Advertisement

ಭಾರತೀಯ ಜಿಮ್ನಾಸ್ಟ್‌ಗಳಿಗೆ ತರಬೇತುದಾರರಿಲ್ಲ , ಕಿಟ್‌ ಸಿಕ್ಕಿಲ್ಲ !

06:00 AM Mar 22, 2018 | |

ಕೋಲ್ಕತಾ: ಕ್ರೀಡಾ ಪಟುಗಳ, ಕ್ರೀಡಾಭಿಮಾನಿಗಳ ಚಿತ್ತ ಮುಂಬರಲಿರುವ ಕಾಮನ್ವೆಲ್ತ್‌ ಗೇಮ್ಸ್‌ ಕಡೆಗೆ ಹರಿಯುತ್ತಿದೆ. ಎ. 4ರಿಂದ 15ರ ವರೆಗೆ ಆಸ್ಟ್ರೇಲಿಯದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆಯಲಿರುವ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಪದಕ ಗೆಲ್ಲಲು ಅಂತಾರಾಷ್ಟ್ರೀಯ ತಂಡಗಳು ಭಾರೀ ತಯಾರಿ ನಡೆಸುತ್ತಿವೆ. ಆದರೆ ಭಾರತದ ಕೆಲವು ಕ್ರೀಡಾಳುಗಳ ಸ್ಥಿತಿ ಅತಂತ್ರವಾಗಿದೆ. ಇದಕ್ಕೆ ಪುರಾವೆಯೆಂಬಂತೆ ಜಿಮ್ನಾಸ್ಟ್‌ಗಳಿಗೆ ತರಬೇತುದಾರರ ನೇಮಕವಾಗಿಲ್ಲ. ಇನ್ನೂ ಗೇಮ್ಸ್‌ ಕಿಟ್‌ ಸಿಕ್ಕಿಲ್ಲ!

Advertisement

ಕಾಮನ್ವೆಲ್ತ್‌ ಗೇಮ್ಸ್‌ ಸಲುವಾಗಿ ಭಾರತೀಯ ಜಿಮ್ನಾಸ್ಟ್‌ಗಳು ಕಳೆದು 3 ತಿಂಗಳಿನಿಂದ ತರಬೇತಿ ಆರಂಭಿಸಿದ್ದಾರೆ. ಆದರೆ ಯಾವ ಜಿಮ್ನಾಸ್ಟ್‌ಗೂ ಗೇಮ್ಸ್‌ ಕಿಟ್‌ ಸಿಕ್ಕಿಲ್ಲ. ದುರಂತವೆಂದರೆ, “ಜಿಮ್ನಾಸ್ಟ್‌ ಫೆಡರೇಶನ್‌ ಆಫ್ ಇಂಡಿಯಾ’ (ಜಿಎಫ್ಐ) ಈ ತಂಡಕ್ಕೆ ನುರಿತ ತರಬೇತುದಾರರನ್ನೇ ನೇಮಿಸಿಲ್ಲ. ಒಂದು ತಿಂಗಳಿಂದೀಚೆಗೆ ಇಂದಿರಾ ಗಾಂಧಿ ಸ್ಟೇಡಿಯಂನಲ್ಲಿ ತರಬೇತಿ ನಿರತರಾಗಿರುವ ಆ್ಯತ್ಲೀಟ್‌ಗಳು ಪ್ರಾಧಿಕಾರದ ಔದಾಸೀನ್ಯ ನಿಲುವಿ ನಿಂದ ಬೇಸರಗೊಂಡಿದ್ದಾರೆ. ಆದರೆ ಯಾರೂ ಫೆಡರೇಶನ್‌ ನಿಲುವನ್ನು ವಿರೋಧಿಸಲು ಮುಂದಾಗಿಲ್ಲ. ಗಾಯದ ಸಮಸ್ಯೆಯಲ್ಲಿರುವ ದೀಪಾ ಕರ್ಮಾಕರ್‌ ಈ ಬಾರಿಯ ಕಾಮನ್ವೆಲ್ತ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಆದರೆ ಭಾರತೀಯ ಜಿಮ್ನಾಸ್ಟ್‌ ತಂಡದಲ್ಲಿರುವ ಬಂಗಾಲದ ಜಿಮ್ನಾಸ್ಟ್‌ಗಳಾದ ಪ್ರಣತಿ ನಾಯಕ್‌ ಮತ್ತು ಪ್ರಣತಿ ದಾಸ್‌ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ದೀಪಾ ಕೋಚ್‌ ಬಿಶ್ವೇಶ್ವರ್‌ ನಂದಿ ಸುದ್ದಿಗಾರರೊಂದಿಗೆ ಮಾತ ನಾಡಿ, “ಈ ರೀತಿ ಆಗಿದ್ದನ್ನು ನಾನು ಯಾವತ್ತೂ ನೋಡಿಲ್ಲ. ನಮ್ಮ ದೇಶದಲ್ಲಿ ಮಾತ್ರ ಹೀಗಾಗಲು ಸಾಧ್ಯ’ ಎಂದು ಬೇಸರ ತೋಡಿ ಕೊಂಡರೆ ಇನ್ನೊಬ್ಬ ಹಿರಿಯ ತರಬೇತುದಾರ ಜಯಪ್ರಕಾಶ್‌ ಚಕ್ರವರ್ತಿ, “ತರಬೇತುದಾರರ ಹೆಸರನ್ನು ಪ್ರಕಟಿಸುವ ಬಗ್ಗೆ ನಮಗೆ ಏನೂ ತಿಳಿದಿಲ್ಲ’ ಎಂದಿದ್ದಾರೆ.

 ವೈಯಕ್ತಿಕ ತರಬೇತುದಾರರು
ಪುರುಷರ ವಿಭಾಗದ ಜಿಮ್ನಾಸ್ಟ್‌ ಆಶಿಷ್‌ ಕುಮಾರ್‌ ತನ್ನ ವೈಯಕ್ತಿಕ ಕೋಚ್‌ನೊಂದಿಗೆ ಆಸ್ಟ್ರೇಲಿಯಕ್ಕೆ ತೆರಳಿದ್ದಾರೆ. ಮತ್ತೂಬ್ಬ ಜಿಮ್ನಾಸ್ಟ್‌ ರಾಕೇಶ್‌ ಪಟ್ರಾ ಅವರೂ ವೈಯಕ್ತಿಕ ತರಬೇತುದಾರರೊಂದಿಗೆ ಮುಂಬಯಿಯಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.

ಶೂಟಿಂಗ್‌: ಹೆಚ್ಚು ಪದಕ ನಿರೀಕ್ಷೆ
ಆಸ್ಟ್ರೇಲಿಯದ ಗೋಲ್ಡ್‌ಕೋಸ್ಟ್‌ ನಲ್ಲಿ ನಡೆಯಲಿರುವ 2018ರ ಕಾಮ ನ್ವೆಲ್ತ್‌ ಗೇಮ್ಸ್‌ನಲ್ಲಿ ಯುವ ಶೂಟರ್‌ಗಳಿರುವ ಭಾರತದ ತಂಡ ಪಾರಮ್ಯ ಮೆರೆಯುವ ಸಾಧ್ಯತೆಯಿದೆ. ಬ್ರಿಸ್ಬೇನಿನ “ಬೆಲ್ಮಾಂಟ್‌ ಶೂಟಿಂಗ್‌ ಕಾಂಪ್ಲೆಕ್ಸ್‌’ನಲ್ಲಿ ಎ. 8ರಿಂದ 14ರ ವರೆಗೆ ನಡೆಯಲಿರುವ ವಿವಿಧ ವಿಭಾಗಗಳ ಶೂಟಿಂಗ್‌ ಸ್ಪರ್ಧೆಯಲ್ಲಿ ಹೆಚ್ಚಿನ ಪದಕಗಳು ಭಾರತದ ಪಾಲಾಗುವ ನಿರೀಕ್ಷೆ ಹೆಚ್ಚಿದೆ.

Advertisement

ಭಾರತೀಯ ಶೂಟಿಂಗ್‌ ತಂಡವು ಮನು ಭಾಕರ್‌, ಮೆಹುಲಿ ಘೋಷ್‌, ಅನೀಶ್‌ ಭಾನ್ವಾಲಾ ಮತ್ತು ಅಂಜುಮ್‌ ಮೌಡ್ಗಿಲ್‌ ಅವರಂತಹ ಭರವಸೆಯ ಯುವ ಶೂಟರ್‌ಗಳನ್ನು ಒಳಗೊಂಡಿದ್ದು, ಸಹಜವಾಗಿಯೇ ಪದಕ ನಿರೀಕ್ಷೆಯನ್ನು ಹೆಚ್ಚಿಸಿದೆ. ಇತ್ತೀಚೆಗೆ ಮೆಕ್ಸಿಕೋದಲ್ಲಿ ನಡೆದ “ಇಂಟರ್‌ನ್ಯಾಶನಲ್‌ ಶೂಟಿಂಗ್‌ ನ್ಪೋರ್ಟ್ಸ್ ಪೆಡರೇಶನ್‌ ವರ್ಲ್ಡ್ ಕಪ್‌’ನಲ್ಲಿ ಭಾರತದ ಯುವ ಶೂಟರ್‌ಗಳು ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುವ ಮೂಲಕ ಗಮನ ಸೆಳೆದಿದ್ದರು. ಇದರಲ್ಲಿ 4 ಚಿನ್ನದೊಂದಿಗೆ ಒಟ್ಟು 9 ಪದಕಗಳು ಭಾರತದ ಪಾಲಾಗಿದ್ದವು.

ಯುವ ಶೂಟರ್‌ಗಳಿಗೆ ಉತ್ತಮ ಭವಿಷ್ಯವಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ ಎಂದು ನ್ಯಾಶನಲ್‌ ರೈಫ್ ಅಸೋಸಿಯೇಶನ್‌ ಆಫ್ ಇಂಡಿಯಾದ ಮುಖ್ಯಸ್ಥ ರಣೀಂದರ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next