Advertisement

ದೇಶದ ಆರ್ಥಿಕ ಸ್ಥಿತಿ ಚೇತರಿಕೆ: ಕೇಂದ್ರ ಸಚಿವ ಡಿ.ವಿ.

11:37 PM Nov 05, 2020 | mahesh |

ಮಂಗಳೂರು: ಪ್ರಧಾನಿ ಮೋದಿ ಕೈಗೊಂಡ ದಿಟ್ಟ ಕ್ರಮಗಳಿಂದಾಗಿ ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದ್ದು, ಹದಗೆಟ್ಟಿದ್ದ ಆರ್ಥಿಕತೆಯೂ ಚೇತರಿಸುತ್ತಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ. ನಗರದ ಕೊಡಿಯಾಲ್ ಬೈಲಿನ ಟಿ.ವಿ. ರಮಣ್‌ ಪೈ ಸಭಾಂಗಣದಲ್ಲಿ ನಡೆದ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಒಟ್ಟು 11,002 ಕೋಟಿ ರೂ.ಗಳನ್ನು ಕೊರೊನಾ ಪರಿಹಾರವಾಗಿ ಬೇರೆ ಬೇರೆ ರಾಜ್ಯಗಳಿಗೆ ಕೊಡಲಾಗಿದೆ. 9,000 ಕೋಟಿ ರೂ. ಹೆಚ್ಚುವರಿ ಡ್ರಾ ಮಾಡಲು ಅನುಮತಿ ನೀಡಲಾಗಿದೆ ಎಂದರು.

Advertisement

ಕೊರೊನಾ ಸೋಂಕು ಭಾರತದಲ್ಲಿ ಕಡಿಮೆ
ಅಮೆರಿಕ, ಇಂಗ್ಲೆಂಡ್‌ಗಳಲ್ಲಿ 10 ಲಕ್ಷ ಜನಸಂಖ್ಯೆಯಲ್ಲಿ 25,000 ಮಂದಿಗೆ ಕೊರೊನಾ ಬಂದರೆ ಭಾರತದಲ್ಲಿ ಕೇವಲ 5,500 ಮಂದಿಗೆ ಮಾತ್ರ ಈ ಸೋಂಕು ತಗಲಿದೆ. ಸಾವಿನ ಸಂಖ್ಯೆ ಕೇವಲ 83 ಮಾತ್ರ. ದೇಶದಲ್ಲಿ ಈಗ 90 ಲಕ್ಷ ಬೆಡ್‌ಗಳು ಲಭ್ಯವಿದ್ದು, 12,000 ಕ್ವಾರಂಟೈನ್‌ ಸೆಂಟರ್‌, 3 ಲಕ್ಷ ವೆಂಟಿಲೇಟರ್‌ಗಳು, 2,000 ಪರೀಕ್ಷಾ ಕೇಂದ್ರಗಳಿವೆ. 10 ಕೋಟಿ ಜನರ ಪರೀಕ್ಷೆ ಮಾಡಲಾಗಿದೆ. 1,200 ಪಿಪಿಇ ಕಿಟ್‌ ಉತ್ಪಾದನಾ ಘಟಕಗಳಿದ್ದು, ಪ್ರತಿ ದಿನ 5 ಲಕ್ಷ ಪಿಪಿಇ ಕಿಟ್‌, 3 ಲಕ್ಷ ಎನ್‌- 95 ಮಾಸ್ಕ್ ತಯಾರಿಸಲಾಗುತ್ತದೆ ಎಂದು ಡಿ.ವಿ.ಎಸ್‌. ವಿವರಿಸಿದರು. ಇತರ ಪಕ್ಷಗಳು ಚುನಾವಣೆಗೆ ಮಾತ್ರ ಸೀಮಿತವಾಗಿದ್ದರೆ, ಬಿಜೆಪಿ ಅವುಗಳಿಗಿಂತ ಭಿನ್ನವಾಗಿದೆ. ಅದು ಹೇಗೆ ಎನ್ನುವುದು ಈ ಕಾರ್ಯಕಾರಿಣಿ ಸಭೆಯಿಂದ ವ್ಯಕ್ತವಾಗಿದೆ ಎಂದ ಗೌಡರು, ಪಕ್ಷದ ರಾಜ್ಯ ಅಧ್ಯಕ್ಷ ನಳಿನ್‌ ಅವರನ್ನು ಅಭಿನಂದಿಸಿದರು.

ಕಾಂಗ್ರೆಸ್‌ ಪಾಠ ಕಲಿತಿಲ್ಲ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತನಾಡಿ, ಪತ್ರಕರ್ತ ಅರ್ನಾಬ್‌ ಗೋಸ್ವಾಮಿಯನ್ನು ಬಂಧಿಸಿದ ಮಹಾರಾಷ್ಟ್ರ ಸರಕಾರದ ಕ್ರಮ  ಖಂಡನೀಯ. ಸಹವಾಸ ದೋಷದಿಂದ ಸನ್ಯಾಸಿಯೂ ಕೆಟ್ಟ ಎಂಬಂತೆ ಕಾಂಗ್ರೆಸ್‌ನ ಸಹವಾಸದಿಂದ ಶಿವಸೇನೆಯೂ ಕೆಟ್ಟು ಹೋಗಿರುವುದು ಮಹಾರಾಷ್ಟ್ರದಲ್ಲಿ ದೃಢವಾಗಿದೆ. ತಂದೆಯ ಮೌಲ್ಯ ಮತ್ತು ಸಿದ್ಧಾಂತಕ್ಕೆ ವಿರುದ್ಧವಾಗಿ ಅಲ್ಲಿನ ಮುಖ್ಯಮಂತ್ರಿ ವರ್ತಿಸುತ್ತಿದ್ದಾರೆ ಎಂದರು. ತುರ್ತು ಪರಿಸ್ಥಿತಿಯ ಕೆಟ್ಟ ನಿರ್ಧಾರದಿಂದ ಕಾಂಗ್ರೆಸ್‌ ಪಾಠ ಕಲಿತಿಲ್ಲ. ಕಾಂಗ್ರೆಸ್‌ ಮತ್ತು ಶಿವಸೇನೆಗೆ ಜನರು ಪಾಠ ಕಲಿಸಲಿದ್ದಾರೆ ಎಂದರು. ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಾಧನೆ ಮತ್ತು ಅಭಿವೃದ್ಧಿ ಕೆಲಸಗಳನ್ನು ಕಂಡು ಕರುಬುವ ಕಾಂಗ್ರೆಸ್‌, ಕಾಯ್ದೆ, ಕಾನೂನು, ನ್ಯಾಯಾಲಯದ ತೀರ್ಪುಗಳ ಬಗ್ಗೆ ಅನುಮಾನದ ಅಪಸ್ವರ ಎತ್ತುತ್ತಿದೆ ಎಂದು ಸಿ.ಟಿ. ರವಿ ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next