ನ್ಯೂಯಾರ್ಕ್ : ಅಮೆರಿಕ ಸೇನೆಯನ್ನು ಸೇರಲು ಸಲ್ಲಿಸಿದ ಅರ್ಜಿಯಲ್ಲಿ ಸುಳ್ಳು ಹೇಳಿಕೆಗಳನ್ನು ನೀಡಿದ ಇಸ್ಲಾಂ ಮತಾಂತರಿತ ಭಾರತೀಯ ಮೂಲದ ಶಿವಂ ಪಟೇಲ್ (27) ಎಂಬಾತನನ್ನು ಬಂಧಿಸಲಾಗಿದೆ.
ಶಿವಂ ಪಟೇಲ್ ಐಸಿಸ್ ಉಗ್ರ ಸಂಘಟನೆಯನ್ನು ಸೇರುವ ಮಾರ್ಗೋಪಾಯ ತಿಳಿಯಲು ಆನ್‌ಲೈನ್ ಶೋಧ ನಡೆಸಿದ್ದನಲ್ಲದೆ ಐಸಿಸ್ ಪರ ಧ್ವನಿಯನ್ನೂ ಎತ್ತಿದ್ದ ಎಂಬುದು ಗೊತ್ತಾಗಿದೆ.
ನಾರ್‌ಫೋಕ್ ನಿವಾಸಿಯಾಗಿರುವ ಶಿವಂ ಪಟೇಲ್, ಅಮೆರಿಕ ಸೇನೆಯನ್ನು ಸೇರುವ ತನ್ನ ಅರ್ಜಿಯಲ್ಲಿ ತಾನು ಈ ಹಿಂದೆ ಚೀನ ಅಥವಾ ಜೋರ್ಡಾನಿಗೆ ಹೋಗಿದ್ದೆ ಎಂಬುದನ್ನು ಬಹಿರಂಗಪಡಿಸಿರಲಿಲ್ಲ. ಕಳೆದ ಏಳು ವರ್ಷಗಳಲ್ಲಿ ತಾನು 2011-12ರಲ್ಲಿ ಭಾರತಕ್ಕೆ ಕುಟುಂಬ ಭೇಟಿ ನಿಮಿತ್ತ ಹೋಗಿದ್ದೆ; ಅದನ್ನು ಬಿಟ್ಟರೆ ಅಮೆರಿಕದಿಂದ ತಾನು ಹೊರಗೆ ಹೋದದ್ದೇ ಇಲ್ಲ ಎಂದಾತ ಅರ್ಜಿಯಲ್ಲಿ ಹೇಳಿಕೊಂಡಿದ್ದ.
ಸೇನೆ ಸೇರುವ ಅರ್ಜಿಯಲ್ಲಿ ಸುಳ್ಳು ಮಾಹಿತಿ ನೀಡಿದ್ದಕ್ಕಾಗಿ ಶಿವಂ ಪಟೇಲ್ ಗೆ ಐದು ವರ್ಷಗಳ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.
ಅನೇಕ ವರ್ಷಗಳ ಹಿಂದೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ಶಿವಂ, 2016ರ ಜುಲೈ ತಿಂಗಳಲ್ಲಿ ಇಂಗ್ಲಿಷ್ ಕಲಿಸಲೆಂದು ಚೀನಕ್ಕೆ ಹೋಗಿದ್ದ. ಆಗ ಆತ ತನ್ನ ತಂದೆಗೆ, “ಚೀನದಲ್ಲಿ ಮುಸ್ಲಿಮರನ್ನು ಎಷ್ಟು ಕೆಟ್ಟದಾಗಿ ಕಾಣಲಾಗುತ್ತಿದೆ’ ಎಂಬುದನ್ನು ತಿಳಿಸಿ ತನ್ನ ಅಸಮಾಧಾನವನ್ನು ಪ್ರಕಟಿಸಿದ್ದ.
ಶಿವಂ ಪಟೇಲ್‌ನ ಉದ್ಯೋಗಪತಿ ಆತನನ್ನು ಚೀನದಿಂದ ಹಿಂದಕ್ಕೆ ಕಳಿಸಿದ ಬಳಿಕ ಶಿವಂ ಜೋರ್ಡಾನಿಗೆ ಹೋಗಿದ್ದ. ಅಲ್ಲಿ ಬಂಧನಕ್ಕೆ ಗುರಿಯಾಗಿದ್ದ ಆತ ಅಮೆರಿಕಕ್ಕೆ ಗಡೀಪಾರು ಗೊಂಡಿದ್ದ.
ಈ ನಡುವೆ ಐಸಿಸ್ ಉಗ್ರಸಂಘಟನೆಯಂದ ತೀವ್ರವಾಗಿ ಪ್ರಭಾವಿತನಾಗಿದ್ದ ಶಿವಂ, ಜಿಹಾದಿಯಾಗಿ ಪರಿವರ್ತಿತನಾಗಿದ್ದ. ಪ್ಯಾರಿಸ್, ನೀಸ್ ಮತು ಓರ್ಲಾಂಡೋದಲ್ಲಿ ನಡೆದಿದ್ದ ಇಸ್ಲಾಮಿಕ್ ದಾಳಿಗಳನ್ನು ಆತ ಪ್ರಶಂಸಿಸಿದ್ದ.