ಲಂಡನ್: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಶುಕ್ರವಾರ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ತಮ್ಮ ಉಪನ್ಯಾಸದ ಸಂದರ್ಭದಲ್ಲಿ, ‘ಪ್ರಜಾಪ್ರಭುತ್ವಕ್ಕೆ ಅಗತ್ಯವಿರುವ ಸಾಂಸ್ಥಿಕ ಚೌಕಟ್ಟು ನಿರ್ಬಂಧಿತವಾಗುತ್ತಿದೆ ಮತ್ತು ಭಾರತೀಯ ಪ್ರಜಾಪ್ರಭುತ್ವದ ಮೂಲ ರಚನೆಯು ದಾಳಿಗೆ ಒಳಗಾಗುತ್ತಿದೆ’ ಎಂದು ಹೇಳಿದರು.
ಕೇಂಬ್ರಿಡ್ಜ್ ಜಡ್ಜ್ ಬ್ಯುಸಿನೆಸ್ ಸ್ಕೂಲ್ ನ (ಕೇಂಬ್ರಿಡ್ಜ್ ಜೆಬಿಎಸ್) ವಿಸಿಟಿಂಗ್ ಫೆಲೋ ಆಗಿರುವ ರಾಹುಲ್ ಗಾಂಧಿ ಅವರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳಿಗೆ ‘21ನೇ ಶತಮಾನದಲ್ಲಿ ಕೇಳಲು ಕಲಿಯುವುದು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
“ಭಾರತೀಯ ಪ್ರಜಾಪ್ರಭುತ್ವದ ಮೇಲೆ ಆಕ್ರಮಣವಾಗುತ್ತಿದೆ. ನಾವು ಪ್ರಜಾಪ್ರಭುತ್ವದ ಮೇಲಿನ ದಾಳಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಕಾಂಗ್ರೆಸ್ ಸಂಸದ ರಾಹುಲ್ ಹೇಳಿದರು. ಪ್ರತಿಪಕ್ಷ ನಾಯಕರ ಮೇಲೆ ಕಣ್ಣಿಡಲು ಸರ್ಕಾರವು ಪೆಗಾಸಸ್ ಅನ್ನು ಬಳಸಿದೆ ಎಂದು ಹೇಳಿದರು.
ಇದನ್ನೂ ಓದಿ:‘ನಿನಗಾಗಿ ಕಾಯುತ್ತಿದ್ದೇವೆ.’.; ಮೆಸ್ಸಿ ಸೂಪರ್ ಮಾರ್ಕೆಟ್ ಗೆ ದಾಳಿ ನಡೆಸಿದ ಬಂದೂಕುಧಾರಿಗಳು!
“ನಾನೇ ನನ್ನ ಫೋನ್ ನಲ್ಲಿ ಪೆಗಾಸಸ್ ಹೊಂದಿದ್ದೆ. ಹೆಚ್ಚಿನ ಸಂಖ್ಯೆಯ ರಾಜಕಾರಣಿಗಳ ಫೋನ್ ಗಳಲ್ಲಿ ಪೆಗಾಸಸ್ ಇತ್ತು. ಫೋನ್ ನಲ್ಲಿ ಮಾತನಾಡುವಾಗ ಜಾಗರೂಕರಾಗಿರಿ ಎಂದು ನನಗೆ ಹೇಳಿದ್ದಾರೆ” ಎಂದು ರಾಹುಲ್ ಗಾಂಧಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಹೇಳಿದರು.
ಮಾಧ್ಯಮಗಳು ಮತ್ತು ನ್ಯಾಯಾಂಗವನ್ನು ವಶಪಡಿಸಿಕೊಳ್ಳುವುದು, ನಿಯಂತ್ರಿಸುವುದು, ಕಣ್ಗಾವಲು, ಬೆದರಿಕೆ, ಅಲ್ಪಸಂಖ್ಯಾತರು, ದಲಿತರು ಮತ್ತು ಬುಡಕಟ್ಟು ಜನಾಂಗದವರ ಮೇಲೆ ದಾಳಿ ಮತ್ತು ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ ಎಂದು ರಾಹುಲ್ ಗಾಂಧಿ ತಮ್ಮ ಉಪನ್ಯಾಸದಲ್ಲಿ ಆರೋಪಿಸಿದರು.