ಜೆರುಸಲೇಂ : ಪ್ರಖ್ಯಾತ ಭಾರತೀಯ ಮೂಲದ ಬ್ರಿಟಿಷ್ ಶಿಲ್ಪಿ ಹಾಗೂ ಸಿರಿಯಾ ನಿರಾಶ್ರಿತರ ಹಕ್ಕುಗಳ ಪ್ರಖರ ಪ್ರತಿಪಾದಕ, ಅನೀಶ್ ಕಪೂರ್ ಅವರು 10 ಲಕ್ಷ ಅಮೆರಿಕನ್ ಡಾಲರ್‌ಗಳ ಇಸ್ರೇಲಿನ ಪ್ರತಿಷ್ಠಿತ ಜೆನಿಸಿಸ್ ಬಹುಮಾನವನ್ನು ಗೆದ್ದುಕೊಂಡಿದ್ದಾರೆ. ಯಹೂದ್ಯ ಮೌಲ್ಯಗಳಿಗೆ ತೋರಿರುವ ಬದ್ಧತೆಗಾಗಿ ಅನೀಶ್ ಕಪೂರ್‌ಗೆ ಈ ಬಹುಮಾನ ಸಂದಿದೆ.
ಯಹೂದ್ಯ ನೊಬೆಲ್ ಪ್ರಶಸ್ತಿ ಎಂದೇ ಪರಿಗಣಿತವಾಗಿರುವ ಇಸ್ರೇಲ್‌ನ ಈ ಉನ್ನತ ಬಹುಮಾನಕ್ಕೆ ಭಾಜನರಾಗಿರುವ 62ರ ಹರೆಯದ ಅನೀಶ್ ಕಪೂರ್, ಸಿರಿಯಾ ನಿರಾಶ್ರಿತರ ವಿರುದ್ಧದ ಸರಕಾರಿ ನೀತಿಗಳನ್ನು ತೀವ್ರವಾಗಿ ಖಂಡಿಸಿದರು.
ಪ್ರಶಸ್ತಿ ಸಮಿತಿ ಅಧ್ಯಕ್ಷರಾಗಿರುವ ನತನ್ ಶರಾನ್‌ಸ್ಕಿ ಅವರು ಕಪೂರ್ ಅವರ ಕಲೆಗಾರಿಕೆಗೆ ಭಾರೀ ಪ್ರಶಂಸೆ ವ್ಯಕ್ತಪಡಿಸಿ ಸಮಕಾಲೀನ ನವಶೋಧಕ ಕಲಾವಿದರ ಪಾಲಿಗೆ ಕಪೂರ್ ಅವರು ಅತ್ಯಂತ ಪ್ರಭಾವಶಾಲಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಇಸ್ರೇಲ್‌ನ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆಯುವ ಮೂಲಕ ಕಪೂರ್ ಅವರ ಇಝಾಕ್ ಪರ್ಲ್ಮನ್, ನ್ಯೂಯಾರ್ಕ್ ನಗರದ ಮಾಜಿ ಮೇಯರ್, ಮೈಕೆಲ್ ಬ್ಲೂಮ್‌ಬರ್ಗ್ ಮತ್ತು ನಟ-ನಿರ್ದೇಶಕ ಮೈಕೆಲ್ ಡಗ್ಲಾಸ್ ಅವರ ಸಾಲಿಗೆ ಸೇರಿದ್ದಾರೆ.
“ವಿಶ್ವದಲ್ಲೀಗ ಆರು ಕೋಟಿ ನಿರಾಶ್ರಿತರಿದ್ದಾರೆ; ಭೌಗೋಳಿಕವಾಗಿ ಅವರ ಈ ಸ್ಥಿತಿಗೆ ಕಾರಣಗಳೇನೇ ಇರಲಿ; ನಿರಾಶ್ರಿತರ ಸಮಸ್ಯೆಯಂತೂ ನಮ್ಮ ಮನೆ ಬಾಗಿಲ ವರೆಗೂ ಬಂದು ನಿಂತಿದೆ; ನಾನು ರಾಜಕಾರಣಿಯಲ್ಲ; ಕೇವಲ ಒಬ್ಬ ಕಲಾವಿದ; ಹಾಗಾಗಿ ಮಾನವ ನಿರ್ಲಕ್ಷ್ಯದ ಫಲವಾಗಿ ಎದುರಾಗಿರುವ ನಿರಾಶ್ರಿತರ ಸಮಸ್ಯೆ ಬಗ್ಗೆ ನಾನು ಮಾತನಾಡಲೇಬೇಕಾಗಿದೆ’ ಎಂದು ಅನೀಶ್ ಕಪೂರ್ ಹೇಳಿದ್ದಾರೆ.