Advertisement

ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಅಂಗಾಂಗ ದಾನದ ಬಗ್ಗೆ ಜನರಲ್ಲಿ ತಕ್ಕಮಟ್ಟಿಗೆ ಅರಿವು ಮೂಡುತ್ತಿದ್ದು, ಇದರ ಫ‌ಲವಾಗಿ ರಾಜ್ಯದಲ್ಲಿ ಸ್ವಯಂಪ್ರೇರಿತವಾಗಿ ಹೆಸರು ನೋಂದಾಯಿಸಿಕೊಳ್ಳುತ್ತಿರುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಆದರೆ, ಮೆದುಳು ನಿಷ್ಕ್ರಿಯಗೊಂಡ ನಂತರವೂ ಕುಟುಂಬಗಳು ಅಸಮ್ಮತಿಯಿಂದ ಅಂಗಾಂಗಗಳು ವ್ಯರ್ಥ ವಾಗುತ್ತಿರುವ ಪ್ರಕರಣಗಳು ಮುಂದುವರಿದಿವೆ.

Advertisement

ಅಂಗಾಂಗ ದಾನಕ್ಕೆ ಇದುವರೆಗೆ 36,343 ಮಂದಿ ಸ್ವಯಂ ಪ್ರೇರಿತವಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಅಂಗಾಂಗಗಳು ಪಡೆಯುವ ಸಂದರ್ಭದಲ್ಲಿ ಕುಟುಂಬಸ್ಥರನ್ನು ವಿವಿಧ ಹಂತದಲ್ಲಿ ಸಮಾಲೋಚನೆಗೆ ಒಳಪಡಿಸಿ, ಮೆದುಳು ನಿಷ್ಕ್ರಿಯಗೊಂಡ 8ರಿಂದ 10 ಗಂಟೆಯೊಳಗೆ ಅಂಗಾಂಗಗಳನ್ನು ತೆಗೆದು ಅಗತ್ಯವಿರುವವರಿಗೆ ಕಸಿ ಮಾಡಬೇಕು. ಆದರೆ, ಇಂತಹ ಸಂದರ್ಭದಲ್ಲಿ ಕೆಲವು ಪ್ರಕರಣಗಳಲ್ಲಿ ಸಹಕಾರ ಸಿಗುತ್ತಿಲ್ಲ. ಪರಿಣಾಮ ವ್ಯರ್ಥವಾಗಿ ಹೋಗುತ್ತಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.

ರಾಜ್ಯಾದ್ಯಂತ ರಸ್ತೆ ಅಪಘಾತ ಸೇರಿದಂತೆ ವಿವಿಧ ಕಾರಣಗಳಿಂದ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಮನೆಯವರು ಬದುಕಬಹುದು ಎನ್ನುವ ಹುಸಿ ನಿರೀಕ್ಷೆ ಹಾಗೂ ದೇಹದ ಅಂಗಾಂಗಳನ್ನು ತೆಗೆದರೆ ಮುಕ್ತಿ ದೊರೆಯದು ಎಂಬ ಮೂಢನಂಬಿಕೆ ನೀರಸ ಸ್ಪಂದನೆಗೆ ಪ್ರಮುಖ ಕಾರಣ. ಇದರಿಂದ ಮರುಜೀವದ ನಿರೀಕ್ಷೆಯಲ್ಲಿ ರೋಗಿಗಳು ಅಗತ್ಯವಿರುವ ಅಂಗಾಂಗಗಳು ಸಿಗದೆ ಪರದಾಡುತ್ತಿದ್ದಾರೆ.

7,502 ಮಂದಿ ನಿರೀಕ್ಷೆ: ರಾಜ್ಯದಲ್ಲಿ ಇದುವರೆಗೆ 7,502 ಮಂದಿ ಅಂಗಾಂಗಗಳನ್ನು ಪಡೆದುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಪ್ರಸ್ತುತ ಮೂತ್ರಪಿಂಡ ಕಸಿಗೆ ಸಂಬಂಧಿಸಿದಂತೆ 5,288 ಮಂದಿ ದಾನಿಗಳ ನಿರೀಕ್ಷೆಯಲ್ಲಿದ್ದಾರೆ. ಯಕೃತ್‌ 1886, ಹೃದಯ 181, ಶಾಸ್ವಕೋಶ 68, ಹೃದಯ ಮತ್ತು ಶ್ವಾಸಕೋಶಗಳು 28, ಯಕೃತ್‌ ಮತ್ತು ಮೂತ್ರಪಿಂಡ 45, ಮೂತ್ರಪಿಂಡ ಮತ್ತು ಮೇದೋಜೀರಕಗ್ರಂಥಿ 23, ಹೃದಯ 2, ಸಣ್ಣ ಕರುಳಿಗಾಗಿ ಓರ್ವ ರೋಗಿ ಅಂಗಾಂಗಗಳ ದಾನಿಗಳ ನಿರೀಕ್ಷೆಯಲ್ಲಿದ್ದಾರೆ.

4,143 ಮಂದಿಗೆ ಮರುಜೀವ: ಕಳೆದ 17 ವರ್ಷದಿಂದ ಮೆದುಳು ನಿಷ್ಕ್ರಿಯಗೊಂಡ 856 ದಾನಿಗಳಿಂದ 4,143 ಮಂದಿ ಮರುಜೀವ ಸಿಕ್ಕಿದೆ. 2023ರ ಜನವರಿ- ಜುಲೈವರೆಗೆ ಮೆದುಳು ನಿಷ್ಕ್ರಿಯಗೊಂಡ 92 ಮಂದಿಯ ಅಂಗಾಂಗಗಳನ್ನು ದಾನ ಮಾಡಲಾಗಿದೆ. ಅದರಲ್ಲಿ 134 ಫ‌ಲಾನುಭವಿಗಳಿಗೆ ಮೂತ್ರಪಿಂಡ, ಯಕೃತ್‌ 74, ಹೃದಯ 13, ಮೂತ್ರಪಿಂಡ ಮತ್ತು ಮೇದೋಜೀರಕ ಗ್ರಂಥಿ 2, ಸಣ್ಣ ಕರಳು 1, ಶ್ವಾಸಕೋಶ 8, ಯಕೃತ್‌ ಮತ್ತು ಮೇದೋಜೀರಕ ಗ್ರಂಥಿ 5, ಹೃದಯ ಕವಾಟ 5, ಕಣ್ಣಿ ಕಾರ್ನಿಯಾ 182, ಚರ್ಮ 13 ರೋಗಿಗಳಿಗೆ ಸೇರಿದಂತೆ ಒಟ್ಟು 437 ಮಂದಿಗೆ ಜೀವ ದಾನವಾಗಿದೆ.

Advertisement

ಎಂಟು ಜನರಿಗೆ ಮರು ಜೀವ: ಒಬ್ಬ ವ್ಯಕ್ತಿ 8 ಜನರಿಗೆ ಮರುಜೀವ ನೀಡಬಹುದು. ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಕಾರ್ನಿಯಾ, ಹೃದಯ, ಹೃದಯ ಕವಾಟ, ಯಕೃತ್‌, ಮೂತ್ರಪಿಂಡ, ಚರ್ಮ, ಅಸ್ತಿಮಜ್ಜೆ, ಶ್ವಾಸಕೋಶ, ಕರುಳು ಸೇರಿದಂತೆ 25 ಕ್ಕೂ ಅಧಿಕ ಅಂಗಾಂಗಗಳನ್ನು ತೆಗೆದು ಬೇರೆಯವರಿಗೆ ಕಸಿ ಮಾಡಬಹುದು.

ಅಂಗಾಂಗ ದಾನಕ್ಕೆ ಯಾವುದೇ ವಯೋಮಿತಿ ಇಲ್ಲ. ಸಾವಿನ ಸಮಯದಲ್ಲಿ ವೈದ್ಯಕೀಯ ಹಿಸ್ಟರಿ ನೋಡಿ, ಅಂಗಗಳ ಕಾರ್ಯಕ್ಷಮತೆ ಪರಿಗಣಿಸಿ ಪಡೆಯಲಾಗುತ್ತದೆ. ಅಂಗಾಂಗ ಕಸಿ ಬೇಡಿಕೆ ಕಡಿಮೆಗೊಳಿಸಲು ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳಲು ಉತ್ತೇಜಿಸಲಾಗುತ್ತಿದೆ. ಅಂಗಾಂಗ ದಾನ ಬಗ್ಗೆ ವ್ಯಾಪಕವಾಗಿ ಜಾಗೃತಿ ಮೂಡಿಸಲಾಗುತ್ತಿದೆ. – ಡಾ.ರಜಿನಿ ಎಂ.. ಜಂಟಿ ನಿರ್ದೇಶಕಿ (ವೈದ್ಯಕೀಯ) ಸದಸ್ಯ ಕಾರ್ಯದರ್ಶಿ ಜೀವ ಸಾರ್ಥಕತೆ

– ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next