ಮಣಿಪಾಲ: ಕನ್ನಡ ಚಲನಚಿತ್ರ ಇಂಡಸ್ಟ್ರಿಯ ಬಹು ಬೇಡಿಕೆಯ ನಟಿ ಹರಿಪ್ರಿಯಾ ಅವರು ತಮ್ಮ ಅಭಿಮಾನಿಗಳಿಗೆ ಮತ್ತು ಕನ್ನಡಿಗರಿಗೆ ಲಿಖೀತ ಪತ್ರವೊಂದನ್ನು ಬರೆದಿದ್ದಾರೆ. ಅದರಲ್ಲಿ ತಮ್ಮ ಕನ್ನಡ ಭಾಷಾ ಪ್ರೇಮದ ಕುರಿತಾಗಿ ವಿಸ್ಕೃತವಾಗಿ ಹೇಳಿದ್ದಾರೆ. ಇತ್ತೀಚೆಗೆ ಅವರ ಕೆಲವು ಪೋಸ್ಟ್ಗಳಿಗೆ ಅಭಿಮಾನಿಗಳು “ಕನ್ನಡದಲ್ಲೇ ನೀವು ಕಾಮೆಂಟ್ ಮಾಡಬೇಕು’ ಎಂದಿದ್ದಕ್ಕೆ ಹರಿಪ್ರಿಯಾ ಇಲ್ಲಿ ಸ್ಪಷ್ಟನೆ ರೂಪದಲ್ಲಿ ಪತ್ರ ಬರೆದಿದ್ದಾರೆ. ಅವರ ಪತ್ರ ಹೀಗಿದೆ.
ಎಲ್ಲರಿಗೂ ನಮಸ್ಕಾರ
ಈ ಪತ್ರದಲ್ಲಿ ಕೆಲವು ಸಂಗತಿಗಳನ್ನು ಸ್ಪಷ್ಟ ಪಡಿಸಬೇಕೆಂದುಕೊಂಡಿದ್ದೇನೆ.
ನನಗೆ ಕನ್ನಡ ಮಾತನಾಡಲು, ಬರೆಯಲು, ಓದಲು ತುಂಬಾ ಚೆನ್ನಾಗಿ ಬರುತ್ತದೆ. ಇದು ನನ್ನ ಬರಹ (ನನ್ನ ಅಕ್ಷರಗಳು ನಿಮಗೆ ಇಷ್ಟವಾಗಿದೆ ಅಂದುಕೊಂಡಿದ್ದೇನೆ. ನನ್ನ ಬರವಣಿಗೆಗೆ ಹೆಚ್ಚುವರಿ ಅಂಕಗಳು ಲಭಿಸುತ್ತಿತ್ತು.) ಕನ್ನಡ ಭಾಷೆಯ ಮೇಲೆ ಅಪಾರ ಪ್ರೇಮ ನನಗಿದೆ. ತುಂಬು ಹೃದಯದ ಗೌರವವಿದೆ. ಹಾಗೆಯೇ ಕನ್ನಡಾಭಿಮಾನಿಗಳ ಮೇಲೆ ಸಾಕಷ್ಟು ಪ್ರೀತಿ, ನಂಬಿಕೆ, ವಿಶ್ವಾಸವಿದೆ. ಯಾವುದೇ “Industry backgroundʼ ಇಲ್ಲದೇ ಬಂದವಳನ್ನು ನೀವು ನನ್ನ ಕೆಲಸಗಳನ್ನು ನೋಡಿ ಇಷ್ಟಪಟ್ಟು ಅಭಿಮಾನಿಸಿದ್ದೀರಿ. ಖಂಡಿತವಾಗಿಯೂ ನನ್ನ ಗೆಲುವಿಗೆ ಪ್ರತಿ ಹೆಜ್ಜೆಯಲ್ಲೂ ನಿಮ್ಮೆಲರ ಪಾಲು ದೊಡ್ಡದು, ನನ್ನ ಅನಂತ ವಂದನೆಗಳು.
ಕೆಲವು ಅಭಿಮಾನಿಗಳು, ನಾನು ಮಾಡುವ ಪೋಸ್ಟ್ಗಳಿಗೆ ಕಾಮೆಂಟ್ ಮಾಡುವಾಗ ಕನ್ನಡಲ್ಲಿ ಬರೆಯಿರಿ ಎಂದು ಹೇಳುತ್ತಾರೆ. ನನ್ನ “ಇನ್ಬಾಕ್ಸ್’ಗೆ ಕೂಡ ಕೆಲವು ಸಂದೇಶಗಳು ಬರುತ್ತವೆ. ಆದರೆ ನಾನು ಇಂಗ್ಲಿಷ್ನಲ್ಲಿ ಯಾಕೆ ಪೋಸ್ಟ್ ಮಾಡುತ್ತೇನೆಂದರೆ ನನಗೆ ಕನ್ನಡ ಅಭಿಮಾನಿಗಳ ಜತೆಗೆ ತೆಲುಗು, ತಮಿಳು ಹಾಗೂ ಮಲಯಾಳಂ ಅಭಿಮಾನಿಗಳೂ ಇದ್ದಾರೆ. ಪೋಸ್ಟ್ ಮಾಡುವ ಮೂಲ ಉದ್ದೇಶ ಎಲ್ಲರಿಗೂ ನಾನು ಹೇಳಲು ಹೊರಟಿರುವುದು ಮುಟ್ಟಲಿ ಎಂಬ ಕಾರಣ ಮಾತ್ರ. ಎಲ್ಲರಿಗೂ ಅರ್ಥವಾಗಲಿ ಎಂದು. ಹಾಗೆಯೇ ಫೋನ್ನಲ್ಲಿ ಕನ್ನಡ ಬರೆಯುವಾಗ, ಕೆಲವು ಒತ್ತಕ್ಷರಗಳು, ದೀರ್ಘಗಳು ತಪ್ಪಾಗಿರುವುದು ಇತರ ಪೋಸ್ಟ್ಗಳಲ್ಲಿ ನಾನು ಗಮನಿಸಿದ್ದೇನೆ.
ಹಾಗೆ ನಾವು ಎಲ್ಲೋ ಶೋಟಿಂಗ್ ಹಾಗೂ ಟ್ರಾವೆಲ್ ಮಾಡುವಾಗ ದೀರ್ಘ ಕಾಲ ಟೈಪ್ ಮಾಡಲು ಸಮಯವಿರುವುದಿಲ್ಲ. ಈ ಎಲ್ಲಾ “ಪ್ರಾಕ್ಟಿಕಲ್ ‘ ಕಾರಣಗಳಿಂದ ನಾನು ಕನ್ನಡದಲ್ಲಿ ಪೋಸ್ಟ್ ಮಾಡಲು ಆಗುತ್ತಿಲ್ಲ. ನೀವು ನನ್ನನ್ನು ಅರ್ಥಮಾಡಿಕೊಳ್ಳುತ್ತೀರೆಂದುಕೊಂಡಿದ್ಧೇನೆ.ಸದಾ ನಿಮ್ಮ ಪ್ರೀತಿ, ಪ್ರೋತ್ಸಾಹ, ವಿಶ್ವಾಸ ಮತ್ತು ಆರ್ಶೀವಾದ ಇರಬೇಕು ಎಂದು ವಿನಂತಿಸಿಕೊಳ್ಳುತ್ತೇನೆ.
ಇಂತಿ ನಿಮ್ಮ ಪ್ರೀತಿಯ ಕನ್ನಡತಿ
ಹರಿಪ್ರಿಯಾ