Advertisement
ಇಂಗ್ಲೆಂಡಿನ 205 ರನ್ನುಗಳಿಗೆ ಜವಾಬು ನೀಡುತ್ತಿರುವ ಭಾರತ ದ್ವಿತೀಯ ದಿನದಾಟದ ಅಂತ್ಯಕ್ಕೆ 7 ವಿಕೆಟಿಗೆ 294 ರನ್ ಗಳಿಸಿದೆ. 89 ರನ್ ಮುನ್ನಡೆ ಹೊಂದಿದೆ. ಇದು ನೂರೈವತ್ತಕ್ಕೆ ಏರಿದರೂ ಟೀಮ್ ಇಂಡಿಯಾ ಸತತ 3ನೇ ಜಯಭೇರಿ ಮೊಳಗಿಸುವುದು ನಿಶ್ಚಿತ.
ಭಾರತ ಒಂದು ಹಂತದಲ್ಲಿ 146ಕ್ಕೆ 6 ವಿಕೆಟ್ ಕಳೆದು ಕೊಂಡು ಪರದಾಡುತ್ತಿದ್ದಾಗ ರಿಷಭ್ ಪಂತ್ ರಕ್ಷಣೆಗೆ ನಿಂತರು. ಇವರಿಗೆ ವಾಷಿಂಗ್ಟನ್ ಸುಂದರ್ ಅಮೋಘ ಬೆಂಬಲ ಒದಗಿಸಿದರು. 26 ಓವರ್‌ಗಳಲ್ಲಿ 7ನೇ ವಿಕೆಟಿಗೆ 113 ರನ್ ಒಟ್ಟುಗೂಡಿತು. ಇಂಗ್ಲೆಂಡಿನ ಮೇಲುಗೈ ಯೋಜನೆಯೆಲ್ಲ ತಲೆ ಕೆಳಗಾಯಿತು. ಎಡಗೈ ಬ್ಯಾಟ್ಸ್‌ಮನ್ ಪಂತ್ ಕೊಡುಗೆ ಅಮೋಘ 101 ರನ್. ರೂಟ್ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟುವ ಮೂಲಕ ಅವರು ಶತಕ ಸಂಭ್ರಮವನ್ನಾಚರಿಸಿದರು. ಇದು ಅವರ 3ನೇ ಟೆಸ್ಟ್ ಶತಕ. ತವರಲ್ಲಿ ಮೊದಲನೆಯದು. 118 ಎಸೆತ ನಿಭಾಯಿಸಿದ ಪಂತ್ 13 ಬೌಂಡರಿ, 2 ಸಿಕ್ಸರ್ ಬಾರಿಸಿ ಮೊಟೆರಾದಲ್ಲಿ ಮೆರೆದಾಡಿದರು. ಅವರ ಮೊದಲ ಅರ್ಧ ಶತಕ 82 ಎಸೆತಗಳಲ್ಲಿ ಬಂದರೆ, ಮುಂದಿನ 50 ರನ್ ಕೇವಲ 33 ಎಸೆತಗಳಲ್ಲಿ ಸಿಡಿಯಿತು.
Related Articles
Advertisement
ಪೂಜಾರ ಕೇವಲ 17 ರನ್ ಮಾಡಿದರೆ, ಕ್ಯಾಪ್ಟನ್ ಕೊಹ್ಲಿ ಖಾತೆಯನ್ನೇ ತೆರೆಯಲಿಲ್ಲ. ರಹಾನೆ 27, ಅಶ್ವಿನ್ 13 ರನ್ ಮಾಡಿ ವಾಪಸಾದರು. ಇಂಗ್ಲೆಂಡ್ ಪರ ಆ್ಯಂಡರ್ಸನ್ 3, ಸ್ಟೋಕ್ಸ್ ಮತ್ತು ಲೀಚ್ ತಲಾ 2 ವಿಕೆಟ್ ಉರುಳಿಸಿದರು.
8 ಸೊನ್ನೆ ಸುತ್ತಿದ ನಾಯಕ ವಿರಾಟ್ ಕೊಹ್ಲಿವಿರಾಟ್ ಕೊಹ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ರನ್ ಖಾತೆ ತೆರೆಯಲು ವಿಫಲರಾದರು. 8 ಎಸೆತ ಎದುರಿಸಿ ಸ್ಟೋಕ್ಸ್ ಎಸೆತದಲ್ಲಿ ಕೀಪರ್ ಫೋಕ್ಸ್‌ಗೆ ಕ್ಯಾಚ್ ನೀಡಿ ವಾಪಸಾದರು. ಇದರೊಂದಿಗೆ ಮೊದಲ ದಿನದ “ಜಗಳ’ಕ್ಕೆ ಸ್ಟೋಕ್ಸ್ ಸೇಡು ತೀರಿಸಿಕೊಂಡರು.
ಆದರೆ ಇಲ್ಲಿ ವಿಷಯ ಬೇರೆಯೇ ಇದೆ. ಇದು ಟೆಸ್ಟ್ ನಾಯಕನಾಗಿ ಕೊಹ್ಲಿ ಸುತ್ತಿದ 8ನೇ ಸೊನ್ನೆ. ಭಾರತದ ನಾಯಕನೊಬ್ಬ ಅತ್ಯಧಿಕ ಸಲ ಖಾತೆ ತೆರೆಯದೆ ಔಟಾದ ಜಂಟಿ ನಿದರ್ಶನ ಇದಾಗಿದೆ. ಕೊಹ್ಲಿ ಇಲ್ಲಿ ಧೋನಿ ದಾಖಲೆಯನ್ನು ಸರಿದೂಗಿಸಿದರು. ಕೊಹ್ಲಿ ಟೆಸ್ಟ್ ಸರಣಿಯೊಂದರಲ್ಲಿ 2 ಸಲ ಸೊನ್ನೆಗೆ ಔಟಾದ 2ನೇ ನಿದರ್ಶನವೂ ಇದಾಗಿದೆ. ಇದೇ ಸರಣಿಯ ಚೆನ್ನೈನ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲೂ ಕೊಹ್ಲಿ ರನ್ ಗಳಿಸಿರಲಿಲ್ಲ. ಅಂದಿನ ಯಶಸ್ಸು ಮೊಯಿನ್ ಅಲಿಗೆ ಲಭಿಸಿತ್ತು.
ಕೊಹ್ಲಿ ಮೊದಲ ಸಲ ಸರಣಿಯೊಂದರಲ್ಲಿ 2 ಸಲ ಸೊನ್ನೆ ಸುತ್ತಿದ್ದು ಕೂಡ ಇಂಗ್ಲೆಂಡ್ ವಿರುದ್ಧವೇ. ಅದು 2014ರ ಲಾರ್ಡ್ಸ್ ಮತ್ತು ಮ್ಯಾಂಚೆಸ್ಟರ್ ಪಂದ್ಯವಾಗಿತ್ತು. ಅಂದಿನ ಯಶಸ್ವಿ ಬೌಲರ್ ಲಿಯಮ್ ಪ್ಲಂಕೆಟ್ ಮತ್ತು ಜೇಮ್ಸ್ ಆ್ಯಂಡರ್ಸನ್.
ಬೆನ್ ಸ್ಟೋಕ್ಸ್ 5 ಸಲ ವಿರಾಟ್ ಕೊಹ್ಲಿ ವಿಕೆಟ್ ಉರುಳಿಸಿದರು. ಇದರೊಂದಿಗೆ ಸ್ಟೋಕ್ಸ್ ಟೆಸ್ಟ್‌ನಲ್ಲಿ ಓರ್ವ ಆಟಗಾರನನ್ನು ಅತೀ ಹೆಚ್ಚು ಸಲ ಔಟ್ ಮಾಡಿದಂತಾಯಿತು.