Advertisement

ಭಾರತೀಯ ಫ‌ುಟ್‌ಬಾಲ್‌ ಶ್ರೇಷ್ಠ ಪಿ.ಕೆ. ಬ್ಯಾನರ್ಜಿ ಇನ್ನಿಲ್ಲ

09:56 AM Mar 21, 2020 | Sriram |

ಕೋಲ್ಕತಾ: ಭಾರತೀಯ ಫ‌ುಟ್‌ಬಾಲ್‌ ದಂತಕತೆ, ಕಳೆದ 51 ವರ್ಷಗಳಿಂದ ದೇಶಿ ಫ‌ುಟ್‌ಬಾಲ್‌ಗೆ ಸೇವೆ ಸಲ್ಲಿಸಿದ ಪಿ.ಕೆ. ಬ್ಯಾನರ್ಜಿ ಶುಕ್ರವಾರ ಅಪರಾಹ್ನ 12.40ಕ್ಕೆ ಕೋಲ್ಕತಾದ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. 83 ವರ್ಷದ ಅವರು ತೀವ್ರ ಅನಾರೋಗ್ಯದಿಂದ ಮಾ. 2ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದ ಅವರು ಕೆಲವು ದಿನಗಳಿಂದ ವೆಂಟಿಲೇಟರ್‌ ನೆರವಿನಲ್ಲೇ ಇದ್ದರು.

Advertisement

1936ರ ಜೂ. 23ರಂದು ಪಶ್ಚಿಮ ಬಂಗಾಲದ ಮೊಯ್ನಾಗುರಿಯಲ್ಲಿ ಜನಿಸಿದ ಅವರ ಪೂರ್ತಿ ಹೆಸರು ಪ್ರದೀಪ್‌ ಕುಮಾರ್‌ ಬ್ಯಾನರ್ಜಿ. 16ರ ಹರೆಯದಲ್ಲಿ ಬಿಹಾರ ಪರ “ಸಂತೋಷ್‌ ಟ್ರೋಫಿ’ ಮೂಲಕ ಫ‌ುಟ್‌ಬಾಲ್‌ ರಂಗಪ್ರವೇಶಿಸಿದ ಬ್ಯಾನರ್ಜಿ, 51 ವರ್ಷಗಳ ಬಳಿಕ ಫ‌ುಟ್‌ಬಾಲ್‌ನಿಂದ ದೂರ ಸರಿಯುವಾಗ ಮೊಹಮದನ್‌ ತಂಡದ ಕೋಚ್‌ ಆಗಿದ್ದರು. ಈ ಅವಧಿಯಲ್ಲಿ ಭಾರತೀಯ ಫ‌ುಟ್‌ಬಾಲನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು.

84 ಪಂದ್ಯ, 65 ಗೋಲು
ಭಾರತ ಪರ 84 ಪಂದ್ಯಗಳನ್ನಾಡಿದ ಪಿ.ಕೆ. ಬ್ಯಾನರ್ಜಿ 65 ಗೋಲು ಬಾರಿಸಿದ ಸಾಹಸಿ. ಅವರ ಈ ಪರಾಕ್ರಮವನ್ನು ಗುರುತಿಸಿದ ಫಿಫಾ, ಭಾರತದ 20ನೇ ಶತಮಾನದ ಶ್ರೇಷ್ಠ ಕ್ರೀಡಾಪಟು ಗೌರವ ನೀಡಿತ್ತು. 2004ರಲ್ಲಿ ಪ್ರತಿಷ್ಠಿತ “ಸೆಂಟಿನಿಯಲ್‌ ಆರ್ಡರ್‌ ಆಫ್ ಮೆರಿಟ್‌’ ಗೌರವಕ್ಕೂ ಪಾತ್ರರಾಗಿದ್ದರು.

ಪಿ.ಕೆ. ಬ್ಯಾನರ್ಜಿ 1962ರ ಜಕಾರ್ತಾ ಏಶ್ಯನ್‌ ಗೇಮ್ಸ್‌ ಬಂಗಾರ ವಿಜೇತ ಭಾರತೀಯ ತಂಡದ ತಾರಾ ಆಟಗಾರನಾಗಿದ್ದರು. ದಕ್ಷಿಣ ಕೊರಿಯಾ ಎದುರಿನ ಫೈನಲ್‌ನಲ್ಲಿ ಭಾರತ 2-1 ಅಂತರದ ಜಯಭೇರಿ ಮೊಳಗಿಸಿ ಚಾಂಪಿಯನ್‌ ಆಗಿತ್ತು. ಈ ಪಂದ್ಯದ ಆರಂಭಿಕ ಗೋಲನ್ನು ಬ್ಯಾನರ್ಜಿ ಅವರೇ ಬಾರಿಸಿದ್ದರು (17ನೇ ನಿಮಿಷ). ಇನ್ನೊಂದು ಗೋಲನ್ನು ಜರ್ನೈಲ್‌ ಸಿಂಗ್‌ ಧಿಲ್ಲೋನ್‌ ಹೊಡೆದಿದ್ದರು. ಅದು ಭಾರತೀಯ ಫ‌ುಟ್‌ಬಾಲ್‌ನ ಸ್ವರ್ಣಯುಗವಾಗಿತ್ತು. ಪಿ.ಕೆ. ಬ್ಯಾನರ್ಜಿ ಈ ಸ್ವರ್ಣ ವಿಜೇತ ತಂಡದ, ಬದುಕುಳಿದ ಏಕೈಕ ಸದಸ್ಯನಾಗಿದ್ದರು.

ಒಲಿಂಪಿಕ್ಸ್‌ನಲ್ಲೂ ಆಟ
1956ರ ಮೆಲ್ಬರ್ನ್ ಒಲಿಂಪಿಕ್ಸ್‌ನಲ್ಲಿ ಭಾರತ ಆತಿಥೇಯ ಆಸ್ಟ್ರೇಲಿಯವನ್ನು 4-1ರಿಂದ ಮಣಿಸಿ 4ನೇ ಸ್ಥಾನದ ಗೌರವ ಸಂಪಾದಿಸಿತ್ತು. ಬ್ಯಾನರ್ಜಿ ಈ ತಂಡದ ಸದಸ್ಯನೂ ಆಗಿದ್ದರು. 1960ರಲ್ಲಿ ಕೊನೆಯ ಸಲ ರೋಮ್‌ ಒಲಿಂಪಿಕ್ಸ್‌ನಲ್ಲಿ ಆಡುವಾಗ ಬ್ಯಾನರ್ಜಿ ಭಾರತದ ಫ‌ುಟ್‌ಬಾಲ್‌ ತಂಡದ ನಾಯಕರಾಗಿದ್ದರು. 1967ರಲ್ಲಿ ಫ‌ುಟ್‌ಬಾಲ್‌ಗೆ ವಿದಾಯ ಹೇಳಿದರು.

Advertisement

ನಿವೃತ್ತಿ ಬಳಿಕ ವಿವಿಧ ಫ‌ುಟ್‌ಬಾಲ್‌ ತಂಡಗಳ ತರಬೇತುದಾರನಾಗಿ ದುಡಿದ ಬ್ಯಾನರ್ಜಿ, ಒಟ್ಟು 54 ಟ್ರೋಫಿಗಳ ಗೆಲುವಿಗೆ ಕಾರಣರಾಗಿದ್ದರು. 1977ರಲ್ಲಿ ಮೋಹನ್‌ ಬಗಾನ್‌ ತಂಡ ಇವರದೇ ಮಾರ್ಗದರ್ಶನದಲ್ಲಿ ನ್ಯೂಯಾರ್ಕ್‌ ಕಾಸ್ಮೋಸ್‌ ಎದುರಿನ ಪಂದ್ಯವನ್ನು 2-2ರಿಂದ ಡ್ರಾ ಮಾಡಿ ಕೊಂಡದ್ದು ದೊಡ್ಡ ಸಾಧನೆಯಾಗಿತ್ತು. 1970ರಲ್ಲಿ ಬ್ಯಾನರ್ಜಿ ಮತ್ತು ಜಿ.ಎಂ. ಬಾಷಾ ಭಾರತ ತಂಡದ ಜಂಟಿ ತರಬೇತುದಾರರಾದ ವೇಳೆ ಬ್ಯಾಂಕಾಕ್‌ ಏಶ್ಯಾಡ್‌ನ‌ಲ್ಲಿ ತಂಡಕ್ಕೆ ಕಂಚಿನ ಪದಕ ಒಲಿದಿತ್ತು. ಭಾರತದಲ್ಲಿ ಫ‌ುಟ್‌ಬಾಲ್‌ ತನ್ನ ಉತ್ತುಂಗವನ್ನು ಕಂಡದ್ದು ಪಿ.ಕೆ. ಬ್ಯಾನರ್ಜಿ ಅವರ ಕಾಲಾವಧಿಯಲ್ಲಿ ಎಂಬುದು° ಮರೆಯುವಂತಿಲ್ಲ. ಆದರೆ ಅವರೆಂದೂ ಭಾರತದ ದೈತ್ಯ ತಂಡಗಳಾದ ಮೋಹನ್‌ ಬಗಾನ್‌ ಮತ್ತು ಈಸ್ಟ್‌ ಬೆಂಗಾಲ್‌ ಪರ ಆಡಲಿಲ್ಲ. ಬದಲು ಈಸ್ಟರ್ನ್ ರೈಲ್ವೇ ತಂಡವನ್ನೇ ಪ್ರತಿನಿಧಿಸಿದರು.

ಪುತ್ರಿಯರಾದ ಪೌಲಾ, ಪೂರ್ಣ, ತೃಣಮೂಲ ಕಾಂಗ್ರೆಸ್‌ನ ಲೋಕಸಭಾ ಸದಸ್ಯರಾಗಿರುವ ಸಹೋದರ ಪ್ರಸುನ್‌ ಬ್ಯಾನರ್ಜಿ ಅವರನ್ನು ಪಿ.ಕೆ. ಬ್ಯಾನರ್ಜಿ ಅಗಲಿದ್ದಾರೆ.

ಏಶ್ಯದ ಏಕೈಕ ಫ‌ುಟ್ಬಾಲಿಗ
ಫ‌ುಟ್‌ಬಾಲ್‌ ಸಾಧನೆಗಾಗಿ ಪಿ.ಕೆ. ಬ್ಯಾನರ್ಜಿ ಅವರಿಗೆ ಐಎಫ್ಎಫ್ಎಚ್‌ಎಸ್‌ ವತಿಯಿಂದ 20ನೇ ಶತಮಾನದ ಶ್ರೇಷ್ಠ ಆಟಗಾರ ಗೌರವ ನೀಡಲಾಗಿತ್ತು. 2004ರಲ್ಲಿ ಫಿಫಾದ ಆರ್ಡರ್‌ ಆಫ್ ಮೆರಿಟ್‌ ಅತ್ಯುನ್ನತ ಪ್ರಶಸ್ತಿಯೂ ಒಲಿದಿತ್ತು. 1961ರಲ್ಲಿ ಅರ್ಜುನ ಪ್ರಶಸ್ತಿ, 1990ರಲ್ಲಿ ಪದ್ಮಶ್ರೀ ಗೌರವಕ್ಕೆ ಭಾಜನರಾಗಿದ್ದರು. ಫೇರ್‌ ಪ್ಲೇ ಪ್ರಶಸ್ತಿ ಪಡೆದ ಏಶ್ಯದ ಏಕಮಾತ್ರ ಫ‌ುಟ್ಬಾಲಿಗ ಎನ್ನುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next