Advertisement

5ರಂದು ಭದ್ರೆಗೆ ಭಾರತೀಯ ರೈತ ಒಕ್ಕೂಟದಿಂದ ಬಾಗಿನ

10:34 AM Sep 02, 2019 | Team Udayavani |

ದಾವಣಗೆರೆ: ಚಿಕ್ಕಮಗಳೂರು ಜಿಲ್ಲೆ ಲಕ್ಕವಳ್ಳಿಯ ಭದ್ರಾ ಜಲಾಶಯಕ್ಕೆ ಸೆ.5 ರಂದು ಬಾಗಿನ ಅರ್ಪಿಸಲಾಗುವುದು ಎಂದು ಭಾರತೀಯ ರೈತ ಒಕ್ಕೂಟ(ಭದ್ರಾ ಶಾಖೆ) ಪ್ರಧಾನ ಕಾರ್ಯದರ್ಶಿ ಎಚ್.ಆರ್‌. ಲಿಂಗರಾಜ್‌ ಶಾಮನೂರು ತಿಳಿಸಿದ್ದಾರೆ.

Advertisement

ದಾವಣಗೆರೆ ಜಿಲ್ಲೆಯ ಭದ್ರಾ ಅಚ್ಚುಕಟ್ಟುದಾರರು ಒಳಗೊಂಡಂತೆ ಸರ್ವ ಜನರ ಜೀವನಾಡಿಯಾಗಿರುವ ಭದ್ರಾ ಜಲಾಶಯ ಭರ್ತಿಯಾಗಿದೆ. ಪ್ರತಿ ವರ್ಷದ ಸಂಪ್ರದಾಯದಂತೆ ತಾಯಿ ಭದ್ರೆಗೆ ಬಾಗಿನ ಅರ್ಪಿಸಿ, ಪೂಜೆ ನೆರವೇರಿಸಲಾಗುವುದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಬೆಳಗ್ಗೆ 11ಕ್ಕೆ ಭಾರತೀಯ ರೈತ ಒಕ್ಕೂಟದ ಗೌರವ ಅಧ್ಯಕ್ಷರಾದ, ಶಾಸಕ ಎಸ್‌.ಎ. ರವೀಂದ್ರನಾಥ್‌ ನೇತೃತ್ವದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ್‌, ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೊ| ಸಿ. ನರಸಿಂಹಪ್ಪ, ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸುವರು. ಜಿಲ್ಲೆಯ ರೈತರು ಸ್ವಪ್ರೇರಣೆಯಿಂದ ವಾಹನ, ರೊಟ್ಟಿ-ಬುತ್ತಿಯೊಂದಿಗೆ ಆಗಮಿಸುವಂತೆ ಮನವಿ ಮಾಡಿದರು.

ಭದ್ರಾ ಜಲಾಶಯ ತುಂಬಿದ್ದು ಈಚೆಗೆ ನಾಲೆಯಲ್ಲಿ ನೀರು ಹರಿಸಲಾಗುತ್ತಿದೆ. ಜಲಾಶಯದಲ್ಲಿ 155 ಅಡಿ ನೀರು ಇದ್ದಾಗಲೇ ಭತ್ತಕ್ಕೆ ನೀರು ಹರಿಸುವಂತೆ ಕಾಡಾ ಸಮಿತಿಗೆ ಮನವಿ ಮಾಡಿಕೊಂಡರೂ ಜಲಾಶಯ ತುಂಬುವುದಿಲ್ಲ ಎಂದು ನಾಲೆಯಲ್ಲಿ ನೀರು ಹರಿಸಲಿಲ್ಲ. ಕಾಡಾ ಸಮಿತಿ ಅಚ್ಚುಕಟ್ಟುದಾರರು ಮತ್ತು ರೈತರನ್ನ ಸದಾ ಕಾಡುವ ಸಮಿತಿ ಆಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಭದ್ರಾ ಜಲಾಶಯದಲ್ಲಿ 140 ಅಡಿ ನೀರಿದ್ದ ಸಂದರ್ಭದಲ್ಲೇ ಭತ್ತಕ್ಕೆ ನೀರು ನೀಡಲಾಗಿದೆ. ರೈತರು, ಅಚ್ಚುಕಟ್ಟು ದಾರರ ಬಗ್ಗೆ ಕಾಳಜಿ ವಹಿಸದ ಅಧಿಕಾರಿಗಳು ಕೈಗಾರಿಕಾ ಲಾಬಿಗೆ ಮಣಿದು, ಅವರು ಬಯಸಿದಾಗ ಕುಡಿಯುವ ನೀರಿನ ನೆಪದಲ್ಲಿ ನದಿಗೆ ಹರಿಸುತ್ತಾರೆ. ರಾಜ್ಯ ಸರ್ಕಾರ ಇಂತದ್ದಕ್ಕೆ ಕಡಿವಾಣ ಹಾಕಬೇಕು. ನೀರು ಪೋಲು ತಡೆಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

Advertisement

ಭದ್ರಾ ಅಚ್ಚುಕಟ್ಟಿನಲ್ಲಿ ಶೇ.60 ರಷ್ಟು ಭತ್ತದ ನಾಟಿ ಕಾರ್ಯ ನಡೆದಿದೆ. 90 ದಿನಗಳಲ್ಲಿ ಇಳುವರಿ ಬರುವಂತಹ ಆರ್‌ಎನ್‌ಆರ್‌, 64 ತಳಿಯನ್ನೇ ಹೆಚ್ಚಾಗಿ ಬಳಸಲಾಗಿದೆ. ನಾಟಿ ಮಾಡಿದಂತಹ ಭತ್ತ ನವೆಂಬರ್‌ನಲ್ಲಿ ಕಾಳು ಕಟ್ಟುವ ಹಂತಕ್ಕೆ ಬರುತ್ತದೆ. ಶೀತಕ್ಕೆ ಸಿಲುಕುವುದರಿಂದ ಇಳುವರಿ ಕಡಿಮೆ ಆಗಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಒಕ್ಕೂಟದ ಶಾನಭೋಗ್‌ ನಾಗರಾಜ ರಾವ್‌ ಕೊಂಡಜ್ಜಿ, ಮಹೇಶ್‌ ಕುಂದು ವಾಡ, ಉಜ್ಜಣ್ಣ ಬಿ. ಕಲ್ಪನಹಳ್ಳಿ, ಎ.ಎಂ. ಮಂಜುನಾಥ್‌, ಅಣ್ಣಪ್ಪ ಕುಂದುವಾಡ, ಹನುಮಂತಪ್ಪ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next