ರಾಣಿಬೆನ್ನೂರ: ಭಾರತೀಯ ಸಂಗೀತಕ್ಕೆ ಸಾವಿರಾರು ವರ್ಷಗಳ ಇತಿಹಾಸ, ಪರಂಪರೆಯಿದೆ. ಸಂಗೀತ, ಸಾಹಿತ್ಯ ಮತ್ತು ಜನಪದ ಸಾಂಸ್ಕೃತಿಕ ಕಲೆ ನಮ್ಮ ಪೂರ್ವಜರ ಬದುಕಿನ ಭಾಗವಾಗಿ ನಿತ್ಯ ಜೀವನದಲ್ಲಿ ಹಾಸು ಹೊಕ್ಕಾಗಿ ಬಂದಿದೆ ಎಂದು ಹಾವೇರಿ ಹೊಸ ಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.
ಕರ್ನಾಟಕ ಸಂಘದ ಆಲೂರು ವೆಂಕಟರಾವ್ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ಬೀರೇಶ್ವರ ವ್ಯಾಯಾಮ ಶಾಲೆ, ಕ್ರೀಡಾ ಸಾಂಸ್ಕೃತಿಕ ಸಂಘವು ಆಯೋಜಿಸಿದ್ದ ಸಂಗೀತ ಶ್ರಾವಣ ಶಾಸ್ತ್ರೀಯ ಮತ್ತು ಸುಗಮ ಸಂಗೀತ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಇಂತಹಭವ್ಯ ಸಂಸ್ಕೃತಿಯ ಸಂಗೀತ ಕಲೆಗಳನ್ನು ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಜತೆಗೆ ಪಠ್ಯೇತರ ಚಟುವಟಿಕೆಯಾಗಿ ಅಳವಡಿಸಿಕೊಳ್ಳಬೇಕಾದ ಇಂದಿನ ಬಹು ಅಗತ್ಯವಿದೆ ಎಂದರು.
ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೆ ಈ ನಾಡಿನ ಸಂಸ್ಕೃತಿ ಪರಂಪರೆಯ ಜನಪದ ಕಲೆ-ಸಾಹಿತ್ಯ-ಸಂಗೀತ ಅತ್ಯಂತ ಸಹಕಾರಿಯಾಗಿದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಭರಾಟೆಯಲ್ಲಿ ನಮ್ಮ ಯುವ ಜನಾಂಗ ಕರಗಿಹೋಗುತ್ತಿದೆ. ಭಾರತೀಯ ಕಲಾ ಪರಂಪರೆ ವಿಶ್ವಕ್ಕೆ ಮಾದರಿಯಾಗಿದ್ದು, ಅದನ್ನು ಅಳವಡಿಸಿಕೊಳ್ಳುವ ಮೂಲಕ ಸಂಸ್ಕೃತಿ, ಸಂಸ್ಕಾರ ಉಳಿಸಿ ಬೆಳೆಸಿಕೊಂಡು ಸಾಗಬೇಕಾದ ಅಗತ್ಯವಿದೆ ಎಂದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಸಂಘ-ಸಂಸ್ಥೆಗಳು ಇತ್ತೀಚಿನ ವರ್ಷಗಳಲ್ಲಿ ನಮ್ಮ ಇತಿಹಾಸದ ಕಲೆಗಳನ್ನು ಪರಿಚಯಿಸುವ ಮೂಲಕ ಸಮಾಜಮುಖೀ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಅತ್ಯಂತ ಶ್ಲಾಘನೀಯ ಕಾರ್ಯ. ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಂಸ್ಕೃತಿ ಇಲಾಖೆ ಉತ್ತಮ ಕೆಲಸ ಮಾಡುತ್ತಿದೆ ಎಂದರು.
ವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲಿಯೇ ಶಾಸ್ತ್ರೀಯ ಸಂಗೀತದ ಕಲಿಯುವ ಅಗತ್ಯವಿದೆ. ಭವಿಷ್ಯದ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿಯೂ ಪಠ್ಯದ ಭಾಗವಾಗಿ ಅಳವಡಿಕೆಯಾಗುವ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ ಇಂತಹ ಕಲಾವಿದರನ್ನು ಬಳಸಿಕೊಳ್ಳಬೇಕಾಗಿದೆ. ಶಿಕ್ಷಣ ಮತ್ತು ಸಂಗೀತ ಅಳವಡಿಸಿಕೊಂಡಿರುವ ರಜನಿ ಅವರ ಆಸಕ್ತಿ ಇತರರಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ನಗರಸಭಾ ಸದಸ್ಯೆ ಗಂಗಮ್ಮ ಹಾವನೂರು, ಜೆಸಿಐ ಅಧ್ಯಕ್ಷೆ ಪುಷ್ಪಾ ಬದಾಮಿ, ಇನ್ನರ್‌ವೀಲ್ ಕಾರ್ಯದರ್ಶಿ ಸುಮಾ ಹೊಟ್ಟಿಗೌಡ್ರ, ತಾಲೂಕು ಬ್ರಾಹ್ಮಣರ ಸಂಘದ ಅಧ್ಯಕ್ಷ ಶ್ರೀಪಾದ ಕುಲಕರ್ಣಿ, ಕ್ರೀಡಾ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ರಾಜು ಮೈಲಾರ, ಆನಂದ ಹುಲಬನ್ನಿ, ಪ್ರೊ| ಜಿ.ವಿ.ಕೋರಿ, ಸಂಜೀವ ಶಿರಹಟ್ಟಿ, ರೇಣುಕಾ ಕುರುಬರ, ಎಲ್.ಎಸ್.ಕರಿಗಾರ ಸೇರಿದಂತೆ ಮತ್ತಿತರರು ಇದ್ದರು. ನಂತರ ನಡೆದ ಕಲಾವಿದೆ ರಜನಿ ಕರಿಗಾರ ಅವರ ಶಾಸ್ತ್ರೀಯ-ಸುಗಮ ಸಂಗೀತ ಕಾರ್ಯಕ್ರಮ ಜನಮನ ರಂಜಿಸಿತು.