ನ್ಯೂಯಾರ್ಕ್ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಸಿದ್ಧತೆಯಲ್ಲಿ ವ್ಯಸ್ತರಾಗಿರುವಂತೆಯೇ ವಿಶ್ವ ಬ್ಯಾಂಕ್ ಭಾರತಕ್ಕೆ ಆಶಾದಾಯಕವಾಗಿರುವ ಆರ್ಥಿಕ ವರದಿಯನ್ನು ಬಹಿರಂಗಪಡಿಸಿದೆ.
ಭಾರತದ ಆರ್ಥಿಕತೆ 2018-19ರಲ್ಲಿ ಶೇ.7.2ರ ಬೆಳವಣಿಗೆಯನ್ನು ಕಂಡಿದೆ ಎಂದಿರುವ ವಿಶ್ವ ಬ್ಯಾಂಕ್, ಮುಂದಿನೆರಡು ಹಣಕಾಸು ವರ್ಷಗಳಲ್ಲಿ ಭಾರತದ ಆರ್ಥಿಕತೆ ಶೇ.7.5ರ ಬೆಳವಣಿಗೆಯನ್ನು ಕಾಣಲಿದೆ ಎಂದು ಅಂದಾಜಿಸಿದೆ.
ಭಾರತದ ಸೆಂಟ್ರಲ್ ಸ್ಟಾಟಿಸ್ಟಿಕಲ್ ಕಾರ್ಯಾಲಯ (ಸಿಎಸ್‌ಓ) 2018-19ರಲ್ಲಿ ಶೇ.6.8ರ ಆರ್ಥಿಕ ಪ್ರಗತಿಯನ್ನು ಕಾಣುವುದೆಂದು ಅಂದಾಜಿಸಿತ್ತು.
ಆದರೆ ವಿಶ್ವ ಬ್ಯಾಂಕ್ ವರದಿಯ ಪ್ರಕಾರ ಭಾರತದ ಆರ್ಥಿಕತೆ ಈ ಅಂದಾಜನ್ನು ಮೀರಿ ಶೇ.7.2ರ ಬೆಳವಣಿಗೆಯನ್ನು ಕಂಡಿದೆ ಎಂದು ತನ್ನ ವರದಿಯಲ್ಲಿ ಹೇಳಿರುವುದು ನೂತನ ಮೋದಿ ಸರಕಾರಕ್ಕೆ ಹೊಸ ಶಕ್ತಿ ನೀಡಿದೆ.
ವಿಶ್ವ ಬ್ಯಾಂಕ್‌ನ ಈ ವರದಿಯಿಂದಾಗಿ ಭಾರತ ವಿಶ್ವದಲ್ಲೇ ಅತೀ ವೇಗದ ಆರ್ಥಿಕ ಬೆಳವಣಿಗೆಯನ್ನು ಕಾಣುತ್ತಿರುವ ದೇಶವೆಂಬ ಸ್ಥಾನಮಾನವನ್ನು ಉಳಿಸಿಕೊಂಡಂತಾಗಿದೆ.
ಭಾರತದ ಆರ್ಥಿಕತೆಯು ವೇಗದ ಬೆಳವಣಿಗೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಅವಕಾಶ ಒದಗಿಸುವ ಹಣಕಾಸು ನೀತಿಯನ್ನು ಅನುಸರಿಸಬೇಕಿದ್ದು ಹಣದುಬ್ಬರ ವನ್ನು ಕಡಿಮೆ ಪ್ರಮಾಣದಲ್ಲಿ ಕಾಯ್ದುಕೊಳ್ಳಬೇಕಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.