ) ವನ್ನು ಕೇಳಿಕೊಂಡಿದೆ.
ಮೊಹಮ್ಮದ್ ಶಮಿ ಮತ್ತು ಆತನ ಪತ್ನಿಯ ನಡುವೆ ನಡೆದಿರುವ ಈ ಕುರಿತ ಟೆಲಿಫೋನ್ ಸಂಭಾಷಣೆಯ “ಆಡಿಯೋ ರೆಕಾರ್ಡಿಂಗ್’ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ದಿಲ್ಲಿ ಪೊಲೀಸ್ ಮುಖ್ಯಸ್ಥರನ್ನು ಕ್ರಿಕೆಟ್ ಆಡಳಿತ ಸಮಿತಿ (ಸಿಒಎ) ಕೇಳಿಕೊಂಡಿದೆ.
ಪತಿ ಮೊಹಮ್ಮದ್ ಶಮಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಮತ್ತು ವಿವಾಹೇತರ ಸಂಬಂಧಗಳ ಬಗ್ಗೆ ಆರೋಪ ಮಾಡಿದ್ದ ಪತ್ನಿ ಹಸೀನ್ ಜಹಾನ್, ಮ್ಯಾಚ್ ಫಿಕ್ಸಿಂಗ್ ಬಗ್ಗೆಯೂ ಆರೊಪಿಸಿದ್ದಳು. ಇದರಿಂದಾಗಿ ಶಮೀಗೆ ಈ ಸಾಲಿನ ಕ್ರಿಕೆಟ್ ಗುತ್ತಿಗೆಯನ್ನು ಬಿಸಿಸಿಐ ನವೀಕರಿಸಿರಲಿಲ್ಲ.
ಮೊಹಮ್ಮದ್ ಶಮಿ ಮ್ಯಾಚ್ ಫಿಕ್ಸಿಂಗ್ ಕುರಿತ ತನಿಖೆಯ ವರದಿಯನ್ನು ಮುಂದಿನ ಏಳು ದಿನಗಳ ಒಳಗೆ ನೀಡುವಂತೆ ಆಸಿಎಸ್‌ಯು ವನ್ನು ಸಿಓಎ ಕೇಳಿಕೊಂಡಿದೆ.