ವಾಷಿಂಗ್ಟನ್: ಮೈಕೊರೆಯುವಂತಹ ಚಳಿಗಾಳಿ, ಹಿಮಪಾತಕ್ಕೆ ಸಿಲುಕಿ ಇತ್ತೀಚೆಗೆ ಕೆನಡಾ/ಅಮೆರಿಕದ ಗಡಿಭಾಗದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದ ನಾಲ್ವರು ಭಾರತೀಯರ ಗುರುತು ಪತ್ತೆ ಹಚ್ಚಲಾಗಿದೆ ಎಂದು ಕೆನಡಾದ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಭಾರತ: 24ಗಂಟೆಯಲ್ಲಿ 2.51 ಲಕ್ಷ ಕೋವಿಡ್ ಪ್ರಕರಣ ಪತ್ತೆ, ಪಾಸಿಟಿವಿಟಿ ದರ ಶೇ.16
ಈ ಭಾರತೀಯ ಕುಟುಂಬ ಕಾನೂನು ಬಾಹಿರವಾಗಿ ಮಧ್ಯವರ್ತಿಗಳ ಸಲಹೆಯಂತೆ ಗಡಿಯನ್ನು ದಾಟಿದ್ದು, ರಾತ್ರಿ ವೇಳೆ ಮೈನಸ್ 36 ಡಿಗ್ರಿ ಸೆಲ್ಸಿಯಸ್ ಮೈಕೊರೆಯುವಂತಹ ಚಳಿಗಾಳಿ, ಹಿಮಪಾತಕ್ಕೆ ಸಿಲುಕಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದರು.
ಜನವರಿ 19ರಂದು ಮ್ಯಾನಿಟೋಬಾ ಸಮೀಪದ ಎಮರ್ಸನ್ ಪ್ರದೇಶದಲ್ಲಿ ಅಮೆರಿಕವನ್ನು ಅಕ್ರಮವಾಗಿ ಗಡಿಭಾಗದ ಮೂಲಕ ಒಳಪ್ರವೇಶಿಸುವ ವೇಳೆ ಭಾರತೀಯ ಮೂಲದ ಜಗದೀಶ್ ಬಲ್ ದೇವ್ ಭಾಯಿ ಪಟೇಲ್ (39), ಪತ್ನಿ ವೈಶಾಲಿಬೆನ್ ಜಗದೀಶ್ ಕುಮಾರ್ ಪಟೇಲ್ 37ವರ್ಷ), ವಿಹಾಂಗಿ ಜಗದೀಶ್ ಕುಮಾರ್ (11ವರ್ಷ) ಮತ್ತು ಧಾರ್ಮಿಕ್ ಜಗದೀಶ್ ಕುಮಾರ್ (3ವರ್ಷ) ಭಾರೀ ಚಳಿ, ಹಿಮಪಾತ ತಾಳಲಾರದೆ ಸಾವನ್ನಪ್ಪಿರುವುದಾಗಿ ಕೆನಡಾದ ಅಧಿಕಾರಿಗಳು ವಿವರಿಸಿದ್ದಾರೆ.
ಪಟೇಲ್ ಕುಟುಂಬ ಗುಜರಾತ್ ನ ಕಾಲೋಲ್ ನ ದಿಂಗುಚಾ ಗ್ರಾಮದವರಾಗಿದ್ದಾರೆ ಎಂದು ವರದಿ ತಿಳಿಸಿದೆ. ಇದಕ್ಕೂ ಮುನ್ನ ಕೆನಡಾ ಅಧಿಕಾರಿಗಳು, ಹಿಮಪಾತ, ಚಳಿಗಾಳಿಗೆ ಸಿಲುಕಿ ಭಾರತೀಯ ಮೂಲದ ಪುರುಷ, ಮಹಿಳೆ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರ ಶವ ಪತ್ತೆಯಾಗಿರುವುದಾಗಿ ತಿಳಿಸಿದ್ದರು.