ಮಲ್ಪೆ: ಭಾರತೀಯ ಶಾಸ್ತ್ರೀಯ ನೃತ್ಯಕಲೆಗಳು ವಿಶ್ವದ ಇತರೆಲ್ಲಾ ನೃತ್ಯಕಲೆಗಳಿಗೆ ಆದರ್ಶ ನೀಯ ಕಲಾ ಪ್ರಾಕಾರವಾಗಿದೆ. ಇದರಲ್ಲಿ ಅಡಕವಾಗಿರುವ ರೇಖಾ ವಿನ್ಯಾಸ, ವರ್ಣಗಾರಿಕೆ, ಶಿಲ್ಪಕಲಾ ರೂಪಲಾವಣ್ಯ, ನೃತ್ಯಪಟುವಿನ ಭಾವಪೂರ್ಣ ಅಭಿನಯ, ಹಿನ್ನೆಲೆಯ ಸಂಗೀತ, ಪುರಾಣ ಜ್ಞಾನ, ಜಾನಪದ ಸೊಗಡು ಇವೆಲ್ಲವೂ ಕೂಡ ವ್ಯಕ್ತಿತ್ವದ ಪರಿಪೂರ್ಣತೆಗೆ ಮಾರ್ಗದರ್ಶಿಗಳಾಗಿವೆ ಎಂದು ರೋಟರಿ ಜಿಲ್ಲಾ ಸಹಾಯಕ ತರಬೇತುದಾರ ಸುಬ್ರಹ್ಮಣ್ಯ ಬಾಸ್ರಿ ಅವರು ಹೇಳಿದರು.
ಉಡುಪಿ ಕನ್ನರ್ಪಾಡಿಯ ಶ್ರೀ ಕೃಷ್ಣ ಕಲಾ ಕುಟೀರದ ಎರಡನೇ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಪರಿಶುದ್ಧ ಹಾಗೂ ಪ್ರಾವಿತ್ರ್ಯವನ್ನು ಹೊಂದಿರುವ ಶಾಸ್ತ್ರೀಯ ನೃತ್ಯಕಲಾ ಮಾಧ್ಯಮ ಭದ್ರವಾದ ಅಂತಃಸತ್ವವನ್ನು ಹೊಂದಿವೆ. ಹಾಗಾಗಿ ವಿದೇಶಿಯರು ನಮ್ಮ ದೇಶವನ್ನು ಸಂಪೂರ್ಣ ಕೊಳ್ಳೆಹೊಡೆದರೂ ನಮ್ಮ ಶ್ರೀಮಂತ ಕಲೆ ಮತ್ತು ಸಂಸ್ಕೃತಿಯ ಅಂತಃಸತ್ವವನ್ನು ದೋಚಲು ಸಾಧ್ಯವಾಗಿಲ್ಲ ಎಂದರು.
ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಮಹಿಳಾ ಸಮಾಜದ ಸುವರ್ಣೋತ್ಸವ ಭವನದಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಉಡುಪಿ ಮಹಿಳಾ ಸಮಾಜದ ಅಧ್ಯಕ್ಷೆ ಜಯಂತಿ ಶಿವಾಜಿ ಶೆಟ್ಟಿ, ಕೋಶಾಧಿಕಾರಿ ಪ್ರೇಮಲತಾ ಸತೀಶ್ಚಂದ್ರ ಹೆಗ್ಡೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಶ್ರೀ ಕೃಷ್ಣ ಕಲಾಕುಟೀರದ ನಿರ್ದೇಶಕಿ ವಿದು ನಾಗರೇಖಾ ಜಿ. ರಾವ್ ಸ್ವಾಗತಿಸಿದರು, ನಿರ್ದೇಶಕ ಡಾ| ಗುರುಪ್ರಸಾದ್ ರಾವ್ ಕೆ .ಆರ್ ವಂದಿಸಿದರು. ಸುಶ್ಮಾ ದೇವಾಡಿಗ ನಿರೂಪಿಸಿದರು.