ಹೊಸದಿಲ್ಲಿ: ಭಾರತೀಯ ವೈದ್ಯಕೀಯ ಸಂಶೋಧನಾ ಕೌನ್ಸಿಲ್ (ಐಸಿಎಂಆರ್) ಹಾಗೂ ಹೈದರಾಬಾದ್‌ನ ಭಾರತ್ ಬಯೋಟೆಕ್ ಇಂಟರ್‌ನ್ಯಾಶನಲ್ ಲಿಮಿಟೆಡ್ (ಬಿಬಿಐಎಲ್) ಸಂಸ್ಥೆಗಳು ಪರಸ್ಪರ ಒಗ್ಗೂಡಿ, ಕೋವಿಡ್ ನಿಗ್ರಹಕ್ಕಾಗಿ ಸ್ವದೇಶಿ ಲಸಿಕೆಯೊಂದನ್ನು ಅಭಿವೃದ್ಧಿಪಡಿಸುವತ್ತ ಹೆಜ್ಜೆಯಿಟ್ಟಿವೆ.
ಐಸಿಎಂಆರ್‌ನ ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ ಡಾ| ರಮಣ ಆರ್. ಗಂಗಖೇಡ್ಕರ್ ಈ ವಿಷಯ ತಿಳಿಸಿದ್ದಾರೆ.
‘ಫೆಬ್ರವರಿಯಲ್ಲಿ ಕೇರಳದ ಕೋವಿಡ್ ಸೋಂಕಿತರಿಂದ ಸಂಗ್ರಹಿಸಲಾಗಿದ್ದ ಗಂಟಲ ದ್ರವದಿಂದ ಈ ವೈರಾಣುಗಳನ್ನು ಬೇರ್ಪಡಿಸಿ ಅವುಗಳನ್ನು ಪುಣೆಯಲ್ಲಿರುವ ಐಸಿಎಂಆರ್‌ನ ರಾಷ್ಟ್ರೀಯ ವೈರಾಲಜಿ ಸಂಸ್ಥೆಯಲ್ಲಿ (ಎನ್‌ಐವಿ) ಸಂಗ್ರಹಿಸಿ ಇಡಲಾಗಿದೆ.
ಲಸಿಕೆ ಕುರಿತ ಪ್ರಯೋಗಗಳಿಗೆ ಅದೇ ಮಾದರಿಗಳನ್ನು ಬಳಸಲಾಗುತ್ತದೆ ಹಾಗೂ ಆ ಎಲ್ಲಾ ಪ್ರಯೋಗಗಳು ಎನ್‌ಐವಿಯಲ್ಲೇ ನಡೆಯಲಿವೆ. ಭಾರತ್ ಬಯೋಟೆಕ್ ಸಂಸ್ಥೆಗಳು ಸಂಶೋಧನೆಗೆ ಸಹಾಯಕವಾಗುವ ವಿಚಾರಗಳತ್ತ ಗಮನಹರಿಸಿದರೆ, ಐಸಿಎಂಆರ್ ಸಂಸ್ಥೆ ಸಂಶೋಧನೆಗೆ ಬೇಕಾದ ತಂತ್ರಜ್ಞಾನ ಹಾಗೂ ವೈರಾಣುಗಳ ಸ್ಯಾಂಪಲ್‌ಗಳನ್ನು (ಸ್ಟ್ರೈನ್) ಭಾರತ್ ಬಯೋಟೆಕ್‌ಗೆ ನೀಡಲಿದೆ’ ಎಂದು ಅವರು ವಿವರಿಸಿದ್ದಾರೆ.
ಶೀಘ್ರ ಗತಿಯಲ್ಲಿ ಕಿಟ್ ಉತ್ಪಾದನೆ
ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವಂತೆಯೇ ಭಾರತದಲ್ಲೇ ಕಿಟ್ ತಯಾರಿಸುವ ಪ್ರಕ್ರಿಯೆಯೂ ವೇಗ ಪಡೆದಿದೆ.
ಪರೀಕ್ಷಾ ಕಿಟ್‌ಗಳಿಗಾಗಿ ಬೇರೆ ದೇಶಗಳನ್ನು ಅವಲಂಬಿಸುವುದನ್ನು ತಪ್ಪಿಸುವ ಉದ್ದೇಶದಿಂದ ಪುಣೆಯ ಮೈಲ್ಯಾಬ್ ಡಿಸ್ಕವರಿ ಸೊಲ್ಯೂಷನ್ಸ್ ಎಂಬ ಸಂಸ್ಥೆಯು ಸೇರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದೊಂದಿಗೆ ಕೈಜೋಡಿಸಿಕೊಂಡು ಸಮರೋಪಾದಿಯಲ್ಲಿ ಕಿಟ್ ತಯಾರಿಕೆ ಕೆಲಸವನ್ನು ಮಾಡುತ್ತಿದೆ.
ಏಪ್ರಿಲ್ ತಿಂಗಳಲ್ಲಿ ದಿನಕ್ಕೆ 20 ಸಾವಿರ ಪರೀಕ್ಷಾ ಕಿಟ್ ಗಳನ್ನು ಉತ್ಪಾದಿಸುತ್ತಿದ್ದ ಸಂಸ್ಥೆ ಈಗ ದಿನಕ್ಕೆ 2 ಲಕ್ಷ ಕಿಟ್ ತಯಾರಿಸುತ್ತಿದೆ. ಇದರ ಜತೆಗೆ ದಿಲ್ಲಿ, ಮುಂಬಯಿಯ ಕಂಪೆನಿಗಳು ಇದೇ ದಾರಿ ಅನುಸರಿಸುತ್ತಿವೆ.