ದುಬೈ:ಅಪಾರ್ಟ್ ಮೆಂಟ್ ನೊಳಗೆ ಸಂಭವಿಸಿದ ಬೆಂಕಿ ದುರಂತದಲ್ಲಿ ಪತ್ನಿಯನ್ನು ರಕ್ಷಿಸಲು ಹೋದ ಭಾರತೀಯ ಮೂಲದ ಯುನೈಟೆಡ್ ಅರಬ್ ಎಮಿರೇಟ್ಸ್ ನ 32 ವರ್ಷದ ಯುವಕನ ದೇಹ ಶೇ.90ರಷ್ಟು ಸುಟ್ಟು ಹೋಗಿರುವ ಘಟನೆ ದುಬೈಯ ಉಮ್ ಅಲ್ ಖ್ವಾವೈನ್ ನಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಅನಿಲ್ ನಿನಾನ್ (32) ಎಂಬ ವ್ಯಕ್ತಿಯ ದೇಹ ಶೇ.90ರಷ್ಟು ಸುಟ್ಟು ಹೋಗಿದ್ದು, ಅಬುಧಾಬಿಯ ಮಾಪ್ರಾಖ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವುದಾಗಿ ನಿಕಟ ಸಂಬಂಧಿಯೊಬ್ಬರು ಖಲೀಜ್ ಟೈಮ್ಸ್ ಗೆ ತಿಳಿಸಿದ್ದಾರೆ.
ಯುವಕನ ಸ್ಥಿತಿ ತುಂಬಾ ಗಂಭೀರವಾಗಿದೆ. ನಾವೆಲ್ಲರೂ ಆತನಿಗಾಗಿ ಪ್ರಾರ್ಥಿಸಬೇಕಾಗಿದೆ ಎಂದು ಅನಿಲ್ ಸಂಬಂಧಿ ಪ್ರತಿಕ್ರಿಯೆ ನೀಡಿದ್ದಾರೆ. ಅನಿಲ್ ಪತ್ನಿಯನ್ನು ಕೂಡಾ ಮಾಪ್ರಾಖ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಕೆ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವರದಿ ವಿವರಿಸಿದೆ.
ಆಕೆಯ ದೇಹ ಕೇವಲ ಶೇ.10ರಷ್ಟು ಮಾತ್ರ ಸುಟ್ಟು ಹೋಗಿದ್ದು, ಶೀಘ್ರವೇ ಗುಣಮುಖವಾಗಲಿದ್ದಾರೆ. ಕೇರಳ ಮೂಲದ ದಂಪತಿಗೆ ನಾಲ್ಕು ವರ್ಷದ ಮಗನಿದ್ದಾನೆ ಎಂದು ವರದಿ ತಿಳಿಸಿದೆ.
ಸೋಮವಾರ ರಾತ್ರಿ ಉಮ್ ಅಲ್ ಖ್ವಾವೈನ್ ಅಪಾರ್ಟ್ ಮೆಂಟ್ ನ ಕಾರಿಡಾರ್ ನಲ್ಲಿದ್ದ ಎಲೆಕ್ಟ್ರಿಕ್ ಬಾಕ್ಸ್ ನಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರಬೇಕೆಂದು ಶಂಕಿಸಲಾಗಿದೆ. ಪತ್ನಿಗೆ ಬೆಂಕಿ ತಗುಲಿದ್ದನ್ನು ಗಮನಿಸಿದ ಪತಿ ಆಕೆಯನ್ನು ರಕ್ಷಿಸಲು ಹೋಗಿ ಪತಿಯ ದೇಹದ ಭಾಗವೇ ಶೇ.90ರಷ್ಟು ಸುಟ್ಟುಹೋಗಿರುವುದಾಗಿ ವರದಿ ವಿವರಿಸಿದೆ. ಸೋಮವಾರ ರಾತ್ರಿಯೇ ದಂಪತಿಯನ್ನು ಶೇಕ್ ಖಲೀಫಾ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅಬುಧಾಬಿಯ ಮಾಫ್ರಾಖ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.