Advertisement

ಐಐಟಿಯಲ್ಲಿ ಕನ್ನಡಿಗರ ಮೀಸಲಿಗೆ ಮರುಜೀವ

06:00 AM Jul 07, 2018 | |

ಧಾರವಾಡ: ರಾಜ್ಯದ ಏಕೈಕ ಧಾರವಾಡ ಐಐಟಿ (ಭಾರತೀಯ ತಂತ್ರಜ್ಞಾನ ಸಂಸ್ಥೆ)ಯಲ್ಲಿ ಕರ್ನಾಟಕದ
ವಿದ್ಯಾರ್ಥಿಗಳಿಗೆ ಸೀಟು ಕಾಯ್ದಿರಿಸುವ ವಿಚಾರಕ್ಕೆ ನೂತನ ಸಮ್ಮಿಶ್ರ ಸರ್ಕಾರ ಮತ್ತೆ ಧ್ವನಿಗೂಡಿಸಲು ಸಜ್ಜಾಗಿದೆ.

Advertisement

ಧಾರವಾಡ ಹೈಕೋರ್ಟ್‌ ಬಳಿ 470 ಎಕರೆ ಭೂಮಿ, ಕುಡಿಯಲು ಶುದ್ಧವಾದ ಮಲಪ್ರಭಾ ನೀರು, ದಿನದ 24 ಗಂಟೆ ವಿದ್ಯುತ್‌ ಪೂರೈಕೆ, 100 ಕೋಟಿ ರೂ.ಗಳಿಗೂ ಅಧಿಕ ಹಣ ಖರ್ಚು ಮಾಡಿ ತಾತ್ಕಾಲಿಕ ಐಐಟಿ ಕ್ಯಾಂಪಸ್‌ ನಿರ್ಮಿಸಿದ್ದು ಸೇರಿ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ರಾಜ್ಯ ಸರ್ಕಾರ ಐಐಟಿಗೆ ಒದಗಿಸಿದೆ. ಇದ್ದಕ್ಕೆ ಪ್ರತಿಯಾಗಿ ರಾಜ್ಯದ 
ವಿದ್ಯಾರ್ಥಿಗಳಿಗೆ ಕೆಲವಷ್ಟು ಸೀಟು ಕಾಯ್ದಿರಬೇಕೆಂದು ಈ ಹಿಂದಿನ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಇಟ್ಟಿದ್ದ ಬೇಡಿಕೆಯನ್ನು ಮತ್ತೂಮ್ಮೆ ಪ್ರಸ್ತಾಪಿಸಲು ಸಮ್ಮಿಶ್ರ ಸರ್ಕಾರ ಆಸಕ್ತಿ ತೋರಿಸಿದೆ.

ಧಾರವಾಡ ಐಐಟಿಯಲ್ಲಿ ಕನ್ನಡದ ವಿದ್ಯಾರ್ಥಿಗಳ ಸಂಖ್ಯೆ ಕಳೆದ ಎರಡೂ ವರ್ಷಗಳಲ್ಲೂ ಎರಡಂಕಿ ತಲುಪಿಲ್ಲ. 2016ರಲ್ಲಿ ಎಂಟು, 2017ರಲ್ಲಿ 9 ಮತ್ತು 2018ರಲ್ಲಿ ಇದೀಗ ಆಯ್ಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಹೊರ ರಾಜ್ಯದ ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ತಾಂತ್ರಿಕ ಶಿಕ್ಷಣ ಪಡೆಯಲು ರಾಜ್ಯದ ವಿದ್ಯಾರ್ಥಿಗಳಿಗೆ ಎನ್‌ಐಟಿ ಮಾದರಿಯಲ್ಲಿ ಒಂದಿಷ್ಟು ಸೀಟುಗಳನ್ನು ಕಾಯ್ದಿರಿಸಬೇಕು ಎನ್ನುವ ಬೇಡಿಕೆ ಇದೆ.

ಸಮ್ಮಿಶ್ರ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯಲ್ಲಿನ ಹಿರಿಯ ಅಧಿಕಾರಿಗಳು ಇದೀಗ ಧಾರವಾಡ ಐಐಟಿಯಲ್ಲಿ ಎನ್‌ಐಟಿ ಮಾದರಿಯಲ್ಲಿ ಮೀಸಲು ತರಬಹುದೇ ಎಂಬ ಕುರಿತು ಚಿಂತನೆ ನಡೆಸಿದ್ದಾರೆ.

ಧಾರವಾಡ ಐಐಟಿ ಮುಖ್ಯಸ್ಥರಿಂದ ಮೀಸಲು ಸಾಧ್ಯತೆಯ ವಿವರದ ಜತೆಗೆ ಧಾರವಾಡ ಐಐಟಿಯಲ್ಲಿನ ಕನ್ನಡಿಗ ವಿದ್ಯಾರ್ಥಿಗಳ ಸಂಖ್ಯೆ ಕುರಿತು ಮಾಹಿತಿ ಕೇಳಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

ಪ್ರಸ್ತುತ ಧಾರವಾಡ ಐಐಟಿಯಲ್ಲಿ ಒಟ್ಟು 240 ವಿದ್ಯಾರ್ಥಿಗಳಿದ್ದು, ಕಂಪ್ಯೂಟರ್‌ ವಿಜ್ಞಾನ, ಮೆಕ್ಯಾನಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ 17 ವಿದ್ಯಾರ್ಥಿಗಳು ಮಾತ್ರ ಕನ್ನಡಿಗರಿದ್ದಾರೆ. ಇನ್ನುಳಿದ 223 ವಿದ್ಯಾರ್ಥಿಗಳು ಹೊರ ರಾಜ್ಯದ ವಿದ್ಯಾರ್ಥಿಗಳಿದ್ದಾರೆ. ಅದರಲ್ಲೂ ಉತ್ತರ ಭಾರತದ
ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿದೆ.

ಕಾನೂನು ತೊಂದರೆಯೇ?: ಧಾರವಾಡ ಐಐಟಿಯಲ್ಲಿ ಕನ್ನಡ ವಿದ್ಯಾರ್ಥಿಗಳಿಗೆ ಸೀಟು ಮೀಸಲಿಡಲು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಕಾನೂನು ಪರಿಮಿತಿಯ ಕಾರಣವನ್ನು ರಾಜ್ಯ ಸರ್ಕಾರದ ಮುಂದಿಟ್ಟಿದೆ. ಐಐಟಿಸೇರಿ ಕೇಂದ್ರ ಸರ್ಕಾರ ವ್ಯಾಪ್ತಿಯಲ್ಲಿನ  ಶಿಕ್ಷಣ ಸಂಸ್ಥೆಗಳ ಕಾನೂನಿನ ಅನ್ವಯ ಸ್ಥಳೀಯರಿಗೆ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಆದರೆ ಧಾರವಾಡ ಐಐಟಿಯಲ್ಲಿ ಕನ್ನಡಿಗರಿಗೆ ಕೆಲವು ಸೀಟುಗಳನ್ನು ಕಾಯ್ದಿರಿಸುವುದು ಸೇರಿ ದೇಶದ ಎಲ್ಲಾ ಐಐಟಿಗಳಲ್ಲೂ ಆಯಾ ರಾಜ್ಯಗಳ ವಿದ್ಯಾರ್ಥಿಗಳಿಗೆ ಸೀಟು ನೀಡಬಹುದು.

ಈಗಾಗಲೇ ಎನ್‌ಐಟಿಯಲ್ಲಿ ಇದು ಜಾರಿಯಲ್ಲಿದ್ದು, ಇದೇ ಮಾದರಿಯನ್ನು ಐಐಟಿಗೂ ವಿಸ್ತರಿಸಬಹುದು ಎಂಬ ವಾದ ಮುಂದಿಡಲು ಸಜ್ಜಾಗಿದೆ.

ಮೀಸಲಾತಿ ಏಕಿಲ್ಲ?
ಈಗಾಗಲೇ ಐಐಟಿಗಳಲ್ಲಿ ಜಾತಿವಾರು ಮೀಸಲಾತಿ ಜಾರಿಯಲ್ಲಿದೆ. ಪ್ರಸಕ್ತ ವರ್ಷದಿಂದ ಶೇ.14ರಷ್ಟು ಸೀಟುಗಳನ್ನು ವಿದ್ಯಾರ್ಥಿನಿಯರಿಗೆ ಮೀಸಲಿಡುವ ಪ್ರಸ್ತಾವನೆ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌
ಟೆಕ್ನಾಲಜಿ (ಎನ್‌ಐಟಿ)ಗಳಲ್ಲಿ ಶೇ.50ರಷ್ಟು ಸೀಟುಗಳು ಆಯಾ ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಿದೆ. ಎನ್‌ಐಟಿಗಳ ವಿಚಾರದಲ್ಲಿ ಕೇಂದ್ರ ಸರ್ಕಾರ ಈ ಹಿಂದೆಯೇ ಮೀಸಲಾತಿ ನಿರ್ಧಾರ ಕೈಗೊಂಡಾಗಿದೆ. ಆದರೆ ದೇಶದ ಯಾವುದೇ
ಐಐಟಿಗಳಲ್ಲಿಯೂ ಈವರೆಗೂ ರಾಜ್ಯಗಳ ಕೋಟಾದಲ್ಲಿ ಸೀಟುಗಳ ಮೀಸಲಾತಿಗೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಅವಕಾಶ ನೀಡಿಲ್ಲ.

ಐಐಟಿಯಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಬೇಕು ಎನ್ನುವುದು ಒಳ್ಳೆಯ ಬೇಡಿಕೆ. ಈ ಬಗ್ಗೆ ಹಿಂದಿನ ಸರ್ಕಾರ ಪ್ರಯತ್ನ ಮಾಡಿತ್ತು. ಆದರೆ ನಂತರ ಏನಾಯಿತು ಎಂಬ ಬಗ್ಗೆ ಅಧಿವೇಶನ ಮುಗಿದ ತಕ್ಷಣವೇ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ.
– ಜಿ.ಟಿ.ದೇವೇಗೌಡ,
ಉನ್ನತ ಶಿಕ್ಷಣ ಸಚಿವ

ಧಾರವಾಡ ಐಐಟಿಗೆ ಮೀಸಲಾತಿ ನೀಡಿದರೆ ದೇಶದ ಇತರ ಐಐಟಿಗಳಲ್ಲಿ ಯೂ ಮೀಸಲಾತಿ ನೀಡಬೇಕು. ಇದರಿಂದ ಉತ್ತಮ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ.
ಪ್ರಹ್ಲಾದ ಜೋಶಿ,
ಧಾರವಾಡ ಸಂಸದ

– ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next