Advertisement

ಭಾರತೀಯ ರಾಜತಾಂತ್ರಿಕ ಸಿಬ್ಬಂದಿಗೆ ಪಾಕ್‌ ಕಿರುಕುಳ

10:32 AM Jun 06, 2020 | mahesh |

ನವದೆಹಲಿ: ಗೂಢಚರ್ಯೆ ನಡೆಸಿದ ಅಪರಾಧದಲ್ಲಿ ಭಾರತದಲ್ಲಿದ್ದ ಇಬ್ಬರು ಪಾಕಿಸ್ತಾನ ರಾಜತಾಂತ್ರಿಕರನ್ನು ಭಾರತ ಉಚ್ಛಾಟಿಸಿದ್ದಕ್ಕೆ ಪ್ರತೀಕಾರವಾಗಿ ಇಸ್ಲಾಮಾಬಾದ್‌ನಲ್ಲಿರುವ ಭಾರತದ ರಾಜತಾಂತ್ರಿಕ ಅಧಿಕಾರಿಗಳಿಗೆ ಪಾಕಿಸ್ತಾನ ತೀವ್ರ ಕಿರುಕುಳ ಕೊಡಲು ಶುರು ಮಾಡಿದೆ. ಇದನ್ನು ಭಾರತ ತೀವ್ರವಾಗಿ ವಿರೋಧಿಸಿದೆ. ಭಾರತದಲ್ಲಿ ಗೂಢಚರ್ಯೆ ನಡೆಸುತ್ತಿದ್ದ ಇಬ್ಬರು ಅಧಿಕಾರಿಗಳನ್ನು ಮೇ 31ರಂದು ವಶಕ್ಕೆ ಪಡೆದು, ದೇಶ ಬಿಡುವಂತೆ ಆದೇಶ ನೀಡಲಾಗಿತ್ತು. ಅದೇ ದಿನದಿಂದಲೇ ಪಾಕಿಸ್ತಾನದಲ್ಲೂ ಭಾರತೀಯ ರಾಜತಾಂತ್ರಿಕರಿಗೆ ಕಿರುಕುಳ ಕೊಡಲಾರಂಭಿಸಲಾಗಿದೆ.

Advertisement

ಯಾವ ರೀತಿಯಲ್ಲಿ ಕಿರುಕುಳ?: ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ ಕಚೇರಿಯ ಹಿರಿಯ ಅಧಿಕಾರಿ ಗೌರವ್‌ ಅಹ್ಲುವಾಲಿಯಾ ಅವರ ಮೇಲೆ ಬೇಹುಗಾರಿಕೆ ಆರಂಭಿಸಲಾಯಿತು. ಅವರ ದೈನಂದಿನ ಚಟುವಟಿಕೆಗಳ ಮೇಲೂ ಕಣ್ಗಾವಲು ನೆಡಲಾಗಿದೆ. ಅವರ ಮನೆಯ ಸುತ್ತ ಕಾರುಗಳಲ್ಲಿ, ಬೈಕುಗಳಲ್ಲಿ ಗುಪ್ತಚರ ಇಲಾಖೆ ಅಧಿಕಾರಿಗಳನ್ನು ಕಾವಲಿಗೆ ನಿಯೋಜಿಸಲಾಗಿದೆ. ಅಹ್ಲುವಾಲಿಯಾ ಅವರು ಮನೆಯಿಂದ ಕಚೇರಿಗೆ ಹೊರಟರೆ ಆ ಕಾರುಗಳು, ಬೈಕುಗಳು ಅವರ ಕಾರನ್ನು ಹಿಂಬಾಲಿಸುತ್ತವೆ. ಇದನ್ನೆಲ್ಲಾ ಮೊಬೈಲ್‌ಗ‌ಳ ಮೂಲಕ ವಿಡಿಯೋ ಮಾಡಿರುವ ಹೈಕಮಿಷನ್‌ನ ಇತರ ಅಧಿಕಾರಿಗಳು ಆ ವಿಡಿಯೋಗಳನ್ನು ಭಾರತಕ್ಕೆ ಕಳುಹಿಸಿದ್ದಾರೆ.

ಭಾರತದ ಆಕ್ಷೇಪ: ಪಾಕಿಸ್ತಾನದ ನಡೆಯನ್ನು ತೀವ್ರವಾಗಿ ಆಕ್ಷೇಪಿಸಿರುವ ಭಾರತ, ಕೇವಲ ಪ್ರತೀಕಾರದ ಉದ್ದೇಶದಿಂದ ಇಂಥ ಕೆಲಸಗಳನ್ನು ಮಾಡುವುದು 1992ರಲ್ಲಿ ಉಭಯ ರಾಷ್ಟ್ರಗಳ ನಡುವೆ ಏರ್ಪಟ್ಟಿದ್ದ ರಾಜತಾಂತ್ರಿಕ ನೀತಿ ಸಂಹಿತೆಯ ಉಲ್ಲಂಘನೆ ಎಂದು ಭಾರತ ಹೇಳಿದೆ. ಯಾವುದೇ ಆಧಾರವಿಲ್ಲದೆ, ಕೇವಲ ಪ್ರತೀಕಾರ ಕಾರಣಕ್ಕಾಗಿ ಈ ರೀತಿ ನಡೆದುಕೊಳ್ಳುವುದು ಉಭಯ ದೇಶಗಳ ಸಂಬಂಧವನ್ನು ಮತ್ತಷ್ಟು ಹಾಳುಗೆಡವಲಿದೆ ಎಂದು ಭಾರತ ಎಚ್ಚರಿಸಿದೆ. ಪಾಕಿಸ್ತಾನಕ್ಕೆ ಸೂಕ್ತ ಪಾಠ ಕಲಿಸುವ ಉದ್ದೇಶದಿಂದ, ಭಾರತದಲ್ಲಿರುವ ಪಾಕಿಸ್ತಾನದ ಉಪ ಹೈಕಮೀಷನರ್‌ ಸಯ್ಯದ್‌ ಅಲಿ ಶಾ ಅವರ ಮೇಲೂ ಭಾರತ ಕಣ್ಗಾವಲು ನಿಯೋಜಿಸಿದೆ.

ಮಾರ್ಚ್‌ನಿಂದಲೇ ಶುರು
ಮಾ. 3ರಿಂದಲೇ ಪಾಕಿಸ್ತಾನದಲ್ಲಿರುವ ರಾಜತಾಂತ್ರಿಕ ಸಿಬ್ಬಂದಿಯ ಮೇಲೆ ಕಣ್ಗಾವಲು, ಹಿಂಬಾಲಿಕೆ ತಂತ್ರಗಳನ್ನು ಆರಂಭಿಸಲಾಗಿತ್ತು. ಮೊದಲಿಗೆ ಭಾರತೀಯ ಹೈಕಮಿಷನ್‌ನ ಕಾರ್ಯ ದರ್ಶಿಯೊಬ್ಬರನ್ನು ಐಎಸ್‌ಐ ಅಧಿಕಾರಿಗಳು ಹಿಂಬಾಲಿಸಿದ್ದರು. ಅದೇ ದಿನ ಮತ್ತೂಬ್ಬ ಅಧಿಕಾರಿಯನ್ನೂ ಪಾಕಿಸ್ತಾನದ ಅಧಿಕಾರಿಗಳು ಎಲ್ಲಿ ಹೋದರೂ ಹಿಂಬಾಲಿಸಿ ದ್ದರು. ಮಾರ್ಚ್‌ನಿಂದ ಇಲ್ಲಿಯವರೆಗೆ ಇಂಥ ಸುಮಾರು 13 ಪ್ರಕರಣಗಳನ್ನು ಭಾರತ ದಾಖಲು ಮಾಡಿಕೊಂಡು ಅದರ ವರದಿಯನ್ನು ಪಾಕಿಸ್ತಾನಕ್ಕೆ ಕಳುಹಿಸಿ ಈ ಕುರಿತಂತೆ ತನಿಖೆಯಾಗಬೇಕೆಂದು ಆಗ್ರಹಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next