ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿಯಲ್ಲಿ ಸಾಧನೆ ಮಾಡಿ, ಒಂದು ಕಾಲದಲ್ಲಿ ಹಾಕಿ ಸ್ವರ್ಣಯುಗ ನಿರ್ಮಿಸಿದವರು ಧ್ಯಾನ್ ಚಂದ್. ನಂತರದ ಕಾಲದಲ್ಲಿ ಹಾಕಿ ಸೂಪರ್ ಸ್ಟಾರ್ ಆಗಿ ಮೆರೆದವರು ಧನರಾಜ್ ಪಿಳ್ಳೈ.
ಧನರಾಜ್ ಪಿಳ್ಳೈ ಅವರು ಜನಿಸಿದ್ದು 1968ರ ಜುಲೈ 16ರಂದು. ಮಹಾರಾಷ್ಟ್ರದ ಖಡ್ಕಿ ಗ್ರಾಮದಲ್ಲಿ. ತಮಿಳು ಕುಟುಂಬದ ಮೂಲದವರಾದ ಧನರಾಜ್ ಪಿಳ್ಳೈ ಅವರು ನಂತರ ಮುಂಬೈನಲ್ಲಿ ನೆಲೆಸಿದ್ದರು.
1989ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ಧನರಾಜ್ ಪಿಳ್ಳೈ ಅವರು 2004ರ ಆಗಸ್ಟ್ ವರೆಗೆ ಭಾರತ ರಾಷ್ಟ್ರೀಯ ತಂಡದ ಪರವಾಗಿ ಆಡಿದ್ದಾರೆ. ಭಾರತ ತಂಡದ ಪರವಾಗಿ ಧನರಾಜ್ ಪಿಳ್ಳೈ ಸುಮಾರು 339 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಣಕ್ಕೆ ಇಳಿದಿದ್ದಾರೆ. ದುರಂತವೆಂದರೆ ಈ ದಿಗ್ಗಜ ಆಟಗಾರ ಎಷ್ಟು ಗೋಲು ಬಾರಿಸಿದ್ದಾರೆಂದು ಭಾರತೀಯ ಹಾಕಿ ಫೆಡರೇಶನ್ ಲೆಕ್ಕವೇ ಇಟ್ಟಿಲ್ಲ! ಒಂದು ಲೆಕ್ಕಾಚಾರದ ಪ್ರಕಾರ ಧನರಾಜ್ ಪಿಳ್ಳೈ ಅವರು ಅಂತಾರಾಷ್ಟ್ರೀಯ ಹಾಕಿ ಪಂದ್ಯಗಳಲ್ಲಿ ಬಾರಿಸಿರುವ ಒಟ್ಟು ಗೋಲುಗಳ ಸಂಖ್ಯೆ 170.
ಧನರಾಜ್ ಪಿಳ್ಳೈ ಅವರು ನಾಲ್ಕು ಒಲಿಂಪಿಕ್ಸ್ ( 1992, 1996, 2000 ಮತ್ತು 2004), ನಾಲ್ಕು ಹಾಕಿ ವಿಶ್ವಕಪ್ (1990, 1994, 1998 ಮತ್ತು 2002), ನಾಲ್ಕು ಚಾಂಪಿಯನ್ಸ್ ಟ್ರೋಫಿ (1995, 1996, 2002 ಮತ್ತು 2003) ನಾಲ್ಕು ಏಶ್ಯನ್ ಗೇಮ್ಸ್ (1990, 1994, 1998, ಮತ್ತು 2002) ಗಳಲ್ಲಿ ಆಡಿದ್ದಾರೆ. ಇಷ್ಟು ಕೂಟಗಳಲ್ಲಿ ಆಡಿರುವ ಏಕಮಾತ್ರ ಹಾಕಿ ಆಟಗಾರ ಧನರಾಜ್ ಪಿಳ್ಳೈ.
ಧನರಾಜ್ ಪಿಳ್ಳೈ ನಾಯಕತ್ವದಲ್ಲಿ ಭಾರತ ಎರಡು ಬಾರಿ ಏಶ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಜಯಿಸಿದೆ. ಬ್ಯಾಂಕಾಕ್ ಏಶ್ಯನ್ ಗೇಮ್ಸ್ ಕೂಟದಲ್ಲಿ ಅತೀ ಹೆಚ್ಚು ಗೋಲು ಬಾರಿಸಿದ ಸಾಧನೆ ಮಾಡಿದ್ದರು ಪಿಳ್ಳೈ. 1994ರ ಹಾಕಿ ವರ್ಲ್ಡ್ ಕಪ್ ನಲ್ಲಿ ವಿಶ್ವ ಇಲೆವೆನ್ ನಲ್ಲಿ ಸ್ಥಾನ ಪಡೆದ ಏಕಮಾತ್ರ ಭಾರತೀಯ ಹಾಕಿ ಪಟು ಧನರಾಜ್ ಪಿಳ್ಳೈ.
ಹಾಕಿ ಮೈದಾನದಲ್ಲಿ ಪಾದರಸದಂತೆ ಚಲಿಸುತ್ತಿದ್ದ ಪಿಳ್ಳೈ ಅವರು ಬಹಳಷ್ಟು ವಿದೇಶಿ ಕ್ಲಬ್ ಗಳಲ್ಲೂ ಆಡಿದ್ದಾರೆ. ಲಂಡನ್ ನ ಇಂಡಿಯನ್ ಜಿಮ್ಖಾನ, ಫ್ರಾನ್ಸ್ ನ ಎಚ್ ಸಿ ಲಯಾನ್, ಮಲೇಶಿಯಾದ ಟೆಲಿಕಾಮ್ ಕ್ಲಬ್, ಅಭಹಾನಿ ಲಿಮಿಟೆಡ್ ಮುಂತಾದ ಕ್ಲಬ್ ಗಳಲ್ಲಿ ಆಡಿದ್ದಾರೆ. ಪ್ರೀಮಿಯರ್ ಹಾಕಿ ಲೀಗ್ ನಲ್ಲಿ ಮರಾಠ ವಾರಿಯರ್ಸ್ ಪರವಾಗಿಯೂ ಧನರಾಜ್ ಆಡಿದ್ದರು.
ರಾಜೀವ್ ಗಾಂಧಿ ಖೇಲ್ ರತ್ನ, ಪದ್ಮಶ್ರೀ ಪ್ರಶಸ್ತಿ ವಿಜೇತ ಧನರಾಜ್ ಪಿಳ್ಳೈ 2014ರಲ್ಲಿ ರಾಜಕೀಯಕ್ಕೂ ಸೇರಿದ್ದರು. ತನ್ನ ಕ್ರೀಡಾ ಜೀವನದಲ್ಲಿ ಹಲವಾರು ಬಾರಿ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು ಪಿಳ್ಳೈ. ವೇತನದ ವಿಚಾರವಾಗಿ ಹಾಕಿ ಫೆಡರೇಶನ್ ವಿರುದ್ಧವೇ ತಿರುಗಿ ನಿಂತಿದ್ದರು. ವಿದೇಶಿ ಸರಣಿಗಳಿಗೆ ಕಡಿಮೆ ವೇತನ ನೀಡಲಾಗುತ್ತದೆ ಎಂದು ಪ್ರತಿಭಟನೆ ನಡೆಸಿದ್ದ ಧನರಾಜ್ ಪಿಳ್ಳೈ ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸಿದಾಗ ನನ್ನ ಕೆಲವು ಕಹಿ ಘಟನೆಗಳು ಈ ಪ್ರಶಸ್ತಿಯಿಂದ ಮರೆತು ಹೋಗಲಿದೆ ಎಂದಿದ್ದರು.